ADVERTISEMENT

ಬೆಳಗಾವಿ: ‘ಕರಾಳ ದಿನಾಚರಣೆ’ಗೆ ಎಂಇಎಸ್ ತಯಾರಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 17:24 IST
Last Updated 14 ಅಕ್ಟೋಬರ್ 2020, 17:24 IST

ಬೆಳಗಾವಿ: ಇಲ್ಲಿ ನ. 1ರಂದು ನಡೆಯುವ ಕರ್ನಾಟಕ ರಾಜ್ಯೋತ್ಸವ ಬಹಿಷ್ಕರಿಸಿ ಪ್ರತಿ ವರ್ಷದಂತೆ ‘ಕರಾಳ ದಿನಾಚರಣೆ’ ಆಯೋಜಿಸಲು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯವರು ಸಿದ್ಧತೆ ಆರಂಭಿಸಿದ್ದಾರೆ.

ಸಮಿತಿಯ ಮುಖಂಡರು ಹಾಗೂ ಪದಾಧಿಕಾರಿಗಳು ಬುಧವಾರ ಪೂರ್ವಭಾವಿ ಸಭೆ ನಡೆಸಿ ಚರ್ಚಿಸಿದ್ದಾರೆ. ಈ ವರ್ಷ ಕೊರೊನಾ ವ್ಯಾಪಕವಾಗಿರುವ ಕಾರಣದಿಂದ ಕರಾಳ ದಿನದ ಮೆರವಣಿಗೆ ಮತ್ತು ಸಭೆಯನ್ನು ಸರ್ಕಾರದ ಮಾರ್ಗಸೂಚಿಯಂತೆ ನಡೆಸುವ ಬಗ್ಗೆ ತೀರ್ಮಾನಿಸಿದರು.

‘ಈ ಬಾರಿ ಕೋವಿಡ್–19 ಸಂಕಷ್ಟವಿದೆ. ಹೀಗಾಗಿ, ಮಾರ್ಗಸೂಚಿಗಳನ್ನು ಅನುಸರಿಸಿಕೊಂಡೇ ಬೆಳಗಾವಿಯಲ್ಲಿ ಕರಾಳ ದಿನಾಚರಣೆ ನಡೆಸಲು ಮುಂಬೈನಲ್ಲಿ ಮುಖಂಡರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗಿದೆ’ ಎಂದು ಮುಖಂಡ ದೀಪಕ ದಳವಿ ತಿಳಿಸಿದರು.

ADVERTISEMENT

‘ಗಡಿ ಭಾಗದಲ್ಲಿನ ಮರಾಠಿ ಭಾಷಿಕರ ಸಮಸ್ಯೆಗಳು ಹಾಗೂ ಭಾವನೆಗಳನ್ನು ಅರ್ಥ ಮಾಡಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಮರಾಠಿಗರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು. ಗಡಿ ಸಮಸ್ಯೆಯನ್ನು ಶೀಘ್ರ ಇತ್ಯರ್ಥಗೊಳಿಸಿ ನಮಗೆ ನ್ಯಾಯ ಒದಗಿಸಬೇಕು. ಮತ್ತೊಮ್ಮೆ ಕರಾಳ ದಿನಾಚರಣೆ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿ ಮನವಿ ಸಲ್ಲಿಸಬೇಕು ಎಂದು ತೀರ್ಮಾನಿಸಲಾಯಿತು. ಮಹಾರಾಷ್ಟ್ರ ಸರ್ಕಾರಕ್ಕೂ ಈ ಸಂಬಂಧ ಮಾಹಿತಿ ನೀಡಲು ನಿರ್ಣಯ ಕೈಗೊಳ್ಳಲಾಯಿತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.