ADVERTISEMENT

ಬೆಳಗಾವಿಯಲ್ಲಿ ಜೆಸ್ಕಾಂ ಎಂಜಿನಿಯರ್‌ ಶೇಖರ್ ಬಹುರೂಪಿ ಮನೆಗಳ ಮೇಲೆ ಲೋಕಾಯುಕ್ತ ದಾಳಿ

ಈ ಹಿಂದೆ ಒಮ್ಮೆ ಅಮಾನತಾಗಿದ್ದ ‘ಹೆಸ್ಕಾಂ’ ಕಾರ್ಯನಿರ್ವಾಹಕ ಎಂಜಿನಿಯರ್‌ ಶೇಖರ್ ಬಹುರೂಪಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2023, 5:15 IST
Last Updated 28 ಜೂನ್ 2023, 5:15 IST
ಬೆಳಗಾವಿ ರಾಮತೀರ್ಥ ನಗರದಲ್ಲಿರುವ ಶೇಖರ ಬಹುರೂಪಿ ಅವರ ಮನೆ
ಬೆಳಗಾವಿ ರಾಮತೀರ್ಥ ನಗರದಲ್ಲಿರುವ ಶೇಖರ ಬಹುರೂಪಿ ಅವರ ಮನೆ   

ಬೆಳಗಾವಿ: ಇಲ್ಲಿನ ‘ಜೆಸ್ಕಾಂ’ ಕಾರ್ಯನಿರ್ವಾಹಕ ಎಂಜಿನಿಯರ್‌ (ಈ ಮೊದಲು ಹೆಸ್ಕಾಂ ಅಧಿಕಾರಿಯಾಗಿದ್ದವರು) ಶೇಖರ್ ಬಹುರೂಪಿ ಅವರ ಮೂರು ಮನೆಗಳ ಮೇಲೆ, ಲೋಕಾಯುಕ್ತ ಅಧಿಕಾರಿಗಳು ಬುಧವಾರ ಏಕಕಾಲಕ್ಕೆ ದಾಳಿ ಮಾಡಿದ್ದಾರೆ.

ಇಲ್ಲಿನ ರಾಮತೀರ್ಥನಗರದಲ್ಲಿರುವ ಶೇಖರ ಅವರ ಮನೆ ಹಾಗೂ ಹತ್ತಿರದಲ್ಲೇ ಇರುವ ಅವರ ಸಹೋದರ ಮನೆಯ ಮೇಲೆ ಬೆಳಿಗ್ಗೆಯೇ ದಾಳಿ ನಡೆಸಲಾಗಿದೆ. ಇನ್ನೊಂದಡೆ, ಅಥಣಿ ತಾಲ್ಲೂಕಿನ ಸಂಕೋನಟ್ಟಿ ಗ್ರಾಮದಲ್ಲಿರುವ ಅವರ ನಿವಾಸದ ಮೇಲೂ ಅಧಿಕಾರಿಗಳು ದಾಳಿ ಇಟ್ಟಿದ್ದಾರೆ.

ರಾಮತೀರ್ಥ ನಗರದಲ್ಲಿ ಮೂರು ಅಂತಸ್ತಿನ ಐಷಾರಾಮಿ ಮನೆ ಇದೆ. ಬೆಳಿಗ್ಗೆಯಿಂದಲೇ ಅಲ್ಲಿ ದಾಖಲೆಗಳ ಶೋಧ ಶುರು ಮಾಡಲಾಗಿದೆ.

ADVERTISEMENT

ಲೋಕಾಯುಕ್ತ ಡಿವೈಎಸ್ಪಿ ಬಿ.ಎಸ್.ಪಾಟೀಲ ನೇತೃತ್ವದಲ್ಲಿ ತಂಡವು ದಾಳಿ ಮಾಡಿದ್ದು, ಪರಿಶೀಲನೆ ಮುಂದುವರಿಸಿದೆ.

ಶೇಖರ ಅವರು ಪ್ರಸ್ತುತ ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ‘ಹೆಸ್ಕಾಂ’ ಚಿಕ್ಕೋಡಿ ಉಪವಿಭಾಗದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಆಗಿದ್ದರು.

2019ರ ಪ್ರವಾಹ ಸಂದರ್ಭದಲ್ಲಿ ರೈತರಿಗೆ ಹಾಗೂ ಗ್ರಾಮಸ್ಥರಿಗೆ ಆದ ಪ್ರವಾಹ ಪರಿಹಾರ ವಿತರಣೆಯಲ್ಲಿ ಅಕ್ರಮ ಎಸಗಿದ ಆರೋಪ ಅವರ ಮೇಲೆ ಕೇಳಿಬಂದಿತ್ತು. ಇದರಿಂದ ಅಮಾನತುಗೊಂಡಿದ್ದರು.

₹ 86 ಕೋಟಿಯ ಹಗರಣಕ್ಕೆ ಸಂಬಂಧಿಸಿದಂತೆ ಆಗ ‘ಹೆಸ್ಕಾಂ’ನ ಐವರು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸೇರಿ 20 ಸಿಬ್ಬಂದಿ ಅಮಾನತು ಮಾಡಲಾಗಿತ್ತು. ಇದೇ ಪ್ರಕರಣದಲ್ಲಿ ಶೇಖರ ಕೂಡ ಮುಖ್ಯ ಆರೋಪಿ ಆಗಿದ್ದರು.

ಹಗರಿಬೊಮ್ಮನಹಳ್ಳಿ(ವಿಜಯನಗರ ಜಿಲ್ಲೆ): ಇಲ್ಲಿನ ಜೆಸ್ಕಾಂ‌ ಕಾರ್ಯನಿರ್ವಾಹಕ ಎಂಜನಿಯರ್ ಕಚೇರಿ ಮೇಲೆ ಬೆಳಗಾವಿ ಲೋಕಾಯುಕ್ತ ಪೊಲೀಸರು ಬುಧವಾರ ದಾಳಿ ನಡೆಸಿದ್ದಾರೆ.

ಕಾರ್ಯನಿರ್ವಾಹಕ ಎಂಜನಿಯರ್ ಶೇಖರ್ ಬಹುರೂಪಿ ಅವರ ಕಚೇರಿ ಮೇಲೆ ದಾಳಿ‌ ನಡೆಸಿದ್ದಾರೆ.

ಬೆಳಗಾವಿಯ ಶೇಖರಬಹುರೂಪಿ ಮನೆಮೇಲೆ ದಾಳಿನಡೆಸಿರುವ ಲೋಕಾಯುಕ್ತರು.ಈಗ ಕಾರ್ಯನಿರ್ವಹಿಸುವ ಹಗರಿಬೊಮ್ಮನಹಳ್ಳಿ ಕಚೇರಿಯಲ್ಲಿ ದಾಳಿ ನಡೆಸಿ ಅವರಿಗೆ ಸಂಬಂಧಿಸಿದ ಹಲವು ದಾಖಲೆಯನ್ನು ಪರಿಶೀಲಿಸುತ್ತಿದ್ದಾರೆ.

ಇನ್ಸ್‌ಪೆಕ್ಟರ್ ಕಲಾದಗಿ ನೇತೃತ್ವದಲ್ಲಿ ಐದು ಜನ ಸಿಬ್ಬಂದಿ ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.