ADVERTISEMENT

ಮಲಪ್ರಭಾ ಯೋಜನೆ | ಹಂತ ಹಂತವಾಗಿ ಅನುಷ್ಠಾನಕ್ಕೆ ಸೂಚನೆ: ರಮೇಶ ಜಾರಕಿಹೊಳಿ

ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಸಚಿವ

​ಪ್ರಜಾವಾಣಿ ವಾರ್ತೆ
Published 19 ಮೇ 2020, 11:04 IST
Last Updated 19 ಮೇ 2020, 11:04 IST
ಸವದತ್ತಿ ತಾಲ್ಲೂಕು ನವೀಲುತೀರ್ಥ ಜಲಾಶಯ ಬಳಿಯ ಮಲಪ್ರಭಾ ಯೋಜನಾ ವಲಯದ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಕಚೇರಿಯಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಮಾತನಾಡಿದರು. ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಇದ್ದಾರೆ
ಸವದತ್ತಿ ತಾಲ್ಲೂಕು ನವೀಲುತೀರ್ಥ ಜಲಾಶಯ ಬಳಿಯ ಮಲಪ್ರಭಾ ಯೋಜನಾ ವಲಯದ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಕಚೇರಿಯಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಮಾತನಾಡಿದರು. ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಇದ್ದಾರೆ   

ಸವದತ್ತಿ/ ಬೆಳಗಾವಿ: ‘ಮಲಪ್ರಭಾ ಯೋಜನಾ ವಲಯದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳು, ದುರಸ್ತಿ ಮತ್ತು ವಸತಿಗೃಹಗಳ ನವೀಕರಣಕ್ಕೆ ಸಾವಿರಾರು ಕೋಟಿ ರೂಪಾಯಿ ಅಗತ್ಯವಿದೆ. ಆದ್ದರಿಂದ ಇವುಗಳನ್ನು ಆದ್ಯತೆ ಮೇರೆಗೆ ಮೂರು ವರ್ಷಗಳಲ್ಲಿ ಪೂರ್ಣಗೊಳಿಸಬೇಕು’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಸೂಚಿಸಿದರು.

ಸವದತ್ತಿ ತಾಲ್ಲೂಕು ನವೀಲುತೀರ್ಥ ಜಲಾಶಯ ಬಳಿಯ ಮಲಪ್ರಭಾ ಯೋಜನಾ ವಲಯದ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಕಚೇರಿಯಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯ ಶಾಸಕರು ಶಿಫಾರಸು ಮಾಡಿರುವ ಎಲ್ಲ ನೀರಾವರಿ ಯೋಜನೆ, ದುರಸ್ತಿ ಮತ್ತು ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ತಕ್ಷಣ ಕೈಗೊಳ್ಳಬೇಕು. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ರೈತರಿಗೆ ಪರಿಹಾರದ ಮೊತ್ತ ಪಾವತಿಸಲು ಪ್ರತಿ ವರ್ಷದ ಅನುದಾನದಲ್ಲಿ ನಿರ್ದಿಷ್ಟ ಮೊತ್ತ ಮೀಸಲಿಡಲಾಗುವುದು’ ಎಂದು ತಿಳಿಸಿದರು.

ADVERTISEMENT

ಗುತ್ತಿಗೆದಾರರ ವಿರುದ್ಧ ಕ್ರಮ:

‘ಕಾಮಗಾರಿ ವಿಳಂಬವಾದರೆ ಗುತ್ತಿಗೆದಾರರಿಗೆ ನೋಟಿಸ್ ನೀಡಬೇಕು. ನಂತರವೂ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸದವರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಭೂಸ್ವಾಧೀನ ಪ್ರಕರಣಗಳನ್ನು ಹೊರತುಪಡಿಸಿ ಬೇರೆ ಕಾಮಗಾರಿ ವಿಳಂಬವಾದರೆ ಗುತ್ತಿಗೆದಾರರ ಧೋರಣೆಯನ್ನು ಸಹಿಸುವುದಿಲ್ಲ. ಅಂಥವರ ಮೇಲೆ ಕ್ರಮ ಕೈಗೊಳ್ಳಬೇಕು. ತಾಂತ್ರಿಕ ಕಾರಣಗಳಿಂದ ಯಾವುದೇ ಯೋಜನೆ ಕುಂಠಿತಗೊಳ್ಳದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು’ ಎಂದರು.

‘ರೈತರ ಪಾಲುದಾರಿಕೆಯೊಂದಿಗೆ ನೀರು ಸದ್ಬಳಕೆಗೆ ‘ವಾಲ್ಮಿ’ ಸಂಸ್ಥೆಯಿಂದ ವಿವಿಧ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇದಕ್ಕೆ ನೆರವು ನೀಡಲಾಗುವುದು. ರಾಜಸ್ಥಾನ ಮತ್ತು ಮಹಾರಾಷ್ಟ್ರದ ಮಾದರಿಯಲ್