ADVERTISEMENT

ಬೆಳಗಾವಿ: ಸುವರ್ಣ ವಿಧಾನಸೌಧ ಸುತ್ತ ಪ್ರತಿಭಟನೆಯ ಮಹಾಪೂರ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಲವು ಸಂಘಟನೆಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 15:47 IST
Last Updated 20 ಡಿಸೆಂಬರ್ 2021, 15:47 IST
ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿ ಅಖಿಲ ಕರ್ನಾಟಕ ಹಡಪದ ಸಮಾಜ ಸಂಘದ ಕಾರ್ಯಕರ್ತರು ಸೋಮವಾರ ಪ್ರತಿಭಟಿಸಿದರು
ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿ ಅಖಿಲ ಕರ್ನಾಟಕ ಹಡಪದ ಸಮಾಜ ಸಂಘದ ಕಾರ್ಯಕರ್ತರು ಸೋಮವಾರ ಪ್ರತಿಭಟಿಸಿದರು   

ಬೆಳಗಾವಿ: ವಿಧಾನಮಂಡಲ ಚಳಿಗಾಲ ಅಧಿವೇಶನದ 6ನೇ ದಿನವಾದ ಸೋಮವಾರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಲವು ಸಂಘಟನೆಗಳ ಕಾರ್ಯಕರ್ತರು ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು. ತಮ್ಮ ಹಕ್ಕೊತ್ತಾಯ ಮಂಡಿಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಅಭಿವೃದ್ಧಿ ನಿಗಮ ಸ್ಥಾಪಿಸಿ: ‘ಹಡಪದ(ಕ್ಷೌರಿಕ) ಸಮುದಾಯದ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ರಚಿಸಬೇಕು’ ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಹಡಪದ ಸಮಾಜ ಸಂಘದ ಕಾರ್ಯಕರ್ತರು ಪ್ರತಿಭಟಿಸಿದರು.

‘ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಹಾಗೂ ಸಾಮಾಜಿಕವಾಗಿ ನಮ್ಮ ಸಮುದಾಯ ಹಿಂದುಳಿದಿದೆ. ಪ್ರತಿ ತಾಲ್ಲೂಕಿನಲ್ಲಿ ಹಡಪದ ಸಮುದಾಯದವರಿಗಾಗಿ ಸಮುದಾಯ ಭವನ ನಿರ್ಮಿಸಬೇಕು. ಸುಕ್ಷೇತ್ರ ತಂಗಡಗಿಯ ಅಪ್ಪಣ್ಣದೇವರ ಮಹಾಸಂಸ್ಥಾನ ಮಠದ ಅಭಿವೃದ್ಧಿಗೆ ₹25 ಕೋಟಿ ಅನುದಾನ ಬಿಡುಗಡೆಗೊಳಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಗುಡ್ಡಪ್ಪ ಮಲ್ಲೂರ, ನಾಗರಾಜ ಕಾಯಕದ, ಸಿದ್ದಣ್ಣ ಮುಂಡಗೋಡ, ನಾಗರಾಜ ಸರ್ಜಾ‍‍‍ಪುರ, ಸುರೇಶ ಹಡಪದ, ಸಂತೋಷ ಹಡಪದ, ನಾಗಪ್ಪ ಹಡಪದ, ಶಿವಾನಂದ ಹುನ್ನೂರ ಇದ್ದರು.

ಸೇವಾಭದ್ರತೆ ಒದಗಿಸಿ: ಸೇವಾಭದ್ರತೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ಪ‍್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಒಕ್ಕೂಟದವರು ಪ್ರತಿಭಟಿಸಿದರು.

‘ರಾಜ್ಯದ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ 13 ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಗೌರವಧನದ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಸರ್ಕಾರ ನಮ್ಮ ಸೇವೆ ಕಾಯಂಗೊಳಿಸುತ್ತಿಲ್ಲ. ಇದರಿಂದಾಗಿ ಕೊರೊನಾ ಸಂಕಷ್ಟ ಸಮಯದಲ್ಲಿ ಜೀವನ ನಿರ್ವಹಣೆ ಕಷ್ಟವಾಗಿದೆ. ಇನ್ನಾದರೂ ಎಚ್ಚೆತ್ತುಕೊಂಡು ನಮಗೆ ನ್ಯಾಯ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಹನುಮಂತಗೌಡ ಕಲಮನಿ, ಪ್ರಧಾನ ಕಾರ್ಯದರ್ಶಿ ಶಿವಾನಂದ ಕಲ್ಲೂರ, ಆರ್‌.ಡಿ.ಚಲವಾದಿ, ಚಂದ್ರಶೇಖರ ಕಾಳಣ್ಣವರ, ಎಸ್‌.ವಿ.ಹಿರೇಮಠ ಇದ್ದರು.

ಮೇದಾರ ಸಮುದಾಯದಿಂದ ಪ್ರತಿಭಟನೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ಮೇದಾರ(ಬುರುಡ) ಕೇತೇಶ್ವರ ಗಿರಿಜನ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಪ್ರತಿಭಟಿಸಿದರು.

