ADVERTISEMENT

ಆರ್‌ಸಿಯು: ಹೊಸ ಯೋಜನೆ ರೂಪಿಸಿ-ಸಚಿವ ಡಾ.ಎಂ.ಸಿ. ಸುಧಾಕರ

ಕಾಮಗಾರಿಗಳು ತೀವ್ರ ಕಳಪೆ: ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2023, 15:28 IST
Last Updated 26 ಅಕ್ಟೋಬರ್ 2023, 15:28 IST
ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಬಳಿ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್‌ ಕಾಮಗಾರಿಗಳನ್ನು ಸಚಿವ ಡಾ.ಸುಧಾಕರ ಗುರುವಾರ ಪರಿಶೀಲಿಸಿದರು
ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಬಳಿ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್‌ ಕಾಮಗಾರಿಗಳನ್ನು ಸಚಿವ ಡಾ.ಸುಧಾಕರ ಗುರುವಾರ ಪರಿಶೀಲಿಸಿದರು   

ಬೆಳಗಾವಿ: ತಾಲ್ಲೂಕಿನ ಹಿರೇಬಾಗೇವಾಡಿ ಬಳಿ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಕಾಮಗಾರಿಗಳನ್ನು ಕಂಡು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ತೀವ್ರ ಬೇಸರ ವ್ಯಕ್ತಪಡಿಸಿದರು.

ಗುರುವಾರ ಕಾಮಗಾರಿಗಳನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ‘ಇಲ್ಲಿನ ಯಾವುದೇ ಕಾಮಗಾರಿ ವಿಶ್ವವಿದ್ಯಾಲಯಕ್ಕೆ ಮಾಡಿದಂತೆ ಇಲ್ಲ. ಯಾವುದೋ ಕಾಂಪ್ಲೆಕ್ಸ್‌ ಕಟ್ಟಿದಂತಿವೆ. ತಕ್ಷಣ ಹೊಸದಾಗಿ ಯೋಜನೆ ರೂಪಿಸಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷೀ ಹೆಬ್ಬಾಳಕರ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಮಾರ್ಗದರ್ಶನದಲ್ಲೇ ಕಾಮಗಾರಿ ಮುಂದುವರಿಯಬೇಕು. ಮನಸ್ಸಿಗೆ ಬಂದಂತೆ ಕಾಮಗಾರಿ ನಡೆಯುವುದನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಅವರು ಕಿಡಿ ಕಾರಿದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ‘ರಾಜಕೀಯ ಕಾರಣಕ್ಕಾಗಿ ತರಾತುರಿಯಲ್ಲಿ ಮಾಡಲಾಗಿರುವ ಯೋಜನೆ ಇದು. ನಾನು ರೂಪಿಸಿದ್ದ ಕುಡಿಯುವ ನೀರಿನ ಯೋಜನೆಯನ್ನು ತಡೆಯುವ ಉದ್ದೇಶದಿಂದ ಹಿಂದಿನ ಸರ್ಕಾರ ಹೊಟ್ಟೆಕಿಚ್ಚಿನಿಂದ ತಂದ ಯೋಜನೆಯಾಗಿದೆ. ಇದು ನೂರಾರು ವರ್ಷ ಇರಬೇಕಾದ ಜ್ಞಾನ ದೇಗುಲ. ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸುವ ಕಟ್ಟಡವಾಗಬೇಕು. ರಾಜಕೀಯ ಹಗೆಯಿಂದ ಕಳಪೆ ಕಾಮಗಾರಿ ನಡೆಯುತ್ತಿದೆ. ಈ ಬಗ್ಗೆ ಕ್ರಮ ವಹಿಸಬೇಕು’ ಎಂದು ಸಚಿವರಿಗೆ ಮನವಿ ಮಾಡಿದರು.

