ADVERTISEMENT

ಕಾರ್ಮಿಕರ ದಿನವಷ್ಟೇ, ಆಚರಣೆ ಇಲ್ಲ!

ಇಲಾಖೆಯಿಂದ ಕಾರ್ಯಕ್ರಮ ನಡೆಸದಿರುವುದಕ್ಕೆ ಸಂಘಟನೆಗಳ ಆಕ್ರೋಶ

ಎಂ.ಮಹೇಶ
Published 30 ಏಪ್ರಿಲ್ 2019, 19:45 IST
Last Updated 30 ಏಪ್ರಿಲ್ 2019, 19:45 IST
ಬೆಳಗಾವಿಯಲ್ಲಿ ಕಾರ್ಮಿಕರ ದಿನಾಚರಣೆಗೆ ಆಗ್ರಹಿಸಿ ಸಂಘಟನೆಗಳ ಮುಖಂಡರು ಇಲಾಖೆಗೆ ಮನವಿ ಸಲ್ಲಿಸಿದ್ದ ಚಿತ್ರ
ಬೆಳಗಾವಿಯಲ್ಲಿ ಕಾರ್ಮಿಕರ ದಿನಾಚರಣೆಗೆ ಆಗ್ರಹಿಸಿ ಸಂಘಟನೆಗಳ ಮುಖಂಡರು ಇಲಾಖೆಗೆ ಮನವಿ ಸಲ್ಲಿಸಿದ್ದ ಚಿತ್ರ   

ಬೆಳಗಾವಿ: ಶ್ರಮಿಕರನ್ನು ಗೌರವಿಸುವ ಉದ್ದೇಶದಿಂದ ಮೇ 1ನ್ನು ಕಾರ್ಮಿಕರ ದಿನವನ್ನಾಗಿ ಘೋಷಿಸಲಾಗಿದೆ. ಆದರೆ, ಸರ್ಕಾರದಿಂದ ಅಂದು ದಿನಾಚರಣೆ ಕಾರ್ಯಕ್ರಮವನ್ನೇ ಆಯೋಜಿಸಿಲ್ಲ. ಇದು, ಕಾರ್ಮಿಕರು ಮತ್ತು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

‘ರಜೆ ಕೊಡುವುದರಿಂದ ಪ್ರಯೋಜನವಾಗುವುದಿಲ್ಲ. ಕಾರ್ಮಿಕರನ್ನು ಸೇರಿಸಿ, ಅಧಿಕಾರಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಸಬೇಕು. ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ತಿಳಿಸಬೇಕು. ಕುಂದುಕೊರತೆಗಳನ್ನು ಆಲಿಸಬೇಕು’ ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಏ. 26ರಂದು ಕಾರ್ಮಿಕ ಇಲಾಖೆ ಕಚೇರಿಗೆ ಮನವಿ ಸಲ್ಲಿಸಿದ್ದವು. ಆದರೆ, ಇದಕ್ಕೆ ಪ್ರತಿಕ್ರಿಯೆ ಬಂದಿಲ್ಲ.

‘‌ಇಲಾಖೆಗೆ ಮನವಿ ಸಲ್ಲಿಸಿದ್ದರೂ ಸ್ಪಂದನೆ ದೊರೆತಿಲ್ಲ. ಮೇ 1ರಂದು ರಜೆ ನೀಡಲಾಗಿದೆ. ಅಧಿಕಾರಿಗಳು ರಜೆ ಎಂಜಾಯ್ ಮಾಡುತ್ತಾರೆಯೇ ಹೊರತು, ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಚಿಂತಿಸುವುದಿಲ್ಲ. ಹೀಗಾಗಿ, ನಾವೇ ಖಾಸಗಿಯಾಗಿ ಹೊನಗಾದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ರಜೆ ಘೋಷಿಸಿ, ದಿನಾಚರಣೆ ಮಾಡಿದಿದ್ದರೆ ಪ್ರಯೋಜನವೇನು? ಇದು ಜಿಲ್ಲೆಯಾದ್ಯಂತ ಇರುವ 20 ಲಕ್ಷಕ್ಕೂ ಹೆಚ್ಚಿನ ಕಾರ್ಮಿಕರಿಗೆ ಮಾಡಿದ ಅವಮಾನವಾಗಿದೆ. ಸರ್ಕಾರದ ಈ ನಡೆ ಖಂಡನೀಯ. ಇದರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು’ ಎಂದು ಕಾರ್ಮಿಕರ ಪರವಾದ ಹೋರಾಟಗಾರ, ವಕೀಲ ಎನ್.ಆರ್. ಲಾತೂರ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಆಗಾಗ ಸಭೆ, ಚಿಂತನಾ ಕಾರ್ಯಕ್ರಮಗಳನ್ನು ಇಲಾಖೆಯಿಂದ ನಡೆಸಬೇಕು’ ಎಂದು ಒತ್ತಾಯಿಸಿದರು.