‘ರಾಜ್ಯದಲ್ಲಿ ಸಮುದಾಯದ 2.5 ಲಕ್ಷಕ್ಕಿಂತ ಅಧಿಕ ಜನರಿದ್ದಾರೆ. ಅವರಿಗೆ ಅಲೆಮಾರಿ ಗಿರಿ ಜನಾಂಗದ ಸೌಲಭ್ಯಗಳನ್ನು ಒದಗಿಸಬೇಕು. ಕುಲಗುರು ಕೇತೇಶ್ವರ ಜಯಂತಿಯನ್ನು ಪ್ರತಿವರ್ಷ ಗೌರಿ ಹುಣ್ಣಿಮೆಯಂದು ಸರ್ಕಾರದ ವತಿಯಿಂದಲೇ ಆಚರಿಸಬೇಕು. ಕುಲಕಸುಬು ಮುಂದುವರಿಸಿಕೊಂಡು ಹೋಗಲು ಅಗತ್ಯ ಸೌಕರ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ಗೌರವಾಧ್ಯಕ್ಷ ನಾಗೇಶ ಕಡೋಲಿ, ಅಧ್ಯಕ್ಷ ಬಸವರಾಜ ಬೆಟಗೇರಿ, ಉಪಾಧ್ಯಕ್ಷ ಬಸವಣ್ಣಿ ಗುಂಜಿಕರ, ಚಂದ್ರಕಾಂತ ಸಾರಗೆ, ಯಲ್ಲಪ್ಪ ದೇವಲಾಪುರ, ಸಂತೋಷ ಸೂರ್ಯವಂಶಿ, ಶಿವಾನಂದ ಮೇದಾರ, ರಮೇಶ ಬುರುಡ ಇದ್ದರು.

ರಸ್ತೆ ವಿಸ್ತರಣೆಗೆ ಒತ್ತಾಯ: ಚಿಕ್ಕೋಡಿ ತಾಲ್ಲೂಕಿನ ಸದಲಗಾ ಗ್ರಾಮದಲ್ಲಿ ಮಹಾಲಿಂಗ ಸ್ವಾಮೀಜಿ ಶಾಲೆಯಿಂದ ರತ್ನಪ್ಪಣ್ಣ ಕುಂಬಾರ ವೃತ್ತದವರೆಗಿನ ರಸ್ತೆ ವಿಸ್ತರಿಸಬೇಕು. ಪಾದಚಾರಿ ಮಾರ್ಗ ನಿರ್ಮಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

‘ಈ ಮಾರ್ಗದಲ್ಲಿ ಹಲವು ಶಿಕ್ಷಣ ಸಂಸ್ಥೆಗಳಿವೆ. ರಸ್ತೆ ಇಕ್ಕಟ್ಟಿನಿಂದ ಕೂಡಿದ್ದು, ಆಗಾಗ ಅಪಘಾತ ಸಂಭವಿಸುತ್ತಿದೆ. ವಿದ್ಯಾರ್ಥಿಗಳು ಆತಂಕದಿಂದ ಸಂಚರಿಸುವಂತಾಗಿದೆ. ರಸ್ತೆ ವಿಸ್ತರಣೆ ಮತ್ತು ಪಾದಚಾರಿ ಮಾರ್ಗ ನಿರ್ಮಿಸುವಂತೆ ನಾಲ್ಕೈದು ವರ್ಷಗಳಿಂದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು.

ಅತಿಕ್ರಾಂತ ಪಾಟೀಲ, ಸಂಜೀವ ಕಾಂಬಳೆ, ಕೈಲಾಶ ಮಾಳಗೆ, ಜಿತೇಂದ್ರ ತವನಕ್ಕೆ, ಶಿರೀಷ ಅಡಕೆ, ವಿಕಾಸ ಹೆಬ್ರೆ, ಸಂತೋಷ ಎಚ್‌. ಇದ್ದರು.

ಕಾರ್ಮಿಕ ಕಾನೂನು ಜಾರಿಗೊಳಿಸಿ: ಕಾರ್ಮಿಕ ಕಾನೂನುಗಳನ್ನು ಜಾರಿಗೊಳಿಸಬೇಕು ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದುಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್‌ನವರು ಪ್ರತಿಭಟನೆ ನಡೆಸಿದರು.

‘ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಬೇಕು. ಮಂಡಳಿಯಿಂದ ಅಂಬೇಡ್ಕರ್‌ ಸಹಾಯಹಸ್ತ ಸ್ಮಾರ್ಟ್‌ ಕಾರ್ಡ್‌ಗಳನ್ನು ಉಚಿತವಾಗಿ ವಿತರಿಸಬೇಕು. ವಸತಿ ರಹಿತ ಹಮಾಲಿ ಕಾರ್ಮಿಕರಿಗೆ ಸೂರು ಒದಗಿಸುವ ಯೋಜನೆ ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.