ADVERTISEMENT

‘ಗುಡ್ಡದ ಮೇಲಿರುವ ಐತಿಹಾಸಿಕ ದೇವಸ್ಥಾನಕ್ಕೆ 10 ಎಕರೆ ಜಾಗ ಒದಗಿಸಿ, ವಿಶ್ವವಿದ್ಯಾಲಯದಿಂದಲೇ ದೇವಸ್ಥಾನ ಜೀರ್ಣೋದ್ಧಾರ ಮಾಡಬೇಕು. ಹಿಂದೆ ಆಗಿದ್ದು ಆಗಿದೆ. ಮುಂದೆ ರೈತರಿಗೆ ಯಾವುದೇ ರೀತಿಯಲ್ಲಿ ಅನ್ಯಾಯ ಆಗಬಾರದು. ವಿಶ್ವವಿದ್ಯಾಲಯದ ಕಾಮಗಾರಿಗಳೂ ಉತ್ತಮವಾಗಿ ನಡೆಯಬೇಕು’ ಎಂದು ಹೆಬ್ಬಾಳಕರ ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ, ‘ಇನ್ನು ಮುಂದೆ ಸಂಪೂರ್ಣ ಕಾಮಗಾರಿಯ ಉಸ್ತುವಾರಿಯನ್ನು ನೀವೇ ನೋಡಿಕೊಳ್ಳಬೇಕು. ಮಲ್ಲಪ್ಪನ ದೇವಸ್ಥಾನಕ್ಕೆ 10 ಎಕರೆ ಭೂಮಿ ಬಿಟ್ಟುಕೊಡಬೇಕು. ಸಿಂಡಿಕೇಟ್ ಸಭೆಯಲ್ಲಿ ಈ ಕುರಿತು ನಿರ್ಣಯ ಅಂಗೀಕರಿಸಬೇಕು’ ಎಂದರು.

‘ಕಾಮಗಾರಿಗಳು ಕಳಪೆಯಾದ ಬಗ್ಗೆ ಗುತ್ತಿಗೆದಾರರಿಗೆ ಈಗಾಗಲೇ ಮೂರು ನೋಟಿಸ್ ನೀಡಲಾಗಿದೆ’ ಎಂದು ವಿಶ್ವವಿದ್ಯಾಲಯ ಕುಲಸಚಿವೆ ರಾಜಶ್ರೀ ಜೈನಾಪುರೆ ಸಚಿವರಿಗೆ ತಿಳಿಸಿದರು.

‘ಇಲ್ಲಿನ ಕಾಮಗಾರಿಯ ನೆಪದಲ್ಲಿ ನಮ್ಮೂರಿಗೆ ಕುಡಿಯುವ ನೀರಿನ ಸಮಸ್ಯೆ ಆಗುವಂತೆ ಮಾಡಿದ್ದಾರೆ. ನಮ್ಮನ್ನು ತಪ್ಪು ದಾರಿಗೆಳೆದು, ವಿಶ್ವವಿದ್ಯಾಲಯದ ಯೋಜನೆ ರೂಪಿಸಲಾಗಿದೆ. ನಮಗೆ ಕುಡಿಯುವ ನೀರಿನ ಯೋಜನೆ ಬೇಕು. ಅದಕ್ಕಾಗಿ ಅಗತ್ಯ ಜಾಗ ಬಿಟ್ಟುಕೊಡಬೇಕು. ರೈತರಿಗೆ ಅನ್ಯಾಯ ಆಗುವುದನ್ನು ತಪ್ಪಿಸಬೇಕು’ ಎಂದು ರೈತರು ಸಚಿವರಿಗೆ ಮನವಿ ಮಾಡಿದರು.