ಬಳಕೆಯಾಗದ ಸೆಸ್ ಹಣ:

‘ಕಾರ್ಮಿಕರ ಅಭಿವೃದ್ಧಿಗಾಗಿ ಸೆಸ್‌ ಸಂಗ್ರಹಿಸಲಾಗುತ್ತಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಬಳಸುತ್ತಿಲ್ಲ. ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಈವರೆಗೆ ₹7ಸಾವಿರ ಕೋಟಿ ಸೆಸ್ ಸಂಗ್ರಹವಾಗಿದೆ. ಇದರಲ್ಲಿ ಶೇ 10ರಷ್ಟು ಮಂದಿಗೆ ಮಾತ್ರ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕಾರ್ಮಿಕರ ಮಕ್ಕಳಿಗೆ ಶಿಕ್ಷಣ, ಮದುವೆ, ವೈದ್ಯಕೀಯ ವೆಚ್ಚ, ನಿವೃತ್ತಿ ವೇತನ ಸೇರಿದಂತೆ ವಿವಿಧ 12 ಸೌಲಭ್ಯಗಳನ್ನು ಒದಗಿಸಲು ಸೆಸ್‌ ಬಳಸಬೇಕು. ಕಾರ್ಮಿಕರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಈ ಹಣವನ್ನು ಸದ್ಬಳಕೆ ಮಾಡುವುದು ಮಹತ್ವದ್ದಾಗಿದೆ. ಆದರೆ, ಇಲಾಖೆಯು ನಿರ್ಲಕ್ಷ್ಯ ವಹಿಸಿದೆ. ಬಡ್ಡಿಯೂ ಕೊಳೆಯುತ್ತಿದೆ. ಹೀಗಾದರೆ ಸೆಸ್ ಸಂಗ್ರಹದ ಗುರಿಯಾದರೂ ಏನು’ ಎಂದು ಪ್ರಶ್ನಿಸುತ್ತಾರೆ ಹೋರಾಟಗಾರರು.

ಬೆಳಗಾವಿ ತಾಲ್ಲೂಕಿಗೆ ಕಳೆದ ವರ್ಷ ಕೇವಲ ₹ 3.5 ಕೋಟಿಯಷ್ಟೇ ಬಂದಿದೆ. ಇಡೀ ಜಿಲ್ಲೆಗೆ ₹ 5.50 ಕೋಟಿ ಸಿಕ್ಕಿದೆ. ಈ ಪೈಕಿ ಇಲಾಖೆಯಿಂದ ₹ 1.05 ಕೋಟಿಯನ್ನು ಮದುವೆ ಸಹಾಯಧನವಾಗಿ 207 ಮಂದಿಗೆ ನೀಡಲಾಗಿದೆ. ₹ 1.97 ಕೋಟಿ ಶಿಕ್ಷಣಕ್ಕೆ, ₹ 27 ಲಕ್ಷವನ್ನು ಅಪಘಾತದಿಂದ ಮೃತಪ‍ಟ್ಟವರ ಕುಟುಂಬದವರಿಗೆ ಪರಿಹಾರವಾಗಿ ಕೊಡಲು ಬಳಸಲಾಗಿದೆ. ₹ 15 ಲಕ್ಷವನ್ನು ವೈದ್ಯಕೀಯ ಸಹಾಯಧನವಾಗಿ ಕೊಡಲಾಗಿದೆ.

