ADVERTISEMENT

ಬೆಳಗಾವಿಯಲ್ಲಿ 22ಸೇತುವೆಗಳ ಮುಳುಗಡೆ: ಮುಳ್ಳಯ್ಯನಗಿರಿ ಪ್ರವೇಶ ನಿರ್ಬಂಧ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 2:41 IST
Last Updated 23 ಜುಲೈ 2024, 2:41 IST
<div class="paragraphs"><p>ಬೆಳಗಾವಿ ಜಿಲ್ಲೆಯ ಯಮಕನಮರಡಿ ಬಳಿ ಘಟಪ್ರಭಾ ನದಿಗೆ ಅಡ್ಡಲಾಗಿ  ನಿರ್ಮಿಸಿದ ಶೆಟ್ಟಿಹಳ್ಳಿ ಸೇತುವೆ ಜಲಾವೃತವಾಗಿರುವ ದೃಶ್ಯ</p></div>

ಬೆಳಗಾವಿ ಜಿಲ್ಲೆಯ ಯಮಕನಮರಡಿ ಬಳಿ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಶೆಟ್ಟಿಹಳ್ಳಿ ಸೇತುವೆ ಜಲಾವೃತವಾಗಿರುವ ದೃಶ್ಯ

   

ಪ್ರಜಾವಾಣಿ ಚಿತ್ರ

ಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶ ಮತ್ತು ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ಮಲಪ್ರಭಾ, ಘಟಪ್ರಭಾ, ಕೃಷ್ಣಾ, ವೇದಗಂಗಾ, ದೂಧಗಂಗಾ, ಹಿರಣ್ಯಕೇಶಿ ಮತ್ತು ಮಾರ್ಕಂಡೇಯ ನದಿ ಉಕ್ಕಿ ಹರಿಯುತ್ತಿವೆ. ಖಾನಾಪುರ, ಗೋಕಾಕ, ಮೂಡಲಗಿ, ಹುಕ್ಕೇರಿ, ಚಿಕ್ಕೋಡಿ, ನಿಪ್ಪಾಣಿ ತಾಲ್ಲೂಕುಗಳಲ್ಲಿ 22 ಸೇತುವೆ ಮುಳುಗಡೆಯಾಗಿವೆ.

ದೂಧಗಂಗಾ ನದಿ ಮೇಲಿನ ಭೋಜ– ಕಾರದಗಾ ಸೇತುವೆ ಮೇಲೆ 16 ಅಡಿ, ಮಲ್ಲಿಕವಾಡ– ದಾನವಾಡ ಸೇತುವೆ ಮೇಲೆ 13 ಅಡಿ ಹಾಗೂ ಭೋಜವಾಡ– ನಿಪ್ಪಾಣಿ ಕೆಳಸೇತುವೆ ಮೇಲೆ 12 ಅಡಿಗಿಂತ ಹೆಚ್ಚು ನೀರು ಹರಿಯುತ್ತಿದೆ.

‘ಸದ್ಯ ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ನದಿಗಳ ದಡದಲ್ಲಿ ಪ್ರವಾಹ ಭೀತಿ ಇಲ್ಲ. ಮುಂಜಾಗ್ರತೆ ವಹಿಸಲಾಗಿದೆ. 124 ಮನೆಗಳಿಗೆ ಹಾನಿಯಾಗಿದ್ದು, ಎರಡು ಮನೆಗಳು ಸಂಪೂರ್ಣ ಕುಸಿದಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ನಿಯಮಾವಳಿಯಂತೆ, ಪರಿಹಾರ ಬಿಡುಗಡೆಗೆ ತಹಶೀಲ್ದಾರ್‌ರಿಗೆ ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಯಾವುದೆಲ್ಲ ಸೇತುವೆ ಮುಳುಗಡೆ?: ಚಿಕ್ಕಹಟ್ಟಿಹೊಳಿ– ಚಿಕ್ಕಮುನವಳ್ಳಿ, ಚಿಗಡೊಳ್ಳಿ– ನಲ್ಲಾನಟ್ಟಿ, ಗೋಕಾಕ– ಲೋಳಸೂರ, ಮುನ್ಯಾಳ– ಹುಣಶ್ಯಾಳ ಪಿ.ಜಿ, ಪಟಗುಂದಿ– ತಿಗಡಿ, ಸುಣಧೋಳಿ– ಮೂಡಲಗಿ, ಅವರಾದಿ– ಮಹಾಲಿಂಗಪುರ, ಉದಗಟ್ಟಿ– ವಡೇರಹಟ್ಟಿ, ಅರ್ಜುನವಾಡ– ಕೋಚರಿ, ಯರನಾಳ– ಹುಕ್ಕೇರಿ, ಕುರಣಿ– ಕೋಚರಿ, ಭೋಜ– ಕಾರದಗಾ, ಭೋಜವಾಡಿ– ನಿಪ್ಪಾಣಿ, ಮಲ್ಲಿಕವಾಡ– ದಾನವಾಡ, ಸಿದ್ನಾಳ– ಅಕ್ಕೋಳ, ಭಾರವಾಡ– ಕುನ್ನೂರ, ಭೋಜ– ಕುನ್ನೂರ, ಜತ್ರಾಟ– ಭೀವಶಿ, ಬಾವನಸೌಂದತ್ತಿ– ಮಾಂಜರಿ ಮತ್ತಿತರ ಸೇತುವೆಗಳು ಮುಳುಗಿವೆ.

ಮುಳ್ಳಯ್ಯನಗಿರಿ: ನಿರ್ಬಂಧ ವಿಸ್ತರಣೆ

ಚಿಕ್ಕಮಗಳೂರು: ಮಳೆ ಕಡಿಮೆಯಾಗಿದ್ದರೂ, ಭೂಕುಸಿತದ ಆತಂಕ ಕಡಿಮೆಯಾಗಿಲ್ಲ. ಹೀಗಾಗಿ ಮುಳ್ಳಯ್ಯನಗಿರಿಗೆ ಪ್ರವಾಸಿಗರ ನಿರ್ಬಂಧವನ್ನು ಇನ್ನೂ ಒಂದು ವಾರ ಮುಂದುವರಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

‘ಮುಳ್ಳಯ್ಯನಗಿರಿ ಭಾಗದಲ್ಲಿ ಮಳೆ ನಿರಂತರವಾಗಿ ಇರುತ್ತದೆ. ಕಿರಿದಾದ ರಸ್ತೆಯಲ್ಲಿ ಯಾವಾಗ ಬೇಕಾದರೂ ಮಣ್ಣು ಕುಸಿಯುವ ಸಾಧ್ಯತೆ ಇದೆ. ಈಗ ಕುಸಿದಿರುವ ಮಣ್ಣು ತೆಗೆದು ಸರಿಪಡಿಸಲು ಇನ್ನೂ ಕಾಲವಕಾಶ ಬೇಕು. ಸದ್ಯಕ್ಕೆ ಪ್ರವಾಸಿಗರ ವಾಹನಗಳ ಸಂಚಾರ ಸೂಕ್ತವಲ್ಲ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದ್ದರಿಂದ ಜುಲೈ 29ರ ವರೆಗೆ ನಿರ್ಬಂಧ ಮುಂದುವರೆಸಿದ್ದೇವೆ’ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.