ಹುಕ್ಕೇರಿ: ತಾಯಿ ಮಕ್ಕಳ ಆಸ್ಪತ್ರೆ ಸ್ಥಾಪನೆಗೆ ಶೇ 70 ರಷ್ಟು ಆಸ್ಪತ್ರೆಯಲ್ಲಿ ಅಕ್ಯುಪನ್ಸಿ (ಕಟ್ಟಡ ವಾಸಯೋಗ್ಯ ಮತ್ತು ಸುರಕ್ಷತೆ) ಪ್ರಮಾಣ ಪತ್ರಬೇಕು. ಇಲ್ಲಿ ಅದು ಸ್ವಲ್ಪ ಕಡಿಮೆಯಿದೆ. ವೈದ್ಯರು ಅದನ್ನು ಸರಿದೂಗಿಸಿದಲ್ಲಿ ತಕ್ಷಣವೇ ಎಂಸಿಎಚ್ (ಮದರ ಚೈಲ್ಡ್ ಹಾಸ್ಪಿಟಲ್) ಮಂಜೂರು ಮಾಡಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.
ತಾಲ್ಲೂಕು ಆಸ್ಪತ್ರೆಯಲ್ಲಿ ₹4.50 ಕೋಟಿ ವೆಚ್ಚದ ವೈದ್ಯರ ಮತ್ತು ಶುಶ್ರೂಷಕಿಯರ ವಸತಿಗೃಹ ಉದ್ಘಾಟನೆ ಮತ್ತು ₹50 ಲಕ್ಷ ವೆಚ್ಚದ ಬ್ಲಾಕ್ ಮಟ್ಟದ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದ ಶಂಕು ಸ್ಥಾಪನೆಯನ್ನು ಶನಿವಾರ ನೆರವೇರಿಸಿದರು. ಇದಕ್ಕೂ ಮೊದಲು ಸಚಿವರು ತಾಲ್ಲೂಕಿನ ಸಂಕೇಶ್ವರ ಸಿ.ಎಚ್.ಸಿ ಆವರಣದಲ್ಲಿ ನಿರ್ಮಿಸಿದ ₹2.20 ಕೋಟಿ ವೆಚ್ಚದ ಹೆಚ್ಚುವರಿ ವಾರ್ಡ್‌ಗಳು ಮತ್ತು ಔಷಧ ಉಗ್ರಾಣ, ಅಮ್ಮಣಗಿ ಗ್ರಾಮದಲ್ಲಿ ₹1.80 ಕೋಟಿ ವೆಚ್ಚದ ನೂತನ ಸಿ.ಎಚ್.ಸಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
‘ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರೇ ಹೆಚ್ಚು ಚಿಕಿತ್ಸೆ ಪಡೆಯುತ್ತಾರೆ. ಜನರಿಗೆ ಉತ್ತಮ ಆರೋಗ್ಯ ಸಿಗಲಿ ಎಂಬ ಉದ್ಧೇಶದಿಂದ ನಮ್ಮ ಸರ್ಕಾರ ಆರೋಗ್ಯ ಇಲಾಖೆಗೆ ಹೆಚ್ಚಿನ ಮಹತ್ವ ನೀಡಿದೆ’ ಎಂದು ತಿಳಿಸಿದರು.
ಭರವಸೆ: ತಾಲ್ಲೂಕಿನ ಕಣಗಲಾ ಮತ್ತು ಪಾಶ್ಚಾಪುರ ಗ್ರಾಮಗಳಲ್ಲಿ ನಿರ್ಮಿಸಿಸುತ್ತಿರುವ ಸಿಎಚ್‌ಸಿ ಕಟ್ಟಡ ಕಾಮಗಾರಿ ಮುಗಿದ ಬಳಿಕ ಸಿಬ್ಬಂದಿ ಸೇರಿ ಇತರೆ ಎಲ್ಲ ಸೌಲಭ್ಯ ಒದಗಿಸುವೆ. ತಾಲ್ಲೂಕಿನ ಬೆಲ್ಲದ ಬಾಗೇವಾಡಿ ಮತ್ತು ಹಟ್ಟಿ ಆಲೂರ್ ಗ್ರಾಮಗಳಲ್ಲಿ ನೂತನ ಪಿಎಚ್‌ಸಿ ಮಂಜೂರು ಮಾಡಿಸುವೆ ಎಂದು ಭರವಸೆ ನೀಡಿದರು.
ವಿವಿಧ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರು, ವೈದ್ಯರು, ಇತರೆ ಸಿಬ್ಬಂದಿಯ ಕೊರತೆ ಗಮನಕ್ಕೆ ಬಂದಿದ್ದು, ಗುತ್ತಿಗೆ ಆಧಾರದ ಮೇಲೆ ಮತ್ತು ತಜ್ಞ ವೈದ್ಯರ ಸಂಬಳ ಹೆಚ್ಚಿಸಿ ಕೊರತೆ ನೀಗಿಸುವುದಾಗಿ ಹೇಳಿದರು.
ಶಾಸಕ ನಿಖಿಲ್ ಕತ್ತಿ ಅವರು ಸಚಿವ ದಿನೇಶ್ ಗುಂಡೂರಾವ್ ಅವರನ್ನು ಸತ್ಕರಿಸಿದರು.
ಆರೋಗ್ಯ ಇಲಾಖೆ ನಿರ್ದೇಶಕಿ ಪುಷ್ಪಾ, ತಹಶೀಲ್ದಾರ್ ಬಲರಾಮ ಕಟ್ಟಿಮನಿ, ತಾಲ್ಲೂಕು ಪಂಚಾಯ್ತಿ ಇಒ ಟಿ.ಆರ್.ಮಲ್ಲಾಡದ, ಡಿಎಚ್ಒ ಡಾ.ಈಶ್ವರ ಗಡಾದ, ಎಡಿಎಚ್ಒ ಡಾ.ಎಸ್.ಎಸ್.ಗಡೇದ, ಸಿಎಂಒ ಡಾ.ಮಹಾಂತೇಶ ನರಸನ್ನವರ, ಸಂಕೇಶ್ವರದ ಡಾ.ದತ್ತಾತ್ರೆಯ ದೊಡಮನಿ, ಅಮ್ಮಣಗಿಯ ಡಾ.ಸೀಮಾ ಗುಂಜಾಳ, ಟಿಎಚ್ಒ ಡಾ.ಉದಯ ಕುಡಚಿ, ಪುರಸಭೆ ಅಧ್ಯಕ್ಷ ಇಮ್ರಾನ ಮೊಮೀನ್, ಮಹಾಂತೇಶ ತಳವಾರ, ಶಾನೂಲ್ ತಹಸೀಲ್ದಾರ್, ಮುಖಂಡರು ಇದ್ದರು.
ಕ್ಷೇತ್ರದ ಜನಸಂಖ್ಯೆ ಹೆಚ್ಚಗಿದ್ದರಿಂದ ಇನ್ನೂ ನಾಲ್ಕು ಆರೋಗ್ಯ ಕೇಂದ್ರಗಳನ್ನು ಮಂಜೂರು ಮಾಡಬೇಕು ಮತ್ತು ತಕ್ಷಣ ಸಿಬ್ಬಂದಿ ಕೊರತೆ ನೀಗಿಸಬೇಕು.– ನಿಖಿಲ್ ಕತ್ತಿ, ಶಾಸಕ
ಆಸ್ಪತ್ರೆಗೆ ಸೌಲಭ್ಯ ಕಲ್ಪಿಸಲು ಮನವಿ
ಹುಕ್ಕೇರಿ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೌಲಭ್ಯ ಕಲ್ಪಿಸಬೇಕು ಎಂದು ಸ್ಥಳೀಯ ರೈತ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ನೂರು ವರ್ಷದ ಸಂಭ್ರಮಾಚರಣೆಯಲ್ಲಿರುವ ಈ ಆಸ್ಪತ್ರೆಯಲ್ಲಿ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಇರುವಂತೆ ಎಂ.ಸಿ.ಎಚ್ (ಮಟರ್ನಿಟಿ ಚೈಲ್ಡ್ ಹೆಲ್ತ್) ಸೌಲಭ್ಯವಿಲ್ಲ. ತಿಂಗಳಿಗೆ ಅಂದಾಜು 200 ಹೆರಿಗೆಯಾಗುತ್ತಿದ್ದು ಅದರಲ್ಲಿ 50ಕ್ಕೂ ಅಧಿಕ ಸಿಸೇರಿಯನ್ ಮೂಲಕ ಹೆರಿಗೆ ಆಗುತ್ತಿವೆ. ಎಂಸಿಎಚ್ ಸೇವೆ ಮತ್ತು ಸಿಬ್ಬಂದಿ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಅತ್ಯುನ್ನತ ತಂತ್ರಜ್ಞಾನ ಅಲ್ಟ್ರಾ ಸೌಂಡ್ ಮಷಿನ್ ಐಸಿಯು ತುಂಬಾ ಕಡಿಮೆಯಿದ್ದು ಅದನ್ನು ಹೆಚ್ಚಿಸಬೇಕು. ಪ್ಯಾರಾ ಮೆಡಿಕಲ್ ಕಾಲೇಜು ಸ್ಥಾಪಿಸಬೇಕು ಜತೆಗೆ ಕೇಂದ್ರ ಸರ್ಕಾರದ ಆರೋಗ್ಯ ವಿಮೆ ಸೌಲಭ್ಯ ಕುರಿತು ಜನರಿಗೆ ತಿಳಿಸುವ ವ್ಯವಸ್ಥೆ ಆಗಬೇಕು ಎಂದು ಮನವಿ ಮಾಡಿದರು.
ವೇದಿಕೆ ಅಧ್ಯಕ್ಷ ರಾಮಚಂದ್ರ ಜೋಶಿ ಕಾರ್ಯದರ್ಶಿ ಚಂದ್ರಶೇಖರ್ ಗಂಗನ್ನವರ ಸಹಕಾರ್ಯದರ್ಶಿ ತಮ್ಮಣಗೌಡ ಪಾಟೀಲ್ ಸಲಿಂ ಕಳಾವಂತ ಕಬೀರ ಮಲಿಕ್ ಸತ್ಯಪ್ಪ ನಾಯಿಕ ಮಹಾವೀರ ನಿಲಜಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.