20 ಲಕ್ಷಕ್ಕೂ ಹೆಚ್ಚಿನ ಕಾರ್ಮಿಕರು:

ಜಿಲ್ಲೆಯಲ್ಲಿ 11 ಲಕ್ಷ ಮಂದಿ ಉದ್ಯೋಗ ಖಾತ್ರಿ ಕಾರ್ಮಿಕರು, 4 ಲಕ್ಷ ಕಟ್ಟಡ ಕಾರ್ಮಿಕರು, ಹಮಾಲರು, ಹೋಟೆಲ್ ಕಾರ್ಮಿಕರು ಮೊದಲಾದವರು 5 ಲಕ್ಷ ಇದ್ದಾರೆ. ಆದರೆ, ಈವರೆಗೆ 1.05 ಲಕ್ಷ ಕಾರ್ಮಿಕರ ನೋಂದಣಿ ಪ್ರಕ್ರಿಯೆಯಷ್ಟೇ ನಡೆದಿದೆ. ಅವರಲ್ಲಿ 10ಸಾವಿರ ಮಂದಿ ಮಾತ್ರ ಸಹಾಯಧನ ಪಡೆದಿದ್ದಾರೆ. ಶೇ 90ರಷ್ಟು ಕಾರ್ಮಿಕರು ಸೌಲಭ್ಯಗಳಿಂದ ದೂರ ಉಳಿದಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನೋಂದಣಿ ಕಾರ್ಯ ಸಮರ್ಪಕವಾಗಿ ನಡೆದಿಲ್ಲ. ಇದರಿಂದಾಗಿ ಸೆಸ್‌ ಹಣ ಬಳಕೆಯಾಗದೇ ಕೊಳೆಯುವಂತಾಗಿದೆ.

‌‘ಅಶೋಕನಗರದಲ್ಲಿ ಇಎಸ್‌ಐ ಆಸ್ಪತ್ರೆ ಇದೆ. ಇದರಿಂದ ಆ ಭಾಗದ ಕಾರ್ಮಿಕರಿಗೆ ಅನುಕೂಲವಾಗುತ್ತಿದೆ. ಅಂತೆಯೇ, 1500ಕ್ಕೂ ಹೆಚ್ಚಿನ ಕೈಗಾರಿಕೆಗಳು ಹಾಗೂ 15ಸಾವಿರಕ್ಕೂ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಉದ್ಯಮಬಾಗ್ ಭಾಗದಲ್ಲಿ ಇಎಸ್‌ಐ ಆಸ್ಪತ್ರೆ ಆರಂಭಿಸಬೇಕು ಎನ್ನುವ ಬೇಡಿಕೆ ಈಚೆಗೆ ಈಡೇರಿದೆ. ಆದರೆ, ಅಲ್ಲಿ ಕಾರ್ಮಿಕರಿಗೆ ಸೌಲಭ್ಯಗಳು ದೊರೆಯುತ್ತಿಲ್ಲ. ಔಷಧಿಗಳ ಕೊರತೆಯೂ ಇದೆ’ ಎಂದು ಉದ್ಯಮಬಾಗ್ ಸಣ್ಣ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಉಮೇಶ ಶರ್ಮ ದೂರಿದರು.

ಭವಿಷ್ಯ ನಿಧಿ (ಪಿಎಫ್) ಪ್ರಾದೇಶಿಕ ಕಚೇರಿಯನ್ನು ಬೆಳಗಾವಿಯಲ್ಲೂ ಸ್ಥಾಪಿಸಬೇಕು ಎಂಬ ಕಾರ್ಮಿಕರ ಬೇಡಿಕೆಯೂ ಈಡೇರಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.