ಬೆಳಗಾವಿ: ‘ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಮುಂದಿನ ಅವಧಿಯ ಮೇಯರ್, ಉಪಮೇಯರ್ ಆಯ್ಕೆಗಾಗಿ ಚುನಾವಣೆ ನಡೆಸಲು ಚುನಾವಣಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತರು ಮಾರ್ಚ್ 3ರೊಳಗೆ ದಿನಾಂಕ ಘೋಷಿಸದಿದ್ದರೆ, ಪಾಲಿಕೆಯ ಬಿಜೆಪಿ ಸದಸ್ಯರು ಪ್ರಾದೇಶಿಕ ಆಯುಕ್ತರ ಕಚೇರಿ ಆವರಣದಲ್ಲಿ ಧರಣಿ ನಡೆಸಲಿದ್ದಾರೆ’ ಎಂದು ಶಾಸಕ ಅಭಯ ಪಾಟೀಲ ಎಚ್ಚರಿಕೆ ಕೊಟ್ಟರು.
ಇಲ್ಲಿ ತಮ್ಮ ನೇತೃತ್ವದಲ್ಲಿ ಬಿಜೆಪಿಯ ಸದಸ್ಯರು ಗುರುವಾರ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ ಅವರನ್ನು ಭೇಟಿಯಾಗಿ, ‘ಪಾಲಿಕೆ 23ನೇ ಅವಧಿಯ ಮೇಯರ್ ಮತ್ತು ಉಪಮೇಯರ್ ಆಯ್ಕೆಗೆ ತಕ್ಷಣವೇ ಚುನಾವಣೆ ನಡೆಸಬೇಕು’ ಎಂದು ಒತ್ತಾಯಿಸಿ ಮನವಿ ಸಲ್ಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.
‘ಪಾಲಿಕೆಯಲ್ಲಿ ಮೇಯರ್, ಉಪಮೇಯರ್ ಅಧಿಕಾರವಧಿ ಫೆ.14ರಂದು ಮುಗಿದಿದೆ. ಮುಂದಿನ ಅವಧಿಯ ಮೇಯರ್, ಉಪಮೇಯರ್ ಆಯ್ಕೆಗಾಗಿ ಚುನಾವಣೆ ದಿನಾಂಕ ಘೋಷಿಸಲು ಮಾರ್ಚ್ 3ರವರೆಗೆ ಗಡುವು ಕೊಟ್ಟಿದ್ದೇವೆ’ ಎಂದರು.
‘ಬಿಜೆಪಿ ಅಧಿಕಾರದಲ್ಲಿ ಇರುವ ಸ್ಥಳೀಯ ಸಂಸ್ಥೆಗಳಲ್ಲಿ ಮೇಯರ್, ಉಪಮೇಯರ್ ಚುನಾವಣೆ ವಿಳಂಬಗೊಳಿಸಲು ಸರ್ಕಾರ ಪ್ರಯತ್ನ ನಡೆಸಿದೆ. ಬೆಳಗಾವಿ, ಗದಗದಲ್ಲಿ ಇಂಥ ಪ್ರಕರಣ ಕಂಡುಬಂದಿವೆ. ಈ ಮಧ್ಯೆ, ಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರನ್ನು ಪ್ರಾದೇಶಿಕ ಆಯುಕ್ತರು ಕಾನೂನು ಬಾಹಿರವಾಗಿ ಅನರ್ಹಗೊಳಿಸಿದ್ದಾರೆ. ಹೈಕೋರ್ಟ್ ಮತ್ತು ಸರ್ಕಾರದ ಮುಂದೆ ಈ ಆದೇಶ ಪ್ರಶ್ನಿಸಿದ್ದೇವೆ’ ಎಂದು ಹೇಳಿದರು.
‘ಇಬ್ಬರು ಸದಸ್ಯರು ಅನರ್ಹವಾದ ಕಾರಣ, ಪಾಲಿಕೆಯಿಂದ ಹೊಸ ಮತದಾರರ ಪಟ್ಟಿ ಕೊಡುವಂತೆ ಪ್ರಾದೇಶಿಕ ಆಯುಕ್ತರು ಕೇಳಿದ್ದಾರೆ. ಆದರೆ, ಈಗಾಗಲೇ ಮತದಾರರ ಪಟ್ಟಿ ಸಲ್ಲಿಸಲಾಗಿದ್ದು, ಇಬ್ಬರು ಸದಸ್ಯರ ಅನರ್ಹತೆಗೆ ಸಂಬಂಧಿಸಿದ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗಿರುವಾಗ ಹೊಸ ಮತದಾರರ ಪಟ್ಟಿ ಕೊಡಲು ಸಾಧ್ಯವಿಲ್ಲ’ ಎಂದು ತಿಳಿಸಿದರು.
ಉಪಮೇಯರ್ ಆನಂದ ಚವ್ಹಾಣ, ಪಾಲಿಕೆ ಆಡಳಿತ ಪಕ್ಷದ ನಾಯಕ ಗಿರೀಶ ಧೊಂಗಡಿ, ಮಾಜಿ ಉಪಮೇಯರ್ ರೇಷ್ಮಾ ಪಾಟೀಲ, ಸದಸ್ಯರಾದ ವೀಣಾ ಬಿಜಾಪುರೆ, ಹನುಮಂತ ಕೊಂಗಾಲಿ, ರಾಜು ಭಾತಕಾಂಡೆ, ಅಭಿಜಿತ ಜವಳಕರ, ಸಂತೋಷ ಪೆಡನೇಕರ್, ನಿತಿನ ಜಾಧವ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.