ಸಚಿವರ ಮುಂದೆ ಲೋಪ ಬಿಚ್ಚಿಟ್ಟ ಕುಲಪತಿ: ಸಚಿವರಿಗೆ ಮಾಹಿತಿ ನೀಡಿದ  ಹಂಗಾಮಿ ಕುಲಪತಿ ವಿಜಯ್ ನಾಗಣ್ಣವರ ‘ಇಡೀ ವಿಶ್ವವಿದ್ಯಾಲಯದ ಯೋಜನೆ ಅವೈಜ್ಞಾನಿಕವಾಗಿದೆ. ಯಾವುದೋ ವಾಣಿಜ್ಯ ಕಟ್ಟಡಗಳ ನಿರ್ಮಾಣದ ಗುತ್ತಿಗೆದಾರರಿಗೆ ವಿಶ್ವವಿದ್ಯಾಲಯದ ಕಟ್ಟಡ ಗುತ್ತಿಗೆ ನೀಡಲಾಗಿದೆ. ಶಿಕ್ಷಣ ಸಂಸ್ಥೆಯೊಂದು ಹೇಗಿರಬೇಕು ಎನ್ನುವ ಸಾಮಾನ್ಯ ಜ್ಞಾನವೂ ಅವರಿಗಿಲ್ಲ. ಸಭಾಭವನ ಸೇರಿದಂತೆ ಪ್ರತಿಯೊಂದು ಕಟ್ಟಡ ಕೊಠಡಿಗಳೂ ವಿಶ್ವವಿದ್ಯಾಲಯಕ್ಕೆ ಸೂಕ್ತವಾಗುವ ರೀತಿಯಲ್ಲಿ ಇಲ್ಲ. ಉಪನ್ಯಾಸಕರ ಕೊಠಡಿ ನಿರ್ಮಾಣದ ಯೋಜನೆಯನ್ನೇ ರೂಪಿಸಲಾಗಿಲ್ಲ. ಅಗತ್ಯ ಪ್ರಮಾಣದ ಶೌಚಾಲಯ ನಿರ್ಮಿಸುವ ಪ್ರಸ್ತಾಪವಿಲ್ಲ’ ಎಂದರು. ‘ಕಟ್ಟಡ ಕಾಮಗಾರಿಯಲ್ಲಿ ಅತ್ಯಂತ ಕಳಪೆ ಸಾಮಗ್ರಿಗಳನ್ನು ಬಳಸಲಾಗುತ್ತಿದೆ. ಕೈಯಿಂದ ಕೆರೆದರೆ ಇಟ್ಟಿಗೆಗಳು ಕಿತ್ತು ಬರುತ್ತವೆ. ಗಟ್ಟಿಯಾಗಿ ದೂಡಿದರೆ ಕಂಪೌಂಡ್‌ ಗೋಡೆ ಬೀಳುವಂತಿದೆ. ನೀರಿನ ತೀವ್ರ ಕೊರತೆಯಿಂದಾಗಿ ಕ್ಯೂರಿಂಗ್ ಕೂಡ ಮಾಡಲಾಗಿಲ್ಲ’ ಎಂದರು. ‘ಈ ಕಟ್ಟಡ ಬಹಳ ದಿನ ಉಳಿಯಲು ಸಾಧ್ಯವಿಲ್ಲ. ಒಳಗಡೆ ರಸ್ತೆಗಳೂ ಸರಿಯಾಗಿಲ್ಲ. ಒಟ್ಟಾರೆ ಇದೊಂದು ವಿಶ್ವವಿದ್ಯಾಲಯದ ರೀತಿಯಲ್ಲೇ ಇಲ್ಲ. ಈಗಿರುವ ವಿಶ್ವವಿದ್ಯಾಲಯಕ್ಕಿಂತ ಕಳಪೆಯಾಗಿದೆ. ಹಾಗಾಗಿ ಈ ಯೋಜನೆಯನ್ನು ಕೈಬಿಟ್ಟು ಸಂಪೂರ್ಣ ಹೊಸದಾಗಿ ರೂಪಿಸಬೇಕು’ ಎಂದು ಅವರು ಸಚಿವರಲ್ಲಿ ವಿನಂತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.