ADVERTISEMENT

ಬೆಳಗಾವಿ | ಬಾಣಂತಿ, ಶಿಶುಗಳ ಸಾವು: ಜಿಲ್ಲಾಸ್ಪತ್ರೆಗೆ ಭೇಟಿ‌‌ ನೀಡಿದ ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2024, 6:28 IST
Last Updated 9 ಡಿಸೆಂಬರ್ 2024, 6:28 IST
<div class="paragraphs"><p>ಬೆಳಗಾವಿ ಜಿಲ್ಲಾಸ್ಪತ್ರೆಗೆ ಸೋಮವಾರ ಭೇಟಿ ನೀಡಿದ ಬಿ.ವೈ.ವಿಜಯೇಂದ್ರ, ಡಾ.ಅಶ್ವತ್ಥನಾರಾಯಣ, ಶಶಿಕಲಾ ಜೊಲ್ಲೆ ಅಧಿಕಾರಿಗಳಿಂದ ಮಾಹಿತಿ ಪಡೆದರು</p></div>

ಬೆಳಗಾವಿ ಜಿಲ್ಲಾಸ್ಪತ್ರೆಗೆ ಸೋಮವಾರ ಭೇಟಿ ನೀಡಿದ ಬಿ.ವೈ.ವಿಜಯೇಂದ್ರ, ಡಾ.ಅಶ್ವತ್ಥನಾರಾಯಣ, ಶಶಿಕಲಾ ಜೊಲ್ಲೆ ಅಧಿಕಾರಿಗಳಿಂದ ಮಾಹಿತಿ ಪಡೆದರು

   

ಬೆಳಗಾವಿ: 'ಬಳ್ಳಾರಿ ರೀತಿಯಲ್ಲೇ ಬೆಳಗಾವಿ ಜಿಲ್ಲೆಯಲ್ಲೂ ಬಾಣಂತಿಯರು ಹಾಗೂ ನವಜಾತ ಶಿಶುಗಳ ಮರಣ ಪ್ರಕರಣಗಳು ಕಂಡುಬಂದಿವೆ. ಕಳೆದ ಆರು ತಿಂಗಳಲ್ಲಿ ಇದು ಏರಿಕೆಯಾಗಿದೆ. ವಾಸ್ತವ ಸ್ಥಿತಿ ನೋಡಲು ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಇದರ ಬಗ್ಗೆ ಸದನದಲ್ಲೂ ಧ್ವನಿ ಎತ್ತುತ್ತೇನೆ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಸೋಮವಾರ ಅಧಿವೇಶನದಲ್ಲಿ ಪಾಲ್ಗೊಳ್ಳುವ ಮುನ್ನ ಅವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದರು.

ADVERTISEMENT

'ವಿಪಕ್ಷ ನಾಯಕರು ಈಗಾಗಲೇ ಈ ಬಗ್ಗೆ ಮಾತನಾಡಿದ್ದಾರೆ. ಬಳ್ಳಾರಿಯಲ್ಲಿ 6 ಜನ ಬಾಣಂತಿಯರು, ಹಲವು ಶಿಶುಗಳು ಪ್ರಾಣ ಕಳೆದುಕೊಂಡಿವೆ. ಇದರಲ್ಲಿ ರಾಜ್ಯ ಸರ್ಕಾರದ ಬೇಜವಾಬ್ದಾರಿ ಮೇಲ್ನೋಟಕ್ಕೆ ಕಾಣುತ್ತಿದೆ. ಸಮಗ್ರವಾಗಿ ಸತ್ಯಾಂಶ ತಿಳಿದುಕೊಳ್ಳಬೇಕಿದೆ. ಇದರಲ್ಲಿ ರಾಜಕಾರಣ ಮಾಡುವ ಪ್ರಶ್ನೆ ಇಲ್ಲ‌' ಎಂದರು.

'ರಾಜ್ಯ ಸರ್ಕಾರದಿಂದ ಬಡವರಿಗೆ ಅನ್ಯಾಯ ಆಗುತ್ತಿದೆ. ಸರ್ಕಾರಿ ಆಸ್ಪತ್ರೆಗೆ ಹೋಗುವ ಬಾಣಂತಿಯರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೂ ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇನ್ನು ಸರ್ಕಾರಿ ಮೆಡಿಕಲ್ ಕಾಲೇಜಿಗೆ ವೈದ್ಯಕೀಯ ಸಚಿವ ಶರಣಪ್ರಕಾಶ ಪಾಟೀಲ ಅವರು ಹೋಗುತ್ತಿಲ್ಲ. ಬೇಜವಾಬ್ದಾರಿತನ ಬಿಟ್ಟು ಸರ್ಕಾರ ತುರ್ತಾಗಿ ಈ ಬಗ್ಗೆ ಗಮನಹರಿಸಬೇಕು' ಎಂದೂ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, 'ರಾಜ್ಯದಲ್ಲಿ ಬಾಣಂತಿಯರು, ಹಸುಗೂಸುಗಳು ತೀರಿಕೊಂಡದ್ದು ಗಮನಿಸಿದರೆ, ಗೊಂದಲದ ವಾತಾವರಣ ಸೃಷ್ಟಿಯಾಗಿದೆ ಅನಿಸುತ್ತದೆ. ಆಸ್ಪತ್ರೆಗಳು ಶವಗಾರ ಆಗುತ್ತಿವೆ. ಇದಕ್ಕೆ ನೇರ ಕಾರಣ ಕಾಂಗ್ರೆಸ್ ಸರ್ಕಾರ' ಎಂದು ದೂರಿದರು.

'ಸರ್ಕಾರಿ ಆಸ್ಪತ್ರೆ ಬಗ್ಗೆ ಸರ್ಕಾರ ಗಮನ ಕೊಟ್ಟಿಲ್ಲ. ಅವರು ಅಧಿಕಾರದ ದಾಹ, ಭ್ರಷ್ಟಾಚಾರ ಮಾಡುವುದರಲ್ಲೇ ತೊಡಗಿದ್ದಾರೆ. ಆಸ್ಪತ್ರೆಗಳ ಮೇಲೆ ಸರ್ಕಾರಕ್ಕೆ ನಿಯಂತ್ರಣವೇ ಇಲ್ಲ. ಕಳಪೆ ಔಷಧಿಗಳನ್ನು ಕೊಟ್ಟಿದ್ದರಿಂದಲೇ ಇಂಥ ಘಟನೆಗಳು ನಡೆದಿವೆ. ಈ ಸಮಸ್ಯೆ ಬಗ್ಗೆ ಸದನದಲ್ಲಿ ನಾವು ಧ್ವನಿ ಎತ್ತುತ್ತೇವೆ' ಎಂದು ಹೇಳಿದರು.

ಡಾ.ಅಶ್ವತ್ಥ ನಾರಾಯಣ, ಶಾಸಕಿ ಶಶಿಕಲಾ ಜೊಲ್ಲೆ ಸೇರಿ ಜಿಲ್ಲೆಯ ಹಲವು ಬಿಜೆಪಿ ಮುಖಂಡರು ಸಾಥ್ ನೀಡಿದರು.

ಬಾಣಂತಿಯರ ಆರೋಗ್ಯವನ್ನು ವಿಚಾರಿಸಿ, ವೈದ್ಯರಿಂದ ಮಾಹಿತಿಯನ್ನು ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.