ADVERTISEMENT

ಸಾಲ ಮನ್ನಾ ಘೋಷಣೆ: ಶೇ 70ರಷ್ಟು ರೈತರಿಗೆ ಇನ್ನೂ ದಕ್ಕದ ಪ್ರಯೋಜನ !

ಶ್ರೀಕಾಂತ ಕಲ್ಲಮ್ಮನವರ
Published 6 ಜುಲೈ 2019, 19:30 IST
Last Updated 6 ಜುಲೈ 2019, 19:30 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಬೆಳಗಾವಿ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರೈತರ ಸಾಲ ಮನ್ನಾ ಘೋಷಿಸಿ, ಒಂದು ವರ್ಷ ಕಳೆಯಿತು.ಆದರೆ, ನಿರೀಕ್ಷಿತ ಮಟ್ಟದಲ್ಲಿ ಇದರ ಲಾಭ ರೈತರಿಗೆ ದೊರೆಯಲಿಲ್ಲ. ಜಿಲ್ಲೆಯ ಕೇವಲ ಶೇ 30ರಷ್ಟು ರೈತರಿಗೆ ಮಾತ್ರ ಸಾಲ ಮರುಪಾವತಿಯಾಗಿದ್ದು, ಇನ್ನುಳಿದ ರೈತರ ಖಾತೆಗಳಿಗೆ ಹಣ ಪಾವತಿಯಾಗಿಲ್ಲ.

ಜಿಲ್ಲೆಯ ಒಟ್ಟು 4,88,303 ರೈತರು ಸಾಲ ಮನ್ನಾ ಯೋಜನೆಗೆ ಅರ್ಹರಾಗಿದ್ದಾರೆ. ಸಹಕಾರ ಸಂಘಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಒಟ್ಟು ₹ 4,650 ಕೋಟಿ ಬೆಳೆ ಸಾಲ ಪಡೆದುಕೊಂಡಿದ್ದರು. ಇವರ ಪೈಕಿ 1,49,477 (ಶೇ 30) ರೈತರು ಪಡೆದುಕೊಂಡಿದ್ದ ₹ 598 ಕೋಟಿ ಸಾಲದ ಹಣವನ್ನು ಸರ್ಕಾರ ಮರುಪಾವತಿಸಿದೆ. ಇನ್ನುಳಿದ ರೈತರ ಹಣ ಪಾವತಿ ಮುಂದಿನ ಹಂತದಲ್ಲಿ ಆಗುವ ನಿರೀಕ್ಷೆ ಇದೆ.

ಸಹಕಾರ ಸಂಘಗಳಲ್ಲಿ ಹೆಚ್ಚು:

ADVERTISEMENT

ಸರ್ಕಾರ ನಿರ್ಧರಿಸಿದ ದಿನಾಂಕವಾದ 2018ರ ಜುಲೈ 10ರೊಳಗೆ ವಿವಿಧ ಸಹಕಾರ ಸಂಘಗಳಲ್ಲಿ 2,87,402 ರೈತರ ₹ 1,162 ಕೋಟಿ ಬೆಳೆ ಸಾಲ ಕಟ್‌ಬಾಕಿ ಇತ್ತು. ಇದರ ಪೈಕಿ 93,000 ರೈತರ ₹ 330 ಕೋಟಿ ಹಣವನ್ನು ಸರ್ಕಾರ ಪಾವತಿಸಿದೆ. ಇನ್ನುಳಿದ ₹ 832 ಕೋಟಿ ಪಾವತಿಯಾಗಬೇಕಾಗಿದೆ.

ಇದೇ ರೀತಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 2,00,901 ರೈತರ ₹ 3,488 ಕೋಟಿ ಬೆಳೆ ಸಾಲ ಕಟ್‌ಬಾಕಿ ಇತ್ತು. ಇದರ ಪೈಕಿ 56,477 ರೈತರ ₹ 268 ಕೋಟಿ ಬಾಕಿ ಹಣವನ್ನು ಸರ್ಕಾರ ಸಂದಾಯ ಮಾಡಿದೆ. ₹ 3,320 ಕೋಟಿ ಬಾಕಿ ಉಳಿದಿದೆ.

ಹೊಸ ಸಾಲ ಸಿಗುತ್ತಿಲ್ಲ– ರೈತರ ಅಳಲು:

ಸಾಲ ಮನ್ನಾ ಹಣ ಪಾವತಿಯಾಗದ ರೈತರಿಗೆ ಹೊಸ ಬೆಳೆ ಸಾಲ ಸಿಗುತ್ತಿಲ್ಲ. ಹಳೆಯ ಸಾಲವನ್ನು ತೀರಿಸಿದ ನಂತರವೇ ಹೊಸ ಸಾಲ ನೀಡಲಾಗುವುದು ಎನ್ನುತ್ತಿದ್ದಾರೆ ಬ್ಯಾಂಕ್‌ ಅಧಿಕಾರಿಗಳು. ಸರ್ಕಾರ ಇದುವರೆಗೆ ಸಾಲ ಪಾವತಿಸಿದ ರೈತರಿಗೆ ಸಲೀಸಾಗಿ ಮರು ಸಾಲ ನೀಡಲಾಗುತ್ತಿದೆ. ಆದರೆ, ಸಾಲ ಮರುಪಾವತಿಯಾಗದ ಶೇ 70ರಷ್ಟು ರೈತರಿಗೆ ಸಾಲ ನೀಡಲು ಬ್ಯಾಂಕ್‌ಗಳು ಹಿಂದೇಟು ಹಾಕುತ್ತಿವೆ.

‘ಸಾಲ ಪಾವತಿಸಿ, ಅಕೌಂಟ್‌ ಬಂದ್‌ ಮಾಡಿದ ನಂತರವೇ ಹೊಸ ಸಾಲ ನೀಡುತ್ತೇವೆ ಎಂದು ಬ್ಯಾಂಕ್‌ ಅಧಿಕಾರಿಗಳು ಪಟ್ಟು ಹಿಡಿದುಕೊಂಡು ಕುಳಿತಿದ್ದಾರೆ. ಈಗ ನಾವೇನು ಮಾಡಬೇಕು? ಒಂದೆಡೆ, ಸರ್ಕಾರ ಸಾಲ ಮನ್ನಾದ ಹಣ ಪಾವತಿಸುತ್ತಿಲ್ಲ. ಇನ್ನೊಂದೆಡೆ, ಬ್ಯಾಂಕ್‌ಗಳು ನಮಗೆ ಹೊಸ ಸಾಲ ನೀಡುತ್ತಿಲ್ಲ. ಈಗ ಹೇಗೆ ಬಿತ್ತನೆ ಮಾಡುವುದು’ ಎಂದು ರೈತ ಮುಖಂಡ ಸಿದಗೌಡ ಮೋದಗಿ ಪ್ರಶ್ನಿಸಿದರು.

‘ಮಂಡ್ಯ, ಹಾಸನ ರೈತರಿಗೆ ನೀಡಿರುವಂತೆ ಬೆಳಗಾವಿಯ ರೈತರಿಗೆ ಇದುವರೆಗೆ ಋಣ ಮುಕ್ತ ಪತ್ರವನ್ನು ಏಕೆ ನೀಡಿಲ್ಲ? ಶೇ 30ರಷ್ಟು ರೈತರ ಸಾಲ ಮನ್ನಾ ನಿಜವಾಗಿಯೂ ಆಗಿದ್ದರೆ ತಕ್ಷಣ ಋಣಮುಕ್ತ ಪತ್ರ ನೀಡಲಿ. ರೈತರು ನೆಮ್ಮದಿಯಿಂದ ಇರಬಹುದು. ಇಲ್ಲದಿದ್ದರೆ, ಯಾವುದೋ ಹಳೆಯ ಲೆಕ್ಕ ತೋರಿಸಿ, ರೈತರನ್ನು ಪುನಃ ಪೀಡಿಸಬಹುದು’ ಎಂದು ಆತಂಕ ವ್ಯಕ್ಪಪಡಿಸಿದರು.

ವಿಳಂಬಕ್ಕೆ ಕಾರಣ:

‘ಲೋಕಸಭಾ ಚುನಾವಣೆ ಘೋಷಣೆಯ ಹಿನ್ನೆಲೆಯಲ್ಲಿ ಎರಡು ತಿಂಗಳು ಕಾಲ ನೀತಿ ಸಂಹಿತೆ ಜಾರಿಯಲ್ಲಿತ್ತು. ಹೀಗಾಗಿ ಆ ಅವಧಿಯಲ್ಲಿ ಹಣ ಬಿಡುಗಡೆಯಾಗಲಿಲ್ಲ. ನಂತರ ಜೂನ್‌ನಲ್ಲಿ ಒಂದು ಕಂತು ಬಿಡುಗಡೆಯಾಗಿತ್ತು’ ಎಂದು ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ರಾಹುಲ್‌ ಹೇಳಿದರು.

‘ಕೆಲವು ಪ್ರಕರಣಗಳಲ್ಲಿ ರೈತರ ದಾಖಲೆ ಪತ್ರಗಳು ಸರಿಯಾಗಿ ತಾಳೆಯಾಗಿಲ್ಲ. ರೈತರ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌, ಪಹಣಿ ಪತ್ರ ಹಾಗೂ ಬ್ಯಾಂಕ್‌ ಖಾತೆ ಸಂಖ್ಯೆಯ ದಾಖಲೆ ಹೊಂದಾಣಿಕೆಯಾಗದ ಕಾರಣ ಕೆಲವರ ಹಣ ಪಾವತಿಯಾಗಿಲ್ಲ. ಸರಿಯಾದ ಮಾಹಿತಿ ನೀಡುವಂತೆ ಅವರಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.