ಬೆಳಗಾವಿ: ‘ರಂಜಾನ್’ ಮಾಸವಿಡೀ ಶ್ರದ್ಧೆಯಿಂದ ಧಾರ್ಮಿಕ ಆಚರಣೆ ಕೈಗೊಂಡ ಮುಸ್ಲಿಮರು, ಮಾರ್ಚ್ 31 ಅಥವಾ ಏಪ್ರಿಲ್ 1ರಂದು ನಡೆಯುವ ‘ಈದ್-ಉಲ್-ಫಿತ್ರ್’ ಆಚರಣೆಗೆ ಸಜ್ಜಾಗಿದ್ದಾರೆ.
ಇಲ್ಲಿನ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಈದ್ಗಾ ಮೈದಾನವೂ ಸೇರಿದಂತೆ ಬೆಳಗಾವಿಯ ಎಲ್ಲ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಚಂದ್ರ ದರ್ಶನದ ಮೂಲಕ ಹಬ್ಬದ ದಿನಾಂಕ ಖಾತ್ರಿಯಾಗಲಿದೆ.
ಇಸ್ಲಾಂ ಧರ್ಮದಲ್ಲೇ ದೊಡ್ಡ ಹಬ್ಬ ಇದು. ರಂಜಾನ್ ಮಾಸದಲ್ಲಿ ‘ತರಾವೀಹ್’ ನಮಾಜ್, ಕಲ್ಮಾ ಮತ್ತು ಕುರ್‌ಆನ್ ಪಠಣ, ಜಕಾತ್(ದಾನ ಮಾಡುವುದು) ಮೂಲಕ ಅಲ್ಲಾಹು ದೇವರ ಕೃಪೆಗೆ ಪಾತ್ರವಾಗಿರುವ ಮುಸ್ಲಿಮರು, ಈಗ ಹಬ್ಬದ ಖರೀದಿಯಲ್ಲಿ ತೊಡಗಿದ್ದಾರೆ.
ವಿದ್ಯುದ್ದೀಪಗಳಿಂದ ಝಗಮಗಿಸುತ್ತಿರುವ ಇಲ್ಲಿನ ಖಡೇಬಜಾರ್, ದರ್ಬಾರ್ ಗಲ್ಲಿ, ಖಂಜರ್ ಗಲ್ಲಿ, ಭೆಂಡಿ ಬಜಾರ್ ಮಾರುಕಟ್ಟೆ ಪ್ರದೇಶ ಜನರಿಂದ ಕಿಕ್ಕಿರಿದು ತುಂಬಿದ್ದು, ಸಂಜೆಯಿಂದ ಮಾರನೇ ದಿನ ನಸುಕಿನ ಜಾವದವರೆಗೂ ಖರೀದಿ ಭರಾಟೆ ಕಂಡುಬರುತ್ತಿದೆ.
ಹಬ್ಬದ ದಿನ ಮುಸ್ಲಿಮರು ತಮ್ಮ ಮನೆಯಲ್ಲಿ ‘ಶಿರ್‌ಕುರ್ಮಾ’ ಎಂಬ ಸಿಹಿಖಾದ್ಯ ತಯಾರಿಸಿ ಸೇವಿಸುತ್ತಾರೆ. ಜತೆಗೆ, ತಮ್ಮ ಮನೆಗೆ ಬರುವ ಹಿತೈಷಿಗಳಿಗೆ ಉಣಬಡಿಸುತ್ತಾರೆ. ಇದಕ್ಕೆ ಬಳಸುವ ಗೋಡಂಬಿ, ಬಾದಾಮ್, ಚಾರೋಲಿ, ಅಕ್ರೋಟ್, ಪಿಸ್ತಾ ಮತ್ತಿತರ ಒಣಹಣ್ಣುಗಳಿಗೆ ಭಾರಿ ಬೇಡಿಕೆ ಇದೆ. ಗೋಡಂಬಿ ಮತ್ತು ಬಾದಾಮ್ ದರ ಕೆ.ಜಿಗೆ ₹880ರಿಂದ ₹960, ಶಾವಿಗೆ ದರ ಕೆ.ಜಿಗೆ ₹100ರಿಂದ ₹200ರವರೆಗೆ ಇದೆ.
ರಂಜಾನ್ ಮಾಸದಲ್ಲಿ ಹಗಲಿಡೀ ಉಪವಾಸ ಇರುವುದರಿಂದ ಶರೀರಕ್ಕೆ ಹೆಚ್ಚಿನ ಪೋಷಕಾಂಶ ಸಿಗಲೆಂದು ಮುಸ್ಲಿಮರು ಆದ್ಯತೆ ಮೇಲೆ ಖರ್ಜೂರ ಬಳಸುತ್ತಾರೆ. ಹಾಗಾಗಿ ಬೆಳಗಾವಿ ಮಾರುಕಟ್ಟೆಗೆ 20ಕ್ಕೂ ಅಧಿಕ ಬಗೆಯ ಖರ್ಜೂರ ಬಂದಿವೆ. ಅಜ್ವಾ, ಕಲ್ಮಿ, ಕಿಮಿಯಾ, ಮೆಡ್‌ಜೋಲ್ ಮತ್ತಿತರ ಖರ್ಜೂರಗಳಿಗೆ ಬೇಡಿಕೆ ಹೆಚ್ಚಿದೆ. ಅವುಗಳ ದರ ಕೆ.ಜಿಗೆ ₹200ರಿಂದ ₹2 ಸಾವಿರದವರೆಗೆ ಇದೆ.
ಬೆಳಗಾವಿ ನಗರವಷ್ಟೇ ಅಲ್ಲ; ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾದಿಂದ ಸಹಸ್ರಾರು ಸಂಖ್ಯೆಯಲ್ಲಿ ಮಾರುಕಟ್ಟೆಗೆ ಬರುತ್ತಿರುವ ಜನರು, ವೈವಿಧ್ಯಮಯ ವಿನ್ಯಾಸಗಳ ಬಟ್ಟೆಗಳು, ಸೀರೆಗಳು, ಆಲಂಕಾರಿಕ ವಸ್ತುಗಳು, ಗೃಹೋಪಯೋಗಿ ಉಪಕರಣಗಳು, ಟೋಪಿ, ಸುಗಂಧದ್ರವ್ಯ, ಮೆಹಂದಿ, ಬಳೆ, ಆಟಿಕೆ, ಪಾದರಕ್ಷೆ ಮತ್ತಿತರ ವಸ್ತು ಖರೀದಿಸುತ್ತಿದ್ದಾರೆ.
ಒಣಹಣ್ಣುಗಳ ದರ ಕಳೆದ ಬಾರಿಯಷ್ಟೇ ಇದೆ. ಆದರೆ ಕಳೆದ ವರ್ಷಕ್ಕಿಂತ ಈ ಸಲ ಉತ್ತಮ ವ್ಯಾಪಾರವಾಗಿದೆಮುದಸ್ಸರ್ನಜರ್ ಮುಜಾವರ ವ್ಯಾಪಾರಿ ಖಡೇಬಜಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.