ಮೂಡಲಗಿ: ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಭವನದಲ್ಲಿ ಬುಧವಾರ ಜರುಗಿದ ಬೆಳಗಾವಿಯ ಲೋಕಾಯುಕ್ತ ಅಧಿಕಾರಿಗಳ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ಐದು ಇಲಾಖೆಗಳ ಮೇಲೆ ದೂರುಗಳನ್ನು ನೀಡಿದರು.
ಮೂಡಲಗಿ ಪುರಸಭೆ, ಅರಭಾವಿ ಪಟ್ಟಣ ಪಂಚಾಯಿತಿ, ಕಂದಾಯ ಇಲಾಖೆ, ಉಪನೋಂದಣಿ ಕಚೇರಿ ಹಾಗೂ ತಾಲ್ಲೂಕು ಪಂಚಾಯಿತಿ ಕಚೇರಿಗಳ ಮೇಲೆ ಬಂದಿದ್ದ ದೂರುಗಳನ್ನು ಅಧಿಕಾರಿಗಳು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಉತ್ತರ ನೀಡಲು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಾಯುಕ್ತ ಡಿಎಸ್‌ಪಿ ಪುಷ್ಪಲತಾ, ‘ಲೋಕಾಯುಕ್ತ ಅಧಿಕಾರಿಗಳು ಪ್ರತಿ ತಾಲ್ಲೂಕಿನಲ್ಲಿ ಪ್ರತಿ ತಿಂಗಳು ಜನ ಸಂಪರ್ಕ ನಡೆಸಿ ಜನರ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತೇವೆ. ಸರ್ಕಾರಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಕೆಲಸ ಮಾಡಿಕೊಡದೆ ತೊಂದರೆ ನೀಡಿದರೆ ಮತ್ತು ಲಂಚ ಬೇಡಿಕೆ ಇಟ್ಟರೆ ಲೋಕಾಯುಕ್ತರಿಗೆ ನಿಗದಿತ ಫಾರ್ಮನಲ್ಲಿ ಸೂಕ್ತ ದಾಖಲೆಗಳೊಂದಿಗೆ ದೂರು ನೀಡಬೇಕು ಎಂದರು.
ಲೋಕಾಯುಕ್ತ ಡಿಎಸ್‌ಪಿ ಭರತರಡ್ಡಿ ಮಾತನಾಡಿ, ಸಾರ್ವಜನಿಕರು ಜನ ಸಂಪರ್ಕ ಸಭೆಯಲ್ಲಿ ದೂರು ನೀಡಲು ಅವಕಾಶವಿದ್ದು, ಜಿಲ್ಲಾ ಲೋಕಾಯುಕ್ತ ಕಚೇರಿಗೆ ಬಂದು ದೂರು ಸಲ್ಲಿಸಬಹುದು ಮತ್ತು ಆನ್‌ಲೈನ್‌ದಲ್ಲಿ ದೂರು ನೀಡಲು ಅವಕಾಶವಿದೆ ಎಂದರು.
ಸಭೆಯಲ್ಲಿ ಮೂಡಲಗಿ ತಹಶೀಲ್ದಾರ್ ಶ್ರೀಶೈಲ್ ಗುಡಮೆ, ತಾಲ್ಲೂಕು ಪಂಚಾಯಿತಿ ಇಒ ಎಫ್.ಜಿ. ಚಿನ್ನನವರ, ಸಿಡಿಪಿಒ ಯಲ್ಲಪ್ಪ ಗದಾಡಿ, ಸಿಪಿಐ ಶ್ರೀಶೈಲ್ ಬ್ಯಾಕೂಡ, ಹೆಸ್ಕಾ ಅಧಿಕಾರಿ ಎಂ.ಎನ್. ನಾಗನ್ನವರ, ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ ಕಾಮತ, ಪ್ರಭಾರಿ ಬಿಇಒ ರೇಣುಕಾ ಆನಿ, ಶಿರಸ್ತೇದಾರ ಪರುಶರಾಮ ನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.