ಬೆಳಗಾವಿ: ಭಗವಾನ್ ಮಹಾವೀರ ಜನ್ಮಕಲ್ಯಾಣ ಮಹೋತ್ಸವ ಅಂಗವಾಗಿ ನಗರದಲ್ಲಿ ಭಾನುವಾರ ನಡೆದ ಶೋಭಾಯಾತ್ರೆ ಕಣ್ಮನಸೆಳೆಯಿತು.
ಬೆಳಗಾವಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ, ಸಚಿವೆ ಲಕ್ಷ್ಮಿ ಹೆಬ್ಬಾಳಕರ, ಶಾಸಕ ಅಭಯ ಪಾಟೀಲ, ಬಿಜೆಪಿ ಮುಖಂಡರಾದ ಸಂಜಯ ಪಾಟೀಲ, ಅನಿಲ ಬೆನಕೆ ಮತ್ತಿತರ ನಾಯಕರು, ಇಲ್ಲಿನ ಸಮಾದೇವಿ ಗಲ್ಲಿಯಲ್ಲಿ ಯಾತ್ರೆಗೆ ಒಟ್ಟಾಗಿ ಚಾಲನೆ ನೀಡಿದರು.
ಇಲ್ಲಿಂದ ರಾಮದೇವ ಗಲ್ಲಿ, ಕಿರ್ಲೋಸ್ಕರ್ ರಸ್ತೆ, ರಾಮಲಿಂಗಖಿಂಡ ಗಲ್ಲಿ, ಟಿಳಕ ಚೌಕ್, ಶೇರಿ ಗಲ್ಲಿ, ಪಾಟೀಲ ಗಲ್ಲಿಯ ಶನಿ ಮಂದಿರ, ಕಪಿಲೇಶ್ವರ ರಸ್ತೆ, ಶಹಾಪುರ ಕೋರೆ ಗಲ್ಲಿ, ಎಸ್‌ಪಿಎಂ ರಸ್ತೆ, ಬಸವೇಶ್ವರ ವೃತ್ತದ ಮಾರ್ಗವಾಗಿ ಸಾಗಿದ ಶೋಭಾಯಾತ್ರೆ, ಹಿಂದವಾಡಿಯ ಮಹಾವೀರ ಭವನ ತಲುಪಿತು. ವಿವಿಧ ಕಲಾ ತಂಡಗಳ ಪ್ರದರ್ಶನ ಮನಸೆಳೆಯಿತು.
ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರು, ಉತ್ಸಾಹದಿಂದ ಹೆಜ್ಜೆಹಾಕಿದರು. ಜೈನ ಯುವ ಸಂಘಟನೆ ವತಿಯಿಂದ ಬೈಕ್ ರ್‍ಯಾಲಿಯೂ ನಡೆಯಿತು.
ಮಹಾವೀರರ ತತ್ವಾದರ್ಶ ಪಾಲಿಸಿ: ‘ಇಡೀ ವಿಶ್ವಕ್ಕೆ ಶಾಂತಿ, ಅಹಿಂಸೆ ತತ್ವಗಳನ್ನು ಬೋಧಿಸಿ, ಮಾನವನ ಜೀವನ ಪಾವನಗೊಳಿಸಿದ ಭಗವಾನ್ ಮಹಾವೀರರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕಾಗಿದೆ’ ಎಂದು ಸಂಶೋಧಕ ಮದನ ಗೊಡಬೋಲೆ ಹೇಳಿದರು.
ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಭಗವಾನ್ ಮಹಾವೀರ ಜನ್ಮಕಲ್ಯಾಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಇಂದು ಕೆಲವಡೆ ಯುದ್ಧದ ಪರಿಸ್ಥಿತಿ ಇದೆ. ಮನುಷ್ಯರಲ್ಲಿ ಪ್ರೀತಿ, ವಿಶ್ವಾಸ ಕಡಿಮೆಯಾಗುತ್ತಿದೆ. ಹಾಗಾಗಿ ಎಲ್ಲರೂ ಮಹಾವೀರರ ಸಂದೇಶಗಳನ್ನು ಪಾಲಿಸುತ್ತ ಮಾನವ ಕಲ್ಯಾಣಕ್ಕೆ ಶ್ರಮಿಸೋಣ’ ಎಂದು ಕರೆ ನೀಡಿದರು.
ಮಹೋತ್ಸವದ ಮಧ್ಯವರ್ತಿ ಉತ್ಸವ ಸಮಿತಿ ಗೌರವ ಕಾರ್ಯಾಧ್ಯಕ್ಷ ರಾಜೇಂದ್ರ ಜೈನ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದ್ಯಮಿ ಗೋಪಾಲ ಜಿನಗೌಡ, ಪುಷ್ಪದಂತ ದೊಡ್ಡಣ್ಣವರ, ಸಚಿನ ಪಾಟೀಲ, ಮನೋಜ ಸಂಚೇತಿ, ಎಂ.ಬಿ.ಝಿರಲಿ, ರವಿರಾಜ ಪಾಟೀಲ, ರಾಜೇಂದ್ರ ಜಕ್ಕನ್ನವರ ಉಪಸ್ಥಿತರಿದ್ದರು. ವಿನೋದ ದೊಡ್ಡಣ್ಣವರ ಸ್ವಾಗತಿಸಿದರು. ಸಚಿನ ಪಾಟೀಲ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.