ಅಧ್ಯಕ್ಷ ಕೆ.ಮಹಾಂತೇಶ, ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ, ಎನ್‌.ಕೆ.ಸುಬ್ರಹ್ಮಣ್ಯ, ಲಿಂಗಣ್ಣ ಟಿ., ವೆಂಕಪ್ಪ ಕೆಂಗಲ್‌ ಇದ್ದರು.

ಅತ್ಯಾಚಾರ ಹೇಳಿಕೆಗೆ ಖಂಡನೆ: ವಿಧಾನಸಭೆಯಲ್ಲಿ ಕಾಂಗ್ರೆಸ್‌ ಶಾಸಕ ಕೆ.ಆರ್‌.ರಮೇಶಕುಮಾರ್‌ ನೀಡಿರುವ ಅತ್ಯಾಚಾರದ ಹೇಳಿಕೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.

ವಿಧಾನ ಪರಿಷತ್‌ ಸದಸ್ಯೆ ಭಾರತಿ ಶೆಟ್ಟಿ, ಪ್ರೇಮಾ ಭಂಡಾರಿ, ಡಾ.ಸೋನಾಲಿ ಸರ್ನೋಬತ್‌, ಸುವರ್ಣಾ ಪಾಟೀಲ, ರೇಖಾ ಸಿ., ಶಾಂಭವಿ ಅಶ್ವತ್ಥಪುರ ಇತರರಿದ್ದರು. ಶಾಸಕ ರಮೇಶ್‌ಕುಮಾರ್‌ ರಾಜೀನಾಮೆಗೆ ಒತ್ತಾಯಿಸಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದ ಕಾರ್ಯಕರ್ತೆಯರನ್ನು ಪೊಲೀಸರು ವಶಕ್ಕೆ ಪಡೆದರು.

ರೈತ ವಿರೋಧಿ ಕೃಷಿ ಕಾಯ್ದೆ ಹಿಂಪಡೆಯಿರಿ: ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರವೂ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು. ವಿದ್ಯುತ್‌ ಖಾಸಗೀಕರಣ ನಿಲ್ಲಿಸಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದವರು ಪ್ರತಿಭಟನೆ ನಡೆಸಿದರು.

ಅಕಾಲಿಕ ಮಳೆಯಿಂದ ಹಾನಿಗೀಡಾದ ಬೆಳೆಗೆ ವೈಜ್ಞಾನಿಕವಾಗಿ ಪರಿಹಾರ ಒದಗಿಸಬೇಕು. ಸಕ್ಕರೆ ಕಾರ್ಖಾನೆಗಳು ಸಕಾಲಕ್ಕೆ ರೈತರ ಬಿಲ್‌ ಪಾವತಿಸಬೇಕು. ಪ್ರತಿ ಟನ್‌ ಕಬ್ಬಿಗೆ ₹3,500 ದರ ನಿಗದಿಪಡಿಸಬೇಕು. ರೈತರ ನಿರುದ್ಯೋಗಿ ಮಕ್ಕಳಿಗಾಗಿ ಉದ್ಯೋಗ ಸೃಷ್ಟಿಸಬೇಕು. ಕೃಷಿಗೆ ಪೂರಕವಾದ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ವಾಲಿ, ಅಧ್ಯಕ್ಷ ಸಿದ್ದನಗೌಡ ಪಾಟೀಲ, ಎಸ್‌.ರಂಗಸ್ವಾಮಿ, ಶಿವಾನಂದ ಹೊಳಿಹಡಗಲಿ, ಕಲಗೌಡ ಪಾಟೀಲ, ನಿಂಗಪ್ಪ ನಂದಿ, ಉಳವಪ್ಪ ಒಡೆಯರ, ಭೀಮಪ್ಪ ಕಾಳಸಾಯಿ, ಪಿ.ಎಚ್‌.ನೀರಲಕೇರಿ ಇದ್ದರು.

ಸೇವಾಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರಿ ಪ‍್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಒಕ್ಕೂಟದವರು ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿ ಸೋಮವಾರ ಪ್ರತಿಭಟಿಸಿದರು
ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿ ಮೇದಾರ(ಬುರುಡ) ಕೇತೇಶ್ವರ ಗಿರಿಜನ ಕ್ಷೇಮಾಭಿವೃದ್ಧಿ ಸಂಘದವರು ಸೋಮವಾರ ಪ್ರತಿಭಟನೆ ನಡೆಸಿದರು
ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿ ಚಿಕ್ಕೋಡಿ ತಾಲ್ಲೂಕಿನ ಸದಲಗಾ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು
ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್‌ನವರು ಸೋಮವಾರ ಪ್ರತಿಭಟಿಸಿದರು
ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿ ಸೋಮವಾರ ಪ್ರತಿಭಟಿಸಿದರು
ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಸೋಮವಾರ ಪ್ರತಿಭಟಿಸಿದರು

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.