ADVERTISEMENT

ಶಿವರಾತ್ರಿ ಆಚರಣೆ; ದೇಗುಲಗಳಲ್ಲಿ ಜಾಗರಣೆ

ಜಿಲ್ಲೆಯಾದ್ಯಂತ ಶಿವನಾಮ ಸ್ಮರಣೆಯಲ್ಲಿ ಭಕ್ತರು

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 16:06 IST
Last Updated 11 ಮಾರ್ಚ್ 2021, 16:06 IST
ಬೆಳಗಾವಿಯ ಕಪಿಲೇಶ್ವರ ಮಂದಿರದಲ್ಲಿ ಗುರುವಾರ ಮಹಾಶಿವರಾತ್ರಿ ಅಂಗವಾಗಿ ದೇವರ ದರ್ಶನ ಪಡೆಯಲು ನೂರಾರು ಮಂದಿ ಸೇರಿದ್ದರುಪ್ರಜಾವಾಣಿ ಚಿತ್ರ
ಬೆಳಗಾವಿಯ ಕಪಿಲೇಶ್ವರ ಮಂದಿರದಲ್ಲಿ ಗುರುವಾರ ಮಹಾಶಿವರಾತ್ರಿ ಅಂಗವಾಗಿ ದೇವರ ದರ್ಶನ ಪಡೆಯಲು ನೂರಾರು ಮಂದಿ ಸೇರಿದ್ದರುಪ್ರಜಾವಾಣಿ ಚಿತ್ರ   

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಜನರು ಗುರುವಾರ ಮಹಾಶಿವರಾತ್ರಿ ಹಬ್ಬವನ್ನು ಸಂಭ್ರಮ ಹಾಗೂ ಭಕ್ತಿ–ಭಾವದಿಂದ ಆಚರಿಸಿದರು.

ಶಿವಾಲಯಗಳಲ್ಲಿ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಆವರಣವನ್ನು ವಿವಿಧ ಹೂವುಗಳು, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಿದವು. ಜನರು ಕುಟುಂಬಸಮೇತ ಬಂದು ದೇವರ ದರ್ಶನ ಪಡೆದು ಪುನೀತ ಭಾವ ತಳೆದರು. ಉಪವಾಸ ವ್ರತ ಆಚರಿಸಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.

‘ದಕ್ಷಿಣ ಕಾಶಿ’ ಎಂದೇ ಪ್ರಸಿದ್ಧವಾದ ಇಲ್ಲಿನ ಕಪಿಲೇಶ್ವರ ಮಂದಿರದಲ್ಲಿ ಸಾವಿರಾರು ಮಂದಿ ಶಿವನ ದರ್ಶನ ಪಡೆದರು. ನೂತನವಾಗಿ ಪ್ರತಿಷ್ಠಾಪಿಸಲಾಗಿರುವ ಪರಶುರಾಮನ ಮೂರ್ತಿ ಎದುರು ಅಗ್ನಿಹೋತ್ರ ಹೋಮ ನೆರವೇರಿತು. ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಡಿಸಿಪಿ ವಿಕ್ರಂ ಅಮಟೆ ಮೊದಲಾದವರು ಪೂಜೆ ಸಲ್ಲಿಸಿದರು.

ADVERTISEMENT

ಶಿವಾಜಿನಗರದ ವೀರಭದ್ರೇಶ್ವರ, ಕ್ಯಾಂಪ್‌ನಲ್ಲಿರುವ ಮಿಲಿಟರಿ ಮಹಾದೇವ, ಶಹಾಪುರದ ಮಹಾದೇವ, ಶಾಹೂನಗರದ ಶಿವ, ಮಹಾಂತೇಶ ನಗರದ ಮಹಾದೇವ, ಸದಾಶಿವ ನಗರದ ಸದಾಶಿವ, ಸಹ್ಯಾದ್ರಿ ನಗರದ ಮಹಾಬಳೇಶ್ವರ, ಶಿವಬಸವ ನಗರದ ‍ಪಶುಪತಿ, ಸಂಗಮೇಶ್ವರ ನಗರ ಸಂಗಮೇಶ್ವರ ಮಂದಿರಗಳು, ರಾಮತೀರ್ಥ ನಗರದ ಶಿವಾಲಯ, ಬಿ.ಕೆ. ಕಂಗ್ರಾಳಿಯ ಕಲ್ಮೇಶ್ವರ ದೇಗುಲ, ರಾಮಲಿಂಗ ಗಲ್ಲಿಯ ರಾಮಲಿಂಗೇಶ್ವರ ದೇಗುಲದಲ್ಲಿ ಸಂಭ್ರಮ ಮನೆ ಮಾಡಿತ್ತು.

ಮೂರ್ತಿಗೆ ಜಲಾಭಿಷೇಕ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರ ನಾಮಾರ್ಚನೆ, ಬಿಲ್ವ ಪತ್ರಾರ್ಚನೆ, ಕುಂಕುಮಾರ್ಚನೆ ಮತ್ತಿತರ ಪೂಜಾ ಕಾರ್ಯಕ್ರಮಗಳು ನಡೆದವು. ಬಿಲ್ವಪತ್ರೆ, ಪುಷ್ಪ, ಹಾಲು ತಂದಿದ್ದ ಭಕ್ತರು ದೇವರ ಮೂರ್ತಿಗೆ ಅಭಿಷೇಕ ಮಾಡಿಸಿದರು.

ದೇಗುಲಗಳಲ್ಲಿ ರಾತ್ರಿ ಜಾಗರಣೆ ಆರಂಭಗೊಂಡಿತು. ಭಜನೆ ಮೂಲಕ ಶಿವಾಲಯಗಳಲ್ಲಿ ಶಿವನಾಮ ಸ್ಮರಣೆ ಮೊಳಗಿತು. ಬೆಳಿಗ್ಗೆ ಪೂಜೆ ಸಲ್ಲಿಸಿದ್ದ ಭಕ್ತರು, ರಾತ್ರಿ ದೇಗುಲಗಳಲ್ಲಿ ವ್ಯವಸ್ಥೆ ಮಾಡಿದ್ದ ಜಾಗರಣೆ ಮತ್ತು ಶಿವಯೋಗ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಶುಕ್ರವಾರ ನಸುಕಿನವರೆಗೂ ಜಾಗರಣೆ ನಡೆಯಲಿದೆ. ಬಹುತೇಕ ದೇಗುಲಗಳ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ ಮಹಾಪ್ರಸಾದ ವಿತರಣೆಗೆ ಸಿದ್ಧತೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.