ADVERTISEMENT

ಬೆಳಗಾವಿ ಜಿಲ್ಲೆಗೆ ಆಮ್ಲಜನಕ ಹಂಚಿಕೆ ಪ್ರಮಾಣ ಹೆಚ್ಚಳ: ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 9 ಮೇ 2021, 11:40 IST
Last Updated 9 ಮೇ 2021, 11:40 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ಬೆಳಗಾವಿ: ‘ಜಿಲ್ಲೆಗೆ ಪ್ರತಿದಿನ ಪೂರೈಕೆ ಆಗುತ್ತಿದ್ದ 16 ಕೆ.ಎಲ್‌. ವೈದ್ಯಕೀಯ ಆಮ್ಲಜನಕ ಪ್ರಮಾಣವನ್ನು 24 ಕೆ.ಎಲ್.ಗೆ ಹೆಚ್ಚಿಸಲಾಗಿದೆ. ಇದರಿಂದ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅನುಕೂಲವಾಗಲಿದೆ’ ಎಂದು ಉಪ ಮುಖ್ಯಂತ್ರಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಈ ಬಗ್ಗೆ ಭಾನುವಾರ ಪ್ರಕಟಣೆ ನೀಡಿರುವ ಅವರು, ‘ಜಿಲ್ಲೆಯ ಜನಸಂಖ್ಯೆ ಹಾಗೂ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಗೆ ಅನುಸಾರ ರೆಮ್‌ಡಿಸಿವಿರ್ ಚುಚ್ಚುಮದ್ದನ್ನು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಒದಗಿಸುವಂತೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಮೂರು ದಿನಗಳಲ್ಲಿ ಅದು ಕೂಡ ಪೂರೈಕೆ ಆಗಲಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಕೇಂದ್ರ ಸರ್ಕಾರವು 32 ಆಮ್ಲಜನಕ ಘಟಕಗಳನ್ನು ಸ್ಥಾಪಿಸಲು ಮುಂದಾಗಿದ್ದು, ಅದರಲ್ಲಿ 4 ಘಟಕಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಮನವಿ ಮಾಡಿಕೊಂಡಿದ್ದೇನೆ. ಕೊಡುವುದಾಗಿ ಅವರು ಭರವಸೆ ಕೊಟ್ಟಿದ್ದಾರೆ. ಇತ್ತೀಚೆಗೆ ಅಪಘಾತಕ್ಕೀಡಾಗಿರುವ ಆಕ್ಸಿಜನ್ ಟ್ಯಾಂಕರ್ ಕೂಡ ಕೆಲವೇ ದಿನಗಳಲ್ಲಿ ದುರಸ್ತಿಯಾಗಲಿದ್ದು, ಆಮ್ಲಜನಕ ಸಾಗಣೆಗೆ ಸಿದ್ಧಗೊಳ್ಳಲಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಕೋವಿಡ್-19 ಪ್ರಕರಣಗಳನ್ನು ತಡೆಗಟ್ಟುವ ಉದ್ದೇಶದಿಂದ ಮೇ 10ರಿಂದ 14 ದಿನಗಳವರೆಗೆ ಹೊಸ ಮಾರ್ಗಸೂಚಿಯನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕು. ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು’ ಎಂದು ಕೋರಿದ್ದಾರೆ.

‘ಅಗತ್ಯ ಸೇವೆಗಳನ್ನು ಹೊರತುಪಡಿಸಿ ಸಾರ್ವಜನಿಕರು ಹಾಗೂ ವಾಹನಗಳ ಅನಗತ್ಯ ಓಡಾಟ ತಡೆಗಟ್ಟಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ.‌ ಸಾರ್ವಜನಿಕರು ಕೂಡ ಇದಕ್ಕೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.