ADVERTISEMENT

ಮಲಪ್ರಭಾ ಹರಿವು ಹೆಚ್ಚಳ: ರಾಮದುರ್ಗ– ದೊಡಮಂಗಡಿ ಸೇತುವೆ ಮೇಲೆ ನೀರು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 11:26 IST
Last Updated 3 ಸೆಪ್ಟೆಂಬರ್ 2022, 11:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಮದುರ್ಗ (ಬೆಳಗಾವಿ ಜಿಲ್ಲೆ): ಸವದತ್ತಿ ತಾಲ್ಲೂಕಿನ ನವಿಲುತೀರ್ಥದ ಮಲಪ್ರಭಾ ಜಲಾಶಯದಿಂದ ನದಿಗೆ ನೀರು ಹರಿಸುತ್ತಿರುವ ಕಾರಣ, ರಾಮದುರ್ಗ ಪಟ್ಟಣ– ದೊಡಮಂಗಡಿ ಸೇತುವೆ ಮೇಲೆ ನೀರು ಹರಿಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಸೇತುವೆ ಸಂಚಾರ ಬಂದ್ ಮಾಡಲಾಗಿದೆ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯ ಕಾರಣ ಮಲಪ್ರಭಾ ನದಿಗೆ ನಿರಂತರ 7,544 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಇಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಸೆ.1ರಂದೇ ಮಲಪ್ರಭಾ ಜಲಾಶಯ ಪೂರ್ಣ ಪ್ರಮಾನದಲ್ಲಿ (2079.50 ಅಡಿ) ಭರ್ತಿಯಾಗಿದೆ. ಆದರೂ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ನಿಲ್ಲದ ಕಾರಣ ಒಳಹರಿವಿನಷ್ಟೇ ನೀರನ್ನು ಹೊರಬಿಡಲಾಗುತ್ತಿದೆ.

ಇನ್ನು ಒಂದು ವಾರ ಹೀಗೇ ನೀರು ಹರಿಸಿದರೆ ರಾಮದುರ್ಗ ತಾಲ್ಲೂಕು ಹಾಗೂ ಗದಗ ಜಿಲ್ಲೆಯ ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಲಿದೆ ಎಂದು ಅಣೆಕಟ್ಟೆಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಮುಂಜಾಗ್ರತಾ ಕ್ರಮವಾಗಿ ನದಿ ತೀರಕ್ಕೆ ಹೋಗದಂತೆ ಗ್ರಾಮಗಳಲ್ಲಿ ಡಂಗೂರ ಸಾರಲಾಗಿದೆ. ನೀರಿನಲ್ಲಿ ಮುಳುಗಿದ ಸೇತುವೆಗಳತ್ತ ಯಾರೂ ಸುಳಿಯದಂತೆ ಪೊಲೀಸ್‌ ಕಾವಲು ಏರ್ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.