ADVERTISEMENT

8,390 ಹೆಕ್ಟೇರ್‌ ಜಮೀಮಿಗೆ ನೀರು: ಭರವಸೆ

₹567 ಕೋಟಿ ವೆಚ್ಚದ ಕರಗಾಂವ ಏತ ನೀರಾವರಿ ಕಾಮಗಾರಿಗೆ ಚಾಲನೆ ನೀಡಿದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 6:16 IST
Last Updated 28 ಮಾರ್ಚ್ 2023, 6:16 IST
ಚಿಕ್ಕೋಡಿ ತಾಲ್ಲೂಕಿನ ನಾಗರಮುನ್ನೋಳಿಯಲ್ಲಿ ಸೋಮವಾರ ಕರಗಾಂವ ಏತ ನೀರಾವರಿ ಯೋಜನೆ ಕಾಮಗಾರಿಗೆ ಸಚಿವ ಗೋವಿಂದ ಕಾರಜೋಳ ಚಾಲನೆ ನೀಡಿದರು
ಚಿಕ್ಕೋಡಿ ತಾಲ್ಲೂಕಿನ ನಾಗರಮುನ್ನೋಳಿಯಲ್ಲಿ ಸೋಮವಾರ ಕರಗಾಂವ ಏತ ನೀರಾವರಿ ಯೋಜನೆ ಕಾಮಗಾರಿಗೆ ಸಚಿವ ಗೋವಿಂದ ಕಾರಜೋಳ ಚಾಲನೆ ನೀಡಿದರು   

ನಾಗರಮುನ್ನೋಳಿ (ಚಿಕ್ಕೋಡಿ ತಾ.): ‘ಈ ಭಾಗದ ಜನರ ಅನೇಕ ವರ್ಷಗಳ ಬೇಡಿಕೆ ಕರಗಾಂವ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡಲಾಗಿದೆ. ಇದರಿಂದ 15 ಹಳ್ಳಿಗಳ ರೈತರ ಬದುಕು ಹಸನಾಗಲಿದೆ. ಒಂದು ವರ್ಷದ ಅವಧಿಯಲ್ಲಿ ನೀರು ಹರಿಯಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.

ರಾಯಬಾಗ ವಿಧಾನಸಭೆ ಕ್ಣೇತ್ರಕ್ಕೆ ಬರುವ, ಚಿಕ್ಕೋಡಿ ತಾಲ್ಲೂಕಿನ 14 ಗ್ರಾಮಗಳ ಸುಮಾರು 8,390 ಹೆಕ್ಟೇರ್‌ ಜಮೀಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ₹567 ಕೋಟಿ ವೆಚ್ಚದ ಕರಗಾಂವ ಏತ ನೀರಾವರಿ ಯೋಜನೆ ಕಾಮಗಾರಿಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ನೀರಾವರಿಯಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿರುವುದು ಸತ್ಯ. 1964ರಲ್ಲಿ ಆಲಮಟ್ಟಿ ಅಣೆಕಟ್ಟೆಗೆ ಶಂಕುಸ್ಥಾಪನೆ ಮಾಡಲಾದರೂ, 60 ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ನೀರಾವರಿ ಯೋಜನೆ ಮಾಡಲಿಲ್ಲ. ಅವರಿಗೆ ಜನರ ಕಾಳಜಿ ಇರಲಿಲ್ಲ’ ಎಂದು ದೂರಿದರು.

ADVERTISEMENT

‘ಆಲಮಟ್ಟಿ ಅಣೆಕಟ್ಟೆಯ ಎತ್ತರ ಹೆಚ್ಚಿಸಿ, ನೀರಾವರಿ ಯೋಜನೆ ಮಾಡಲು ನ್ಯಾಯಾಲಯದ ತೊಡಕು ಇದೆ. ಅದನ್ನು ಬಗೆಹರಿಸಿ ಮುಂದುಹೋಗಬೇಕಿದೆ. 66 ಲಕ್ಷ ಹೆಕ್ಟೇರ್‌ ನೀರಾವರಿ ಮಾಡಲು ಅವಕಾಶ ಇದೆ’ ಎಂದರು.

‘ಕಳೆದ ಮೂರುವರೆ ವರ್ಷದಲ್ಲಿ ಬಿಜೆಪಿ ಸರ್ಕಾರ ₹75 ಸಾವಿರ ಕೋಟಿ ಅನುದಾನ ವಿನಿಯೋಗ ಮಾಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ₹5,700 ಕೋಟಿನ್ನು ಉತ್ತರ ಕರ್ನಾಟಕಸ ನೀರಾವರಿಗೆ ನೀಡಿದ್ದಾರೆ. 15 ಯೋಜನೆ ಕೈಗೆತ್ತಿಕೊಳ್ಳಲಾಗಿದೆ’ ಎಂದು ವಿವರಿಸಿದರು.

‘₹150 ಕೋಟಿ ವೆಚ್ಚದಲ್ಲಿ ಶಿವಶಕ್ತಿ ಯೋಜನೆ ಮಾಡಲಾಗುವುದು. ಹನುಮಾನ್‌ ಏತ ನೀರಾವರಿ ಮತ್ತು ಬೆಂಡವಾಡ ಏತ ನೀರಾವರಿ ಯೋಜನೆ ಅನುಷ್ಠಾನ ಕೂಡ ಶೀಘ್ರ ನೆರವೇರಿಸಲಾಗುವುದು’ ಎಂದೂ ಭರವಸೆ ನೀಡಿದರು.

ಶಾಸಕ ಪಿ.ರಾಜೀವ್‌ ಮಾತನಾಡಿದರು.

ಸಂಸದ ಅಣ್ಣಾಸಾಹೇಬ್‌ ಜೊಲ್ಲೆ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಸಂಸದ ರಮೇಶ ಕತ್ತಿ, ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿದರು. ಶಾಸಕ ದುರ್ಯೋಧನ ಐಹೊಳೆ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪವನ ಕತ್ತಿ, ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ, ಹೆಸ್ಕಾಂ ನಿರ್ದೇಶಕ ಮಹೇಶ ಭಾತೆ, ಸುರೇಶ ಬೆಲ್ಲದ, ಮಹಾಲಿಂಗ ಹಂಜಿ, ದಾನಪ್ಪ ಕೊಟಬಾಗಿ, ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎ.ಎಸ್.ಪಾಶ್ಚಾಪೂರೆ, ಸದಾಶಿವ ಘೋರ್ಪಡೆ, ಅಣ್ಣಾಸಾಹೇಬ ಖೇಮಲಾಪೂರೆ, ಸತೀಶ ಅಪ್ಪಾಜಿಗೋಳ, ಅರುಣ ಐಹೊಳೆ, ರಮೇಶ ಕಾಳನ್ನವರ, ರಾಜು ಹರಗನ್ನವರ, ವಿ.ಬಿ.ಈಟಿ ವೇದಿಕೆ ಮೇಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.