ಬೆಳಗಾವಿ: ಜೈ ಕಿಸಾನ್ ಸಗಟು ತರಕಾರಿ ಮಾರುಕಟ್ಟೆ ವರ್ತಕರು ಸಾವಿರಾರು ರೈತರೊಂದಿಗೆ ಮಂಗಳವಾರ ದಿನವಿಡೀ ಇಲ್ಲಿ ಪ್ರತಿಭಟನೆ ನಡೆಸಿದರು.
‘ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮಾರುಕಟ್ಟೆ ಪರವಾನಗಿ ರದ್ದುಗೊಳಿಸಿದ ನಿರ್ಧಾರವನ್ನು ರದ್ದುಪಡಿಸಬೇಕು’ ಎಂದು ಒತ್ತಾಯಿಸಿದರು.
ಮಾರುಕಟ್ಟೆ ಪರವಾನಗಿ ರದ್ದುಪಡಿಸಿದ ಆದೇಶ ಪ್ರಶ್ನಿಸಿ, ವರ್ತಕರು ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿ ವಿಚಾರಣೆ ಬುಧವಾರ ನಡೆಯಲಿದೆ. ಅದಾದ ನಂತರ ರೈತ ಮುಖಂಡರ ಜತೆಗೆ ಸಭೆ ನಡೆಸುವುದಾಗಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.
ರಾಷ್ಟ್ರೀಯ ಹೆದ್ದಾರಿ ಬದಿ ಇರುವ ಜೈ ಕಿಸಾನ್ ಮಾರುಕಟ್ಟೆಯಿಂದ ರಾಣಿ ಚನ್ನಮ್ಮನ ವೃತ್ತದವರೆಗೆ ವ್ಯಾಪಾರಿಗಳು ಮತ್ತು ರೈತರು ಮೆರವಣಿಗೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಜೈ ಕಿಸಾನ್ ಮಾರುಕಟ್ಟೆಯಲ್ಲಿ ವರ್ತಕರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ನೀಡುತ್ತಿದ್ದಾರೆ. ಹಾಗಾಗಿ ಮಾರುಕಟ್ಟೆಯನ್ನು ಮತ್ತೆ ತೆರೆಯಬೇಕು’ ಎಂದು ರೈತರು ವಾದಿಸಿದರು.
ಶಾಸಕ ಅಭಯ ಪಾಟೀಲ, ‘ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಭೂಪರಿವರ್ತನೆ ರದ್ದುಗೊಳಿಸುವ ಅಧಿಕಾರವಿಲ್ಲ. ಆದರೆ, ಕಾನೂನುಗಳನ್ನು ಉಲ್ಲಂಘಿಸಿ ಅದನ್ನು ರದ್ದುಗೊಳಿಸಿದ್ದಾರೆ’ ಎಂದು ದೂರಿದರು.
‘ಈ ಹಿಂದೆ ಜೈ ಕಿಸಾನ್ ಮಾರುಕಟ್ಟೆಗೆ ಅಗತ್ಯವಿರುವ ಎಲ್ಲ ಅನುಮತಿಗಳನ್ನು ನೀಡಲಾಗಿದೆ. ಈಗ ಅದೇ ಅಧಿಕಾರಿಗಳು ಅದನ್ನು ಕಾನೂನುಬಾಹಿರ ಎಂದು ಹೇಳಲು ಸಾಧ್ಯವಿಲ್ಲ. ಈ ಮಾರುಕಟ್ಟೆ ಪರವಾನಗಿಯನ್ನು ಕಾನೂನು ಬಾಹಿರವಾಗಿ ರದ್ದುಗೊಳಿಸಲಾಗಿದೆ. ಎಲ್ಲ ವರ್ತಕರು ಮತ್ತು ರೈತರು ರಸ್ತೆಗೆ ಇಳಿದರೆ, ಅಧಿಕಾರಿಗಳು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ಕೊಟ್ಟರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ‘ಜೈ ಕಿಸಾನ್ ಮಾರುಕಟ್ಟೆ ವಿರುದ್ಧದ ಕ್ರಮ ಒಂದು ಪಿತೂರಿಯಾಗಿದೆ. ಅಕ್ರಮ ವ್ಯವಹಾರಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲಿಗೆ ರೈತರಿಗೆ ಜಿಲ್ಲಾಡಳಿತ ಅನ್ಯಾಯ ಮಾಡಿದೆ’ ಎಂದು ದೂರಿದರು.
ಸಂಜೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ತಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.