ADVERTISEMENT

ಇಂದಿನ ಯುವಜನರಿಗೆ ವಿಪುಲ ಅವಕಾಶ

ದೇಶಪಾಂಡೆ ಪ್ರತಿಷ್ಠಾನದ ಅಧ್ಯಕ್ಷ ಗುರುರಾಜ್‌ ದೇಶಪಾಂಡೆ ಅಭಿಮತ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2018, 16:26 IST
Last Updated 25 ಅಕ್ಟೋಬರ್ 2018, 16:26 IST
ಕಾರ್ಯಕ್ರಮದಲ್ಲಿ ಗುರುರಾಜ್ ದೇಶಪಾಂಡೆ–ಜಯಶ್ರೀ ದಂಪತಿಯನ್ನು ಸತ್ಕರಿಸಲಾಯಿತು
ಕಾರ್ಯಕ್ರಮದಲ್ಲಿ ಗುರುರಾಜ್ ದೇಶಪಾಂಡೆ–ಜಯಶ್ರೀ ದಂಪತಿಯನ್ನು ಸತ್ಕರಿಸಲಾಯಿತು   

ಬೆಳಗಾವಿ: ‘ಇಂದಿನ ಯುವಜನರಿಗೆ ಜಗತ್ತಿನ ಎಲ್ಲ ಕಡೆಯೂ ವಿಪುಲ ಅವಕಾಶಗಳಿವೆ. ಇದನ್ನು ಬಳಸಿಕೊಂಡು, ಹೊಸ ಅನ್ವೇಷಣೆಗಳ ಮೂಲಕ ಉದ್ಯಮಿಗಳಾಗಲು ಮುಂದಾಗಬೇಕು’ ಎಂದು ದೇಶಪಾಂಡೆ ಪ್ರತಿಷ್ಠಾನದ ಅಧ್ಯಕ್ಷ ಗುರುರಾಜ್‌ ದೇಶಪಾಂಡೆ ತಿಳಿಸಿದರು.

ಬಿ.ಕೆ. ಮಾಡೆಲ್ ಪ್ರೌಢಶಾಲೆಯ 1967ನೇ ಸಾಲಿನ ವಿದ್ಯಾರ್ಥಿಯಾಗಿದ್ದ ಅವರು ಸಹಪಾಠಿಗಳು ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದವರು ಗುರುವಾರ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ನಾವು ವಿದ್ಯಾರ್ಥಿಯಾಗಿದ್ದಾಗ ಅವಕಾಶಗಳು ಕಡಿಮೆ ಇದ್ದವು. ಕಂಪ್ಯೂಟರ್‌ನ ಕಂಪ್ಯೂಟಿಂಗ್‌ ಸಾಮರ್ಥ್ಯವೂ ಕೊಂಚವೇ ಇತ್ತು. ಆದರೆ, ಈಗ ಮೊಬೈಲ್‌ ಫೋನ್‌ನಲ್ಲೇ ಇಡೀ ಜಗತ್ತು ನೋಡಬಹುದಾಗಿದೆ. ಪರಿಣಾಮ, ಇಂದಿನ ಯುವಪೀಳಿಗೆಗೆ ಜಗತ್ತಿನಾದ್ಯಂತ ಬಹಳ ಅವಕಾಶಗಳಿವೆ. ಕಂಪ್ಯೂಟಿಂಗ್ ಸಾಮರ್ಥ್ಯ, ಸಂಪರ್ಕ, ಸಂವಹನ ಜಾಸ್ತಿಯಾಗುತ್ತಾ ಹೋಗುತ್ತಿದೆ. ಇದರಿಂದಾಗಿ ಜ್ಞಾನವು ಸುಲಭವಾಗಿ ದೊರೆಯುತ್ತಿದೆ. ಇದನ್ನು ಬಳಸಿಕೊಂಡು ಮುಂದೆ ಬರಲು ಉತ್ಸಾಹವಿರಬೇಕು’ ಎಂದು ಹೇಳಿದರು.

ADVERTISEMENT

ಸಮಸ್ಯೆಗಳನ್ನು ಪ್ರೀತಿಸಬೇಕು

‘ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಾವು ಸಮಸ್ಯೆಗಳನ್ನೇ ಪ್ರೀತಿಸಬೇಕು. ಇದನ್ನೇ ಪ್ರತಿಷ್ಠಾನದ ಲೀಡ್ ಕಾರ್ಯಕ್ರಮದ ಮೂಲಕ ಪದವೀಧರರಿಗೆ ಕಲಿಸಿಕೊಡುತ್ತಿದ್ದೇವೆ’ ಎಂದರು.

