ADVERTISEMENT

ಪ್ರಸೂತಿ, ಮಕ್ಕಳ ಆಸ್ಪತ್ರೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2020, 7:30 IST
Last Updated 17 ನವೆಂಬರ್ 2020, 7:30 IST
ಬೆಳಗಾವಿಯ ವಂಟಮುರಿ ಕಾಲೊನಿಯಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ನಿರ್ಮಿಸಿರುವ ಪ್ರಸೂತಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಶಾಸಕ ಅನಿಲ ಬೆನಕೆ ಮಂಗಳವಾರ ಉದ್ಘಾಟಿಸಿದರು
ಬೆಳಗಾವಿಯ ವಂಟಮುರಿ ಕಾಲೊನಿಯಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ನಿರ್ಮಿಸಿರುವ ಪ್ರಸೂತಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಶಾಸಕ ಅನಿಲ ಬೆನಕೆ ಮಂಗಳವಾರ ಉದ್ಘಾಟಿಸಿದರು   

ಬೆಳಗಾವಿ: ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಇಲ್ಲಿನ ಶ್ರೀನಗರ ಜೋಡಿ ಮಾರ್ಗದ ವಂಟಮುರಿ ಕಾಲೊನಿಯಲ್ಲಿ ನಿರ್ಮಿಸಲಾಗಿರುವ 30 ಹಾಸಿಗೆಗಳ ಪ್ರಸೂತಿ ಹಾಗೂ ಮಕ್ಕಳ ಆಸ್ಪತ್ರೆಯನ್ನು ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಮಂಗಳವಾರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ₹ 2.75 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಇದರಿಂದ ಸ್ಥಳೀಯರಿಗೆ ಉತ್ತಮ ವೈದ್ಯಕೀಯ ಸೇವೆ ಲಭಿಸಲಿದೆ. ಈ ಭಾಗದವರು ಜಿಲ್ಲಾಸ್ಪತ್ರೆಗೆ ಹೋಗುವುದು ತಪ್ಪಲಿದೆ’ ಎಂದು ತಿಳಿಸಿದರು.

‘ನೂತನ ಆಸ್ಪತ್ರೆಯಲ್ಲಿ ಹೆರಿಗೆ ಮತ್ತು ಶಸ್ತ್ರಚಿಕಿತ್ಸೆ, ನವಜಾತ ಶಿಶು ತುರ್ತು ನಿಗಾ ಘಟಕ ಸೇರಿದಂತೆ ತಾಯಿ ಹಾಗೂ ಮಕ್ಕಳ ಆರೋಗ್ಯ ರಕ್ಷಣೆಯ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ವಿಶ್ರಾಂತಿ ಘಟಕ, ತಜ್ಞ ವೈದ್ಯರ ಕೊಠಡಿಗಳು, ನವಜಾತ ಶಿಶು ಆರೈಕೆ ಘಟಕ, ಹೆರಿಗೆ ಮತ್ತು ಶಸ್ತ್ರಚಿಕಿತ್ಸೆ ಕೊಠಡಿಗಳನ್ನು ನಿರ್ಮಿಸಲಾಗಿದೆ. ಅಗ್ನಿನಿರೋಧಕ ಸೌಲಭ್ಯ ಒದಗಿಸಲಾಗಿದೆ. ಚುಚ್ಚುಮದ್ದು ಘಟಕ, ಪ್ರಸವಪೂರ್ವ ಕೊಠಡಿಗಳನ್ನು ಆಸ್ಪತ್ರೆಯು ಒಳಗೊಂಡಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ, ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ.ಎಚ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ. ಮುನ್ಯಾಳ, ಟಿಎಚ್‌ಒ ಸಂಜಯ ಡುಮ್ಮಗೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.