ADVERTISEMENT

ಲೋಕಸಭೆ ಕಣಕ್ಕೆ ಎಂಇಎಸ್‌: ಸಮಿತಿ ರಚನೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2024, 14:45 IST
Last Updated 29 ಮಾರ್ಚ್ 2024, 14:45 IST

ಬೆಳಗಾವಿ: ‘ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಮಹಾರಾಷ್ಟ್ರ ಏಕೀಕರಣ ಸಮಿತಿಯಿಂದ (ಎಂಇಎಸ್‌) ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಬೇಕು. ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕು. ಇದರ ಸಾಧಕ– ಬಾಧಕ ಕುರಿತು ಚರ್ಚಿಸಲು 21 ಜನರ ಸಮಿತಿ ರಚಿಸಲಾಗುವುದು’ ಎಂದು ಎಂಇಎಸ್‌ ಕಾರ್ಯಾಧ್ಯಕ್ಷ ಮನೋಹರ ಕಿಣೇಕರ್‌ ಹೇಳಿದರು.

ಲೋಕಸಭಾ ಚುನಾವಣೆಗೆ ಬೆಳಗಾವಿ ಕ್ಷೇತ್ರದಿಂದ ಎಂಇಎಸ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ವಿಷಯದ ಕುರಿತು ಚರ್ಚಿಸಲು ಇಲ್ಲಿನ ಮರಾಠ ಮಂದಿರ ಕಚೇರಿಯಲ್ಲಿ ಶುಕ್ರವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಈ ಸಲದ ಚುನಾವಣೆಯಲ್ಲಿ ಎಂಇಎಸ್‌ನಿಂದ ಅಭ್ಯರ್ಥಿ ಅಖಾಡಕ್ಕಿಳಿಸುವುದು ನಿಶ್ಚಿತ’ ಎಂದರು.

‘ಒಬ್ಬರನ್ನೇ ನಿಲ್ಲಿಸಿ ಸ್ಪರ್ಧೆ ಒಡ್ಡೋಣ ಎಂದು ಕೆಲವರು ಸಲಹೆ ನೀಡಿದರೆ, ಇನ್ನೂ ಕೆಲವರು 500 ಮಂದಿ ಕಣಕ್ಕಿಳಿಸೋಣ ಎಂದು ಕೆಲವರು ಸಲಹೆ ನೀಡಿದ್ದಾರೆ. ಇನ್ನೂ ಕೆಲವರು ಚುನಾವಣೆಯನ್ನೇ ಬಹಿಷ್ಕರಿಸಲು ಕೋರಿದ್ದಾರೆ. ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಮತ್ತೊಮ್ಮೆ ಸಭೆ ಕರೆಯಲಾಗುವುದು’ ಎಂದರು.

ADVERTISEMENT

‘500 ಮಂದಿ ಕಣಕ್ಕಿಳಿಸಿದರೆ ಠೇವಣಿ ಭರಿಸುವುದು ಕಷ್ಟವಾಗುತ್ತದೆ. ಠೇವಣಿ ಹೇಗೆ ಸಂಗ್ರಹಿಸಬೇಕು ಎಂಬ ಬಗ್ಗೆಯೂ ಚಿಂತನೆ ನಡೆಸಿದ್ದೇವೆ’ ಎಂದರು.

ಎಂಇಎಸ್‌ ಮುಖಂಡರಾದ ರಮಾಕಾಂತ ಕೊಂಡೂಸ್ಕರ್‌, ಶುಭಂ ಶೆಳಕೆ, ಮಾಲೋಜಿ ಅಷ್ಟೇಕರ್‌, ಶಿವಾಜಿ ಸುಂಠಕರ್‌ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.