
ಬೆಳಗಾವಿ: ಹೊಸ ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿಯನ್ನು ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಸಡಗರದಿಂದ ಆಚರಿಸಲಾಯಿತು. ಪ್ರವಾಸಿ ತಾಣಗಳು, ದೇವಸ್ಥಾನಗಳು, ಉದ್ಯಾನಗಳು, ಪ್ರೇಕ್ಷಣೀಯ ಸ್ಥಳಗಳು ಜನರಿಂದ ತುಂಬಿ ಹೋದವು. ವಿವಿಧೆಡೆ ಪುಣ್ಯಸ್ನಾನ ಮಾಡಿದ ಜನ, ಮಧ್ಯಾಹ್ನ ಬಂಧು– ಮಿತ್ರರ ಜತೆಗೆ ಭೂರಿ ಭೋಜನ ಸವಿದರು.
ಇದೀಗ ತಾನೆ ಬಹುಪಾಲು ರೈತರು ರಾಶಿ ಮುಗಿಸಿದ ಸಂಭ್ರದಲ್ಲಿದ್ದಾರೆ. ಕಬ್ಬು ಬೆಳೆಗಾರರು ಕಾರ್ಖಾನೆಗಳಿಗೆ ಕಬ್ಬು ಸಾಗಿಸಿ ಹೊರೆ ಇಳಿಸಿಕೊಂಡಿದ್ದಾರೆ. ಹೀಗಾಗಿ, ಗ್ರಾಮೀಣ ಭಾಗದಲ್ಲಿ ಹಬ್ಬದ ಸಂಭ್ರಮ ಇಮ್ಮಡಿಗೊಂಡಿದೆ. ಕೃಷಿಕರು ತಮ್ಮ ಕುಟುಂಬದೊಂದಿಗೆ ಕೃಷಿಭೂಮಿಗೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದರು. ಕುಟುಂಬಸ್ಥರೆಲ್ಲ ಬುಧವಾರ ಹಾಗೂ ಗುರುವಾರ ಒಟ್ಟಾಗಿ ಕುಳಿತು ಭೋಜನ ಸವಿದರು. ಪರಸ್ಪರ ಎಳ್ಳು–ಬೆಲ್ಲ ನೀಡಿ, ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ನಗರದ ವಿವಿಧ ದೇಗುಲಗಳಲ್ಲಿ ನಸುಕಿನಲ್ಲೇ ಹಬ್ಬದ ಸಂಭ್ರಮ ಮನೆ ಮಾಡಿತು. ಶಹಾಪುರದ ಕಪಿಲೇಶ್ವರ ದೇವಸ್ಥಾನ, ಕೋಟೆ ಕೆರೆ ಆವರಣದಲ್ಲಿನ ದುರ್ಗಾದೇವಿ ದೇವಸ್ಥಾನ, ಚನ್ನಮ್ಮ ವೃತ್ತದ ಬಳಿ ಇರುವ ಗಣೇಶ ದೇವಸ್ಥಾನ, ಪೊಲೀಸ್ ಹೆಡ್‌ಕ್ವಾರ್ಟರ್ಸ್‌ನ ವೀರಭದ್ರೇಶ್ವರ ದೇವಸ್ಥಾನ, ಬಸವಣ್ಣ ಗಲ್ಲಿಯ ಲಕ್ಷ್ಮಿ ಮಂದಿರ, ಬಾಂಧುರ್ ಗಲ್ಲಿಯ ಮರಗಾಯಿ ಮಂದಿರ, ಅನಗೋಳದ ಲಕ್ಷ್ಮಿ ಮಂದಿರ, ತಾಲ್ಲೂಕಿನ ಬಡೇಕೊಳ್ಳಮಠದ ನಾಗೇಂದ್ರಸ್ವಾಮಿ ಮಠ, ಕಣಬರಗಿಯ ಸಿದ್ಧೇಶ್ವರ ದೇವಸ್ಥಾನ, ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡ ವೈಜನಾಥ ಮಂದಿರ ಮತ್ತಿತರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿದವು. ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಜಲಾಶಯ ಹಾಗೂ ಜಲಪಾತಗಳ ತಾಣಗಳಾದ ಸೊಗಲ ಸೋಮೇಶ್ವರ, ಮಲಪ್ರಭಾ, ಘಟಪ್ರಭಾ, ಕೃಷ್ಣಾ ನದಿ ದಡ, ಗೋಕಾಕ ಫಾಲ್ಸ್ ಸೇರಿದಂತೆ ಹೊಳೆ– ಹಳ್ಳಗಳಲ್ಲಿ ಜನ ಪುಣ್ಯಸ್ನಾನ ಮಾಡಿದರು. ಸವದತ್ತಿ ತಾಲ್ಲೂಕಿನ ಯಲ್ಲಮ್ಮನಗುಡ್ಡದಲ್ಲಿ ಸಂಕ್ರಮಣದ ದಿನ ಭಕ್ತರ ಸಂಖ್ಯೆಯೂ ಇಮ್ಮಡಿಸಿತು.
ತಾಲ್ಲೂಕಿನ ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಪ್ರವಾಸಿಗರ ದಂಡೇ ಲಗ್ಗೆ ಇಟ್ಟಿತ್ತು. ಕರ್ನಾಟಕ ಹಾಗೂ ಮಹಾರಾಷ್ಟ್ರದಿಂದ ಬಂದಿದ್ದ ಜನರು ಹುಲಿ, ಚಿರತೆ, ಸಿಂಹ, ನರಿ, ಜಿಂಕೆ, ಕೃಷ್ಣಮೃಗ, ನವಿಲು ಮತ್ತಿತರ ಪ್ರಾಣಿ–ಪಕ್ಷಿಗಳನ್ನು ವೀಕ್ಷಿಸಿ ಸಂಭ್ರಮಿಸಿದರು.
ನಗರದ ಮಾರುಕಟ್ಟೆ ಪ್ರದೇಶದಲ್ಲಿ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಖರ್ಚಿಕಾಯಿ ವಿವಿಧ ರೀತಿಯ ಚಟ್ನಿಗಳು, ಸಿಹಿ ತಿನಿಸುಗಳು ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಮಾರಾಟ ಜೋರಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.