‘ಏನಾದರೂ ಸಾಧಿಸಬೇಕೆಂದಾದರೆ, ನಾವು ಮೊದಲು ಮಿತಿಗಳಿಂದ ಹೊರಬರಬೇಕು. ಕಲಿಯುವುದು ಹೇಗೆ ಎನ್ನುವುದನ್ನು ಕಲಿಯಬೇಕು. ಕುತೂಹಲ ಬೆಳೆಸಿಕೊಳ್ಳಬೇಕು. ನಮಗೆ ವಯಸ್ಸಾಗುತ್ತದೆ ನಿಜ. ವಯಸ್ಸಾಯ್ತು ಎಂದು ಭಾವಿಸಿ ಸುಮ್ಮನಿರುವುದಕ್ಕಿಂತ ಬಹಳಷ್ಟು ಮಂದಿಗೆ ಸ್ಫೂರ್ತಿ ತುಂಬಬಹುದು. ಅಸಾಧ್ಯವಾದುದನ್ನು ಅವರಿಂದ ಮಾಡಿಸಬಹುದು’ ಎಂದು ಹೇಳಿದರು.

‘ಸಮಸ್ಯೆಗಳಿಗೆ ಪರಿಹಾರ ಹುಡುಕುವವರು ಹೆಚ್ಚಿನ ಪ್ರಮಾಣದಲ್ಲಿರುವ ದೇಶ ಪ್ರಕಾಶಮಾನವಾಗಿರುತ್ತದೆ. ಅಂಥ ಸಮಾಜದಲ್ಲಿ ಸಮಸ್ಯೆಗಳು ಬಹಳ ದಿನಗಳವರೆಗೆ ಇರುವುದಿಲ್ಲ. ಅಸಹಾಯಕತೆ ವ್ಯಕ್ತಪಡಿಸುವವರು ಮತ್ತು ದೂರುವವರನ್ನು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವವರನ್ನಾಗಿ ಮಾಡುವುದು ಇಂದಿನ ಅಗತ್ಯವಾಗಿದೆ. ಆ ಸಂಸ್ಕೃತಿ, ಸ್ಫೂರ್ತಿ ಹಾಗೂ ನಂಬಿಕೆ ಬಂದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಇದಕ್ಕಾಗಿ ನಂಬಿಕೆ ಕಳೆದುಕೊಳ್ಳಬಾರದು’ ಎಂದು ಪ್ರತಿ‍ಪಾದಿಸಿದರು.

ಉದ್ಯಮಿಗಳನ್ನಾಗಿಸಬೇಕು

‘ನಮ್ಮ ಪ್ರತಿಷ್ಠಾನದಲ್ಲಿ ಪ್ರಸ್ತುತ 30 ಜೆಸಿಬಿಗಳಿವೆ. ಇದಕ್ಕಾಗಿ ₹ 15 ಕೋಟಿ ಬಂಡವಾಳ ಹಾಕಲಾಗಿದೆ. ಇವುಗಳನ್ನು ಬಳಸಿ ರೈತರಿಗೆ ಕೃಷಿ ಹೊಂಡ ನಿರ್ಮಿಸಿಕೊಡಲಾಗುತ್ತಿದೆ. ಇದರಿಂದ ಅವರ ಕೃಷಿಗೆ ಅನುಕೂಲವಾಗಿದೆ. ನವೋದ್ಯಮಿ ಮೂಲಕ ಉದ್ಯಮದ ಅರಿವು ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಹಿಂದೆ ದೊಡ್ಡ ಕಂಪನಿಯವರು ಒಂದಷ್ಟು ಮಂದಿಗೆ ಕೆಲಸ ಕೊಡುತ್ತಿದ್ದರು. ಆದರೆ ಈಗಿನ ಬದಲಾವಣೆಗೆ ತಕ್ಕಂತೆ ಕಂಪನಿಗಳು ಉಳಿಯುತ್ತಿಲ್ಲ. ಹೀಗಾಗಿ ಯುವಕರನ್ನು ಉದ್ಯೋಗ ಆಕಾಂಕ್ಷಿಗಳ ಬದಲಿಗೆ ಉದ್ಯಮಿಗಳನ್ನಾಗಿ ಮಾಡುವುದು ಮಹತ್ವದ್ದಾಗಿದೆ. ರೈತರು ಹಿಂದಿನಿಂದಲೂ ಶೋಷಣೆಗೆ ಒಳಗಾಗಿರುವುದರಿಂದ ಅವರ ಬಳಿಗೆ ಹೋಗುವವರನ್ನು ಸುಲಭವಾಗಿ ನಂಬುವುದಿಲ್ಲ. ಹೀಗಾಗಿ ಮೊದಲು ಅವರ ನಂಬಿಕೆ ಗಳಿಸಿಕೊಂಡು ನಮ್ಮ ವಿಚಾರಗಳನ್ನು ಹೇಳಬೇಕಾಗುತ್ತದೆ’ ಎಂದು ಅಭಿ‍ಪ್ರಾಯಪಟ್ಟರು.

ಉದ್ಯಮಿ ಅವಿನಾಶ್ ಪೋತದಾರ್‌, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರೊ.ಆಶೋಕ್ ಕಾಡಾಪುರೆ, ಜಯಶ್ರೀ ದೇಶಪಾಂಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.