ADVERTISEMENT

ಪ್ರವಾಹ ಸಂತ್ರಸ್ತರ ಬಗ್ಗೆ ಶಾಸಕ ಮಹೇಶ್ ಕುಮಟಳ್ಳಿ ಅಸಡ್ಡೆ ಮಾತು: ವಿಡಿಯೊ ವೈರಲ್

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 14:37 IST
Last Updated 31 ಜುಲೈ 2021, 14:37 IST
ಮಹೇಶ ಕುಮಠಳ್ಳಿ
ಮಹೇಶ ಕುಮಠಳ್ಳಿ   

ಬೆಳಗಾವಿ: ‘ನಾನು ನಿಮ್ಮ ಮುಂದೆ ಕುಳಿತಿದ್ದೇನೆ. ತಲೆ ಬ್ಯಾರೆ ಬ್ಯಾರೆ ಕಡೆಯೇ ಇದೆ. ಕರೆ ಬಂದರೆ ಸಾಕು ಮೊಬೈಲ್‌ ಫೋನ್‌ ಒಗಿಲೇನ ಅನ್ನಿಸ್ತೈತಿ. ಮೈಯೆಲ್ಲಾ ಬಿಗಿದಂಗಾಗೈತಿ. ಒಂದ್ ಕಡೆ ಹೊತಕೊಂಡ ಮಕ್ಕೊಬೇಕು ಅನ್ನಿಸ್ತೈತಿ’ ಎಂದು ಅಥಣಿಯ ಬಿಜೆಪಿ ಶಾಸಕ ಮಹೇಶ ಕುಮಠಳ್ಳಿ ಅವರು ಹೇಳಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಶನಿವಾರ ವೈರಲ್ ಆಗಿದೆ.

ಅವರು ಆ ತಾಲ್ಲೂಕಿನಲ್ಲಿ ಕೃಷ್ಣಾ ನದಿಯ ನೆರೆ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಲಾಗದೆ ಈ ಮಾತುಗಳನ್ನು ಇತ್ತೀಚೆಗೆ ಅಥಣಿಯ ಪ್ರವಾಸಿಮಂದಿರದಲ್ಲಿ ಆಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲಿದ್ದ ವ್ಯಕ್ತಿಯೊಬ್ಬರು ವಿಡಿಯೊ ಮಾಡಿ ಹರಿಬಿಟ್ಟಿದ್ದಾರೆ. ಶಾಸಕರ ಮಾತುಗಳಿಗೆ ಟೀಕೆ ವ್ಯಕ್ತವಾಗಿದೆ. ಸಂತ್ರಸ್ತರು ಜನಪ್ರತಿನಿಧಿ ಜೊತೆ ದೂರು ಹೇಳಿಕೊಳ್ಳಬಾರದೆ ಎಂಬ ಪ್ರಶ್ನೆಗಳು ಕೇಳಿಬಂದಿವೆ.

ಇನ್ನೊಂದೆಡೆ, ಪ್ರವಾಹ ಸಂತ್ರಸ್ತರೊಬ್ಬರು ಕುಡಿಯುವ ನೀರು ಒದಗಿಸುವಂತೆ ಕೇಳಿದಾಗ ‘ನನಗೂ ಒಂದ್‌ ಕ್ವಾರ್ಟರ್‌ ಕೊಡು’ ಎಂದು ವ್ಯಂಗ್ಯ ಮಾಡಿರುವ ವಿಡಿಯೊ ಕೂಡ ಹಬ್ಬಿದೆ.

ADVERTISEMENT

‘ಕೋವಿಡ್ ಬಂದಿದ್ದ ಸಂದರ್ಭದಲ್ಲಿ ನಾನು ನೀಡಿದ್ದ ಹೇಳಿಕೆಯನ್ನು ನೆರೆ ಸಂತ್ರಸ್ತರಿಗೆ ಥಳಕು ಹಾಕಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಡಲಾಗಿದೆ. ನಮ್ಮ ಮನೆಯಲ್ಲಿ ಮೂವರಿಗೆ ಕೋವಿಡ್ ದೃಢಪಟ್ಟಿತ್ತು. ಆ ವೇಳೆ ಕೆಲವರೊಂದಿಗೆ ನೋವು ತೋಡಿಕೊಂಡಿದ್ದೆ. ಹಳೆಯ ವಿಡಿಯೊ ಈಗ ವೈರಲ್ ಮಾಡಲಾಗಿದೆ. ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸುತ್ತಿದ್ದೇನೆ’ ಎಂದು ಕುಮಠಳ್ಳಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.