
ಮೂಡಲಗಿ ತಾಲ್ಲೂಕಿನ ಕಲ್ಲೋಳಿಯ ಪ್ರಗತಿಪರ ರೈತ ಬಾಳಪ್ಪ ಬಿ. ಬೆಳಕೂಡ ಅವರ ತೊಟದಲ್ಲಿ ಬೆಂಗಳೂರಿನ ಕರ್ನಾಟಕ ಪ್ರದೇಶ ಕೃಷಿಕ ಸಮಾಜದವರ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಬೆಳಗಾವಿ ವಿಭಾಗ ಮಟ್ಟದ ಕಬ್ಬು ಹಾಗೂ ಅರಿಷಿಣ ಬೆಳೆಯ ಕ್ಷೇತ್ರೋತ್ಸವ
ಮೂಡಲಗಿ: ‘ರೈತರು ಸಾವಯವ ಮತ್ತು ನೈಸರ್ಗಿಕ ಕೃಷಿ ಮಾಡುವ ಮೂಲಕ ಭೂಮಿಯ ಫಲವತ್ತತೆ ಹೆಚ್ಚಿಸಬೇಕು ಹಾಗೂ ಸಮಾಜದ ಆರೋಗ್ಯವನ್ನು ಕಾಯಬೇಕು’ ಎಂದು ಚಿಕ್ಕೋಡಿ ಉಪ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ ಹೇಳಿದರು.
ತಾಲ್ಲೂಕಿನ ಕಲ್ಲೋಳಿಯ ಪ್ರಗತಿಪರ ರೈತ ಬಾಳಪ್ಪ ಬಿ. ಬೆಳಕೂಡ ಅವರ ತೋಟದಲ್ಲಿ ಬೆಂಗಳೂರಿನ ಕರ್ನಾಟಕ ಪ್ರದೇಶ ಕೃಷಿಕ ಸಮಾಜದವರ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಬೆಳಗಾವಿ ವಿಭಾಗ ಮಟ್ಟದ ಕಬ್ಬು ಹಾಗೂ ಅರಿಸಿಣ ಬೆಳೆಯ ಕ್ಷೇತ್ರೋತ್ಸವ ಹಾಗೂ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಮಣ್ಣಿಗೂ ಜೀವವಿದೆ. ಆದರೆ ಅವೈಜ್ಞಾನಿಕವಾಗಿ ರಾಸಾಯನಿಕ ಹಾಗೂ ಕ್ರೀಮಿನಾಶಕಗಳನ್ನು ಹಾಕಿ ಮಣ್ಣನ್ನು ಹಾಳು ಮಾಡಲಾಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.
‘ರೈತರು ಕಬ್ಬಿನ ರವದಿಗೆ ಬೆಂಕಿ ಹಚ್ಚುವುದರಿಂದ ತಾಪಮಾನ ಹೆಚ್ಚಾಗಿ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳು ಸಾವಪ್ಪುತ್ತವೆ. ರೈತರು ಮಣ್ಣಿನ ಸಂರಕ್ಷಣೆ ಮತ್ತು ಅದರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಬೇಕು. ವಿಷಯುಕ್ತ ಆಹಾರ ಸೇವನೆಯಿಂದ ಮನುಷ್ಯನ ಅಯುಷ್ಯ ಕ್ಷೀಣಿಸುತ್ತಿದೆ. ರೈತರು ಜಾನುವಾರು ಹಾಗೂ ದೇಸಿ ಹಸು ಸಾಕಿ ಅವುಗಳಿಂದ ದೊರೆಯುವ ಸಗಣಿ, ಗಂಜಳ ಬಳಸಿ, ಭೂಮಿಯಲ್ಲಿ ಎರೆ ಹುಳು ವೃದ್ಧಿಸಿ ಸಾವಯವ ಕೃಷಿ ಮಾಡಬೇಕು’ ಎಂದು ಅಭಿಪ್ರಾಯಪಟ್ಟರು.
‘ಕರ್ನಾಟಕ ಸರ್ಕಾರವು ಕಬ್ಬಿನಲ್ಲಿ ಸಮಗ್ರ ಮಣ್ಣು ಮತ್ತು ನೀರು ನಿರ್ವಹಣೆ ನೂತನ ಯೋಜನೆಯನ್ನು ಅನುಷ್ಠಾನಗೊಳಿಸಲಿದ್ದು, ಬೆಳಗಾವಿಯಲ್ಲಿ ಬರುವ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಈ ಯೋಜನೆಯ ಲೋಕಾರ್ಪಣೆಯಾಗಲಿದೆ’ ಎಂದರು.
ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷ ಮಂಜುನಾಥ ಗೌಡ ಎಸ್.ಆರ್. ಮಾತನಾಡಿ, ‘ಕೃಷಿಗೆ ರಾಸಾಯನಿಕ ಗೊಬ್ಬರ ಮತ್ತು ಕ್ರೀಮಿನಾಶಕಗಳನ್ನು ಯತೇಚ್ಛವಾಗಿ ಬಳಸಿ ಬೆಳೆದ ಆಹಾರವನ್ನು ಸೇವಿಸುವುದರಿಂದ ಬಿಪಿ, ಸಕ್ಕರೆ ಕಾಯಲೆ, ಹೃದಯಾಘಾತ ಸೇರಿದಂತೆ ಹಲವು ರೋಗ, ರುಜಿನಗಳೂ ಬಾಧಿಸುತ್ತವೆ. ಕಲ್ಲೋಳಿಯ ಬಾಳಪ್ಪ ಬೆಳಕೂಡ ಅವರು ಸಾವಯವ ಪದ್ಧತಿಯಲ್ಲಿ ಕಬ್ಬು ಮತ್ತು ಅರಿಸಿಣ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆದಿದ್ದು ರೈತರಿಗೆ ಮಾದರಿಯಾಗಿದೆ’ ಎಂದರು.
ಕರ್ನಾಟಕ ಪ್ರದೇಶ ಕೃಷಿಕ ಸಮಾಜ ರಾಜ್ಯ ಪ್ರತಿನಿಧಿ ಬಾಳಪ್ಪ ಬೆಳಕೂಡ ಮಾತನಾಡಿ, ‘ಕಬ್ಬು ಬೆಳೆಯುವ ರೈತರು ಸಕ್ಕರೆ ಕಾರ್ಖಾನೆಯ ಕೃಷಿ ತಜ್ಞರು, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಕೃಷಿ ತಜ್ಞರ ಸಲಹೆ ಪಡೆದುಕೊಂಡರೆ ಹೆಚ್ಚು ಇಳುವರಿ ಪಡೆಯಲು ಸಾಧ್ಯ. ಕಬ್ಬಿನ ಇಳುವರಿ ಹೆಚ್ಚು ಪಡೆಯಲು ಒಂದೇ ಮಂತ್ರವೆಂದರೆ ಹಳೆಯ ಪದ್ಧತಿಯ ಒಕ್ಕಲುತನ ಅಳವಡಿಸಿಕೊಳ್ಳುವುದಾಗಿದೆ’ ಎಂದರು.
ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆಯ ಕಬ್ಬು ಅಭಿವೃದ್ಧಿ ವಿಭಾಗ ನಿರ್ದೇಶಕ ಡಾ. ನಂದಕುಮಾರ ಕುಂಚಗಿ, ಕರ್ನಾಟಕ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ ಮಾತನಾಡಿದರು.
ಕಬ್ಬು ಬೆಳೆಯ ಕುರಿತು ತುಕ್ಕಾನಟ್ಟಿಯ ಕೆವಿಕೆಯ ಬೇಸಾಯ ತಜ್ಞ ಎಂ.ಎನ್. ಮಲಾವಡಿ, ಅರಿಸಿಣ ಬೆಳೆಯ ಕುರಿತು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಶಶಿಧರ ದೊಡ್ಡಮನಿ, ಸಚಿನಕುಮಾರ ನಂದಿಮಠ, ರಾಘವೇಂದ್ರ ಕೆ.ಎಸ್, ವಿ.ಡಿ. ಗಸ್ತಿ ಅವರು ಉಪನ್ಯಾಸ ನೀಡಿದರು.
ಬೆಳಗಾವಿ ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಶಂಕರಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಗೋಕಾಕ ಸಹಾಯಕ ಕೃಷಿ ನಿರ್ದೇಶಕ ಎಂ.ಎಂ. ನದಾಫ, ಪ್ರದೇಶ ಕೃಷಿಕ ಸಮಾಜದ ಸುರೇಶ ಕಬಾಡಗಿ, ಶಂಕರಗೌಡ ಪಾಟೀಲ, ಶಿವನಗೌಡ ಬಿರಾದಾರ, ಮಲ್ಲನಗೌಡ ಪಾಟೀಲ, ಅರವಿಂದ ಕಟಗಿ, ಶಿವಪ್ಪ ಅರಹುಣಸಿ, ನಾರಾಯಣ ಹೆಗಡೆ, ಅಶೋಕುಮಾರ ಕೂಡಲಿ, ಪ್ರವೀಣ ಹೆಬ್ಬಾರ, ಅಶೋಕ ಗದಾಡಿ, ಕೆಂಪಣ್ಣ ಕಾಡದವರ ಇದ್ದರು.
ಸಮಾರಂಭದ ಪೂರ್ವದಲ್ಲಿ ರೈತರು ಕಬ್ಬು ಮತ್ತು ಅರಿಸಿಣ ಬೆಳೆಯ ಕ್ಷೇತ್ರ ವೀಕ್ಷಣೆ ಮಾಡಿದರು. ಹಾಲು ಹಲ್ಲಿನ ಹೋರಿಗಳ ಪ್ರದರ್ಶನದಲ್ಲಿ ಉತ್ತಮ ಹೋರಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಾವಿರಕ್ಕೂ ಹೆಚ್ಚು ರೈತರು, ಅರಭಾವಿ ತೋಟಗಾರಿಕೆ ಕಾಲೇಜು ಪ್ರಶಿಕ್ಷಣಾರ್ಥಿಗಳು, ರಮೇಶ ಭಾಗೋಜಿ, ಶಂಕರ ನಿಂಗನೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.