ADVERTISEMENT

ಚಿಕ್ಕೋಡಿ: ಸಮಸ್ಯೆಗಳ ಸುಳಿಯಲ್ಲಿ ಸರ್ಕಾರಿ ಕಾಲೇಜು

ನೀರಿಲ್ಲ, ಮೈದಾನವಿಲ್ಲ, ಕಾಯಂ ಉಪನ್ಯಾಸಕರಿಲ್ಲ

ಸುಧಾಕರ ಎಸ್.ತಳವಾರ, ಬೆಂಗಳೂರು
Published 11 ನವೆಂಬರ್ 2021, 19:30 IST
Last Updated 11 ನವೆಂಬರ್ 2021, 19:30 IST
ಚಿಕ್ಕೋಡಿ ಹೊರವಲಯದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನ ನೋಟ
ಚಿಕ್ಕೋಡಿ ಹೊರವಲಯದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನ ನೋಟ   

ಚಿಕ್ಕೋಡಿ: ಸುಸಜ್ಜಿತ ಕಟ್ಟಡವಿದೆ. ಉತ್ತಮ ಫಲಿತಾಂಶವೂ ಬರುತ್ತಿದೆ. ಆದರೆ, ವಿದ್ಯಾರ್ಥಿಗಳ ಸಂಚಾರಕ್ಕೆ ಸೂಕ್ತ ಸಾರಿಗೆ ಸೌಲಭ್ಯವಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಆಟದ ಮೈದಾನವಿಲ್ಲ. ವಿಜ್ಞಾನ ಮತ್ತು ವಾಣಿಜ್ಯ ವಿಭಾಗ ಆರಂಭವಾಗಿನಿಂದಲೂ ಕಾಯಂ ಉಪನ್ಯಾಸಕರನ್ನು ಭರ್ತಿ ಮಾಡಿಲ್ಲ.

–ಪಟ್ಟಣದ ಕೇಂದ್ರ ಬಸ್ ನಿಲ್ದಾಣದಿಂದ ನಾಲ್ಕು ಕಿ.ಮೀ. ದೂರದಲ್ಲಿ ಗುಡ್ಡದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಕ್ಯಾಂಪಸ್‌ನೊಳಗೆ ಕಂಡುಬರುವ ಚಿತ್ರಣವಿದು.

ಗ್ರಾಮೀಣ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗಾಗಿ ಸರ್ಕಾರ ಕಾಲೇಜು ಆರಂಭಿಸಿದೆ. ಆದರೆ, ಹೊರವಲಯದಲ್ಲಿ ಜಾಗ ನೀಡಲಾಗಿದೆ. ಪ್ರಸಕ್ತ ವರ್ಷ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳು ಸೇರಿ ಒಟ್ಟು 602 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪ್ರವೇಶ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ. ಬೋಧಕ ಸಿಬ್ಬಂದಿ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಿದ್ದಾರೆ. ಪ್ರಥಮ ಮತ್ತು ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗಳಲ್ಲಿ ಸರಾಸರಿ ಶೇ 55ರಿಂದ ಶೇ 70ರಷ್ಟು ಫಲಿತಾಂಶ ಬರುತ್ತಿದೆ.

ADVERTISEMENT

‘ಕಾಲೇಜಿನಲ್ಲಿ 2017-18ರಲ್ಲಿ ವಿಜ್ಞಾನ ವಿಭಾಗ ಆರಂಭಿಸಲಾಗಿದೆ. ಆದರೆ, ಇದುವರೆಗೂ ಕಾಯಂ ಉಪನ್ಯಾಸಕ ಸಿಬ್ಬಂದಿಯೇ ನೇಮಕವಾಗಿಲ್ಲ. ನಿಯೋಜನೆ ಮೇರೆಗೆ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಕಾಯಂ ಸಿಬ್ಬಂದಿ ಇಲ್ಲದೇ ಇರುವುದರಿಂದ ವಿಜ್ಞಾನ ವಿಭಾಗದಲ್ಲಿ ಪ್ರವೇಶ ಪಡೆಯಲು ಮಕ್ಕಳು ಹಿಂದೇಟು ಹಾಕುತ್ತಿದ್ದಾರೆ’ ಎನ್ನುವುದು ಪ್ರಾಚಾರ್ಯ ಮಹೇಶ ತಾವದಾರೆ ಅವರ ಅನಿಸಿಕೆ.

‘ಕಲಾ ವಿಭಾಗದಲ್ಲಿ ಕನ್ನಡ ಭಾಷಾ ಉಪನ್ಯಾಸಕರ ಹುದ್ದೆ ಖಾಲಿ ಇದೆ. ವಾಣಿಜ್ಯ ವಿಭಾಗದಲ್ಲೂ ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನ ವಿಷಯಗಳ ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ನಿಯೋಜನೆ ಮತ್ತು ಅತಿಥಿ ಉಪನ್ಯಾಸಕರೆ ಮಕ್ಕಳಿಗೆ ಈ ಎಲ್ಲ ವಿಷಯಗಳ ಪಾಠ ಬೋಧನೆ ಮಾಡುತ್ತಿದ್ದಾರೆ. ಜವಾನ ಹುದ್ದೆ ಮಂಜೂರಾಗಿದ್ದರೂ ಭರ್ತಿಯಾಗಿಲ್ಲ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಪದವಿಪೂರ್ವ ಶಿಕ್ಷಣ ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆಸಲಾಗಿದ್ದು, ಭರ್ತಿ ಮಾಡುವ ಭರವಸೆ ದೊರೆತಿದೆ’ ಎನ್ನುತ್ತಾರೆ ಅವರು.

ಸಂಚಾರವೇ ದೊಡ್ಡ ಸವಾಲು:ಕೇಂದ್ರ ಬಸ್ ನಿಲ್ದಾಣದಿಂದ 4 ಕಿ.ಮೀ. ಮತ್ತು ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಿಂದ 2 ಕಿ.ಮೀ. ದೂರದಲ್ಲಿರುವ ಕಾಲೇಜಿಗೆ ಬಂದು ಹೋಗುವುದೇ ವಿದ್ಯಾರ್ಥಿಗಳಿಗೆ ಬಹುದೊಡ್ಡ ಸವಾಲಾಗಿದೆ.

ಸರ್ಕಾರವು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ನೀಡಿದೆ. ಆದರೆ, ಈ ಕಾಲೇಜಿಗೆ ಹೋಗಿ ಬರಲು ಸಕಾಲದಲ್ಲಿ ಬಸ್ ಇಲ್ಲ. ನಿತ್ಯವೂ ಬೆಳಿಗ್ಗೆ ಮತ್ತು ಸಂಜೆ ಒಂದು ಬಸ್ ಎರಡು ಟ್ರಿಪ್ ಸಂಚರಿಸುತ್ತದೆ. ಪದವಿ ಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಈ ಎರಡೂ ಕಾಲೇಜುಗಳ ತರಗತಿಗಳ ವೇಳಾಪಟ್ಟಿಯಲ್ಲೂ ಬದಲಾವಣೆ ಇದೆ. ಇದಕ್ಕೆ ತಕ್ಕಂತೆ ಬಸ್ ಇಲ್ಲ. ಪರಿಣಾಮ ವಿದ್ಯಾರ್ಥಿ–ವಿದ್ಯಾರ್ಥಿನಿಯರು ಎರಡು ಕಿ.ಮೀ. ನಡೆದುಕೊಂಡು (ಮುಖ್ಯ ರಸ್ತೆಯಿಂದ) ಹೋಗಬೇಕು. ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ಅವರ ಕೋರಿಕೆಯಾಗಿದೆ.

ಕ್ಯಾಂಪಸ್‌ನಲ್ಲಿ ಕೊರೆಸಿದ್ದ 2 ಕೊಳವೆಬಾವಿಗಳು ಬತ್ತಿವೆ. ಇದರಿಂದ ಕುಡಿಯುವ ನೀರಿಗೆ ಸಮಸ್ಯೆ ಇದೆ. ಪಕ್ಕದ ರೈತರ ಹೊಲದಲ್ಲಿನ ಕೊಳವೆಬಾವಿಯಿಂದ ನೀರು ಪಡೆಯಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.