ADVERTISEMENT

ಅಯೋಗ್ಯ ಸರ್ಕಾರಕ್ಕೆ ತಕ್ಕ ಉತ್ತರ ಕೊಡಬೇಕಾಗಿದೆ: ಬಿ.ವೈ.ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2024, 14:11 IST
Last Updated 16 ಡಿಸೆಂಬರ್ 2024, 14:11 IST
ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು
ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು   

ಬೆಳಗಾವಿ: ‘ಬಳ್ಳಾರಿ, ಬೆಳಗಾವಿಯಲ್ಲಿ ಬಾಣಂತಿಯರು, ಶಿಶುಗಳು ಸರಣಿ ರೂಪದಲ್ಲಿ ಮೃತಪಟ್ಟರೂ, ಅಧಿಕಾರಿಗಳು ಮತ್ತು ಸಚಿವರು ನಿಯಂತ್ರಣಕ್ಕೆ ಕ್ರಮ ವಹಿಸಿಲ್ಲ. ದುರಹಂಕಾರದಿಂದ ನಡೆದುಕೊಳ್ಳುತ್ತಿರುವ ಈ ಅಯೋಗ್ಯ ಸರ್ಕಾರಕ್ಕೆ ತಕ್ಕ ಉತ್ತರ ಕೊಡಬೇಕಾಗಿದೆ. ರಾಜ್ಯದಲ್ಲಿನ ತಾಯಂದಿರ ಕಣ್ಣೀರು ಒರೆಸುವ ಕೆಲಸವಾಗಬೇಕಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿ ಕಾರಿದರು.

ಬಾಣಂತಿ ಹಾಗೂ ಶಿಶುಗಳ ಸಾವು ಖಂಡಿಸಿ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ವತಿಯಿಂದ ಇಲ್ಲಿನ ಮಾಲಿನಿಸಿಟಿ ಮೈದಾನದಲ್ಲಿ ಸೋಮವಾರ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಹಲವು ಹಗರಣಗಳಲ್ಲಿ ಭಾಗಿಯಾದ ಸಿದ್ದರಾಮಯ್ಯ ಅವರಿಗೆ ಪ್ರಜಾಪ್ರಭುತ್ವದ ಬಗ್ಗೆ ನಿಜವಾಗಿಯೂ ಗೌರವ ಇದ್ದಿದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ‌ ಚಲವಾದಿ ನಾರಾಯಣಸ್ವಾಮಿ, ‘ಇದೇ ಮೊದಲ ಬಾರಿ ಸರಣಿ ರೂಪದಲ್ಲಿ ಬಾಣಂತಿಯರು, ಶಿಶುಗಳು ಸಾವನ್ನಪ್ಪಿವೆ. ಆದರೆ, ಲೂಟಿಕೋರ ಕಾಂಗ್ರೆಸ್‌ ಸರ್ಕಾರಕ್ಕೆ ಹಣದ ಹೊರತು ಬೇರೇನೂ ಬೇಕಿಲ್ಲ. ಸಿದ್ದರಾಮಯ್ಯ ಅವರಿಗೆ ಯಾವ ಪ್ರಶ್ನೆ ಕೇಳಿದರೂ ಉತ್ತರ ಸಿಗುತ್ತಿಲ್ಲ. ಅವರು ಯಾವ ಎಣ್ಣೆ ಬಳಸುತ್ತಾರೋ ಗೊತ್ತಿಲ್ಲ. ಆದರೆ, ಮೈತುಂಬ ಎಣ್ಣೆ ಹಚ್ಚಿಕೊಂಡೇ ಸದನಕ್ಕೆ ಬರುತ್ತಾರೆ. ಏನೇ ಕೇಳಿದರೂ ಜಾರಿಕೊಳ್ಳುತ್ತಾರೆ. ನೀವು ಕಾಂಗ್ರೆಸ್‌ ಪಕ್ಷ ತೊರೆದು ಜಾರ್ಖಂಡ್‌(ಜಾರಿಕೊಂಡು) ಪಕ್ಷ ಸೇರಿ’ ಎಂದು ವ್ಯಂಗ್ಯವಾಡಿದರು.

‘ಜಾನುವಾರುಗಳಿಗೆ ನೀಡಬೇಕಾದ ಔಷಧವನ್ನು ಮನುಷ್ಯರ ಮೇಲೆ ಪ್ರಯೋಗಿಸಿದ್ದಾರೆ. ಸರ್ಕಾರದ ತಪ್ಪನ್ನು ವೈದ್ಯರು ಒಪ್ಪಿಕೊಳ್ಳುತ್ತಿದ್ದಾರೆ. ಆದರೆ, ಸಚಿವರು ಒಪ್ಪಿಕೊಳ್ಳುತ್ತಿಲ್ಲ. ಈ ಸರ್ಕಾರಕ್ಕೆ ಅನುಕಂಪ ಇಲ್ಲ. ಎಲ್ಲಿಯವರೆಗೆ ಇದು ಅಧಿಕಾರದಲ್ಲಿ ಇರುತ್ತದೆಯೋ, ಅಲ್ಲಿಯವರೆಗೆ ಬಾಣಂತಿಯರ ಆರೋಗ್ಯ ಸುರಕ್ಷಿತವಾಗಿಲ್ಲ. ನಮ್ಮ ಮಾನ-ಪ್ರಾಣ ಎರಡೂ ಉಳಿಯಬೇಕಾದರೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕಾಗಿದೆ’ ಎಂದರು.

ಬಿಜೆಪಿ ರಾಷ್ಟ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ‘ಇವು ವೈದ್ಯರ ನಿರ್ಲಕ್ಷ್ಯದಿಂದ ಆಗಿರುವ ಸಾವಲ್ಲ. ಬದಲಿಗೆ, ಆಳುವ ಸರ್ಕಾರದ ಕಡೆಗಣನೆಯಿಂದ ಆಗಿರುವ ಸಾವು. ಸರ್ಕಾರವೇ ಮಾಡಿರುವ ಹತ್ಯೆ’ ಎಂದು ದೂರಿದರು.

‘ಈ ಪ್ರಕರಣದಲ್ಲಿ ವಜಾಗೊಳಿಸಬೇಕಿರುವುದು ಆರೋಗ್ಯ ಸಚಿವರನ್ನೇ ಹೊರತು, ವೈದ್ಯಾಧಿಕಾರಿಗಳನ್ನಲ್ಲ. ಮಾನವೀಯತೆ ಮತ್ತು ಜನಸ್ಪಂದನೆ ಸತ್ತಿರುವ ಸರ್ಕಾರ ಇದಾಗಿದೆ. ಮುಖ್ಯಮಂತ್ರಿಗೆ ಮಾನವೀಯ ಕಳಕಳಿ ಇದ್ದರೆ, ಆರೋಗ್ಯ ಸಚಿವ ದಿನೇಶ ಗುಂಡೂರಾವ್‌ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರನ್ನು ಸಂಪುಟದಿಂದ ತೆಗೆದುಹಾಕಿ’ ಎಂದು ಆಗ್ರಹಿಸಿದರು.

ವಿಧಾನ ಪರಿಷತ್‌ ಸದಸ್ಯ ಎನ್.ರವಿಕುಮಾರ, ‘ಕಾಂಗ್ರೆಸ್‌ ಸರ್ಕಾರ ಎಂಬುದು ಹುಚ್ಚು ಆಸ್ಪತ್ರೆ ಇದ್ದಂತೆ. ಬಾಣಂತಿಯರು ಮತ್ತು ಶಿಶುಗಳ ಸಾವಿಗೆ ಅದೇ ಕಾರಣ. ಅವಧಿ ಮೀರಿದ ಔಷಧಗಳನ್ನು ಆಸ್ಪತ್ರೆಗಳಿಗೆ ಅವರು ಪೂರೈಸಿದ್ದಾರೆ. ಹೆಚ್ಚಿನ ಲಾಭದ ಆಸೆಗಾಗಿ ದಿನೇಶ ಗುಂಡೂರಾವ್ ಅವರು, ಒಂದೇ ಏಜೆನ್ಸಿಗೆ ಗುತ್ತಿಗೆ ನೀಡಿದ್ದರಿಂದ ಅವಾಂತರ ಸೃಷ್ಟಿಯಾಗಿವೆ. ಔಷಧ ಪೂರೈಕೆಯಲ್ಲಿ ಪಾರದರ್ಶಕತೆ ಬೇಕು. ರಾಜ್ಯದ ಸರ್ಕಾರಿ ಆಸ್ಪತ್ರೆಗಳು ಗುಣಮಟ್ಟ ಕಾಯ್ದುಕೊಳ್ಳಬೇಕು’ ಎಂದರು.

ಮಾಜಿ ಸಂಸದೆ ಮಂಗಲ ಅಂಗಡಿ, ‘ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಎಲ್ಲ ಮಹಿಳೆಯರು ಒಟ್ಟಾಗಿ ನಿಂತು ಹೋರಾಡಬೇಕು. ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸಬೇಕು’ ಎಂದು ಕರೆಕೊಟ್ಟರು.

ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ, ಮಹಾನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ, ಡಾ. ಸೋನಾಲಿ ಸರ್ನೋಬತ್‌ ಇತರರು ಇದ್ದರು.

ಮಗು ಹುಟ್ಟುವ ಸಂಭ್ರಮದಲ್ಲಿ ಇರಬೇಕಾದ ಕುಟುಂಬಗಳು ಕಣ್ಣೀರು ಹಾಕುತ್ತಿವೆ. ಬಳಕೆಗೆ ಯೋಗ್ಯವಲ್ಲದ ಔಷಧ ಬಳಸುತ್ತಿರುವ ಸರ್ಕಾರದ‌ ಕ್ರಮ ಖಂಡನೀಯ
ಶಶಿಕಲಾ ಜೊಲ್ಲೆ ಶಾಸಕಿ
ರಾಜ್ಯದಲ್ಲಿ ಬಾಣಂತಿಯರು ಮತ್ತು ಶಿಶುಗಳ ಸಾವಿಗೆ ಬೆಲೆಯೇ ಇಲ್ಲದಂತಾಗಿದೆ. ಹಾಗಾಗಿ ಈ ದುಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಆರಂಭಿಸಿದ್ದೇವೆ
ಸಿ.ಮಂಜುಳಾ ಅಧ್ಯಕ್ಷೆ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.