ADVERTISEMENT

ಎಂಇಎಸ್ ನಿಷೇಧಕ್ಕೆ ಗಂಭೀರ ಚರ್ಚೆ: ಸಚಿವ ಸತೀಶ ಜಾರಕಿಹೊಳಿ ಭರವಸೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 10:02 IST
Last Updated 1 ನವೆಂಬರ್ 2025, 10:02 IST
   

ಬೆಳಗಾವಿ: 'ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಾಯಕರು ನಾಡವಿರೋಧಿ ಘೋಷಣೆ ಹಾಕಿದ್ದಾರೆ ಎಂಬ ದೂರು ಆಧರಿಸಿ, ಆ ಸಂಘಟನೆ ನಿಷೇಧ ಮಾಡುವ ಬಗ್ಗೆ ಗಂಭೀರ ಚರ್ಚೆ ಮಾಡಲಾಗುವುದು' ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಶನಿವಾರ ರಾಜ್ಯೋತ್ಸವ ಧ್ವಜಾರೋಹಣ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಎಂಇಎಸ್ ನಾಯಕರಿಗೆ ಕರಾಳ ದಿನಾಚರಣೆಗೆ ಅವಕಾಶ‌ ನೀಡಲಾಗಿಲ್ಲ. ಅವರು ಪ್ರತಿ ವರ್ಷ ಸಮಾವೇಶದ ಹೆಸರಿನಲ್ಲಿ ಅನುಮತಿ ಪಡೆಯುತ್ತಿದ್ದಾರೆ. ಕನ್ನಡ ವಿರೋಧಿ ಚಟುವಟಿಕೆ ನಡೆಸದಂತೆ ನಿಗಾ ವಹಿಸಲಾಗುವುದು. ಅಂಥ ಕೆಲಸ ಮಾಡಿದ್ದರೆ ಸಂಘಟನೆ ನಿಷೇಧಿಸಲು ಗಂಭೀರ ಚರ್ಚೆ ಮಾಡಲಾಗುವುದು. ಈ ಬಗ್ಗೆ ಪೊಲೀಸ್ ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮರಾಠ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಯಾದವ (ಹಲಗೇಕರ) ಅವರು ಕನ್ನಡ ವಿರೋಧಿ ಧೋರಣೆ ಹೊಂದಿದ್ದರೂ ಲಾಬಿ ಮಾಡಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, 'ಆ ಸಂಸ್ಥೆಯಲ್ಲಿ ಕನ್ನಡ ಬಳಸುವ ಬಗ್ಗೆ ಗಮನ ಹರಿಸಲಾಗುವುದು' ಎಂದರು.

ADVERTISEMENT

ಕೊಲ್ಹಾಪುರ ವೃತ್ತವನ್ನು ಶ್ರೀಕೃಷ್ಣದೇವರಾಯ ವೃತ್ತ ಎಂದು ಮಾಡಿ ದಶಕಗಳು ಕಳೆದರೂ ಅಲ್ಲಿ ಶ್ರೀಕೃಷ್ಣದೇವರಾಯ ಚಕ್ರವರ್ತಿಯ ಪ್ರತಿಮೆ ಮಾಡಿಲ್ಲ ಎಂದು ಗಮನ ಸೆಳೆದಾಗ, 'ಮಹಾನಗರ ಪಾಲಿಕೆಯಲ್ಲಿ ಚರ್ಚೆ ಮಾಡಿ ಇದನ್ನು ಈಡೇರಿಸಲಾಗುವುದು' ಎಂದರು.

'ಈ ವರ್ಷ ಮೊದಲಬಾರಿಗೆ ರಾಜ್ಯೋತ್ಸವಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ₹50 ಲಕ್ಷ ಅನುದಾನ ನೀಡಲಾಗಿದೆ. ಅದನ್ನು‌ ಯಾವುದಕ್ಕೆ, ಹೇಗೆ ಬಳಸಬೇಕು ಎಂಬ ಬಗ್ಗೆಯೂ ಜಿಲ್ಲಾಧಿಕಾರಿ ಸಭೆ ಕರೆದು ನಿರ್ಧರಿಸುತ್ತಾರೆ' ಎಂದೂ ಪ್ರತಿಕ್ರಿಯಿಸಿದರು.

ತನಿಖೆಗೆ ಆದೇಶ:

'ಎಂಇಎಸ್ ನಾಯಕ, ರೌಡಿ ಶೀಟರ್ ಆಗಿರುವ ಶುಭಂ ಸೆಳಕೆ ಜತೆಗೆ ಸಿಪಿಐ ಜಾಕೀರ್ ಪಾಷಾ ಖಾಲಿಮಿರ್ಚಿ ಅವರು ಕರಾಳ ದಿನಾಚರಣೆ ವೇಳೆಯೇ ಸೆಲ್ಫಿ ಕ್ಲಿಕ್ಕಿಸಿಕೊಂಡ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತಿರಿಸಿದ ಅವರು, 'ಇದನ್ನು ಕಮಿಷನರ್ ಗಮನಕ್ಕೆ‌‌ ತಂದು ತನಿಖೆ‌ ಮಾಡಿಸಿ ನಂತರ ಕ್ರಮ ವಹಿಸಲಾಗುವುದು' ಎಂದರು.

ರಾಜ್ಯೋತ್ಸವ ಕವಾಯತು ಪರಿವೀಕ್ಷಣೆಯ ವಾಹನ ಕೆಟ್ಟುನಿಂತ ಬಗ್ಗೆ ಸಮಜಾಯಿಷಿ ನೀಡಿದ ಸಚಿವ, 'ಇದು ತಾಂತ್ರಿಕ ದೋಷ. ಸಹಜವಾಗಿ ಆಗುತ್ತವೆ. ಗಂಭೀರ ಲೋಪ ಎಂದು ಪರಿಗಣಿಸಬಾರದು' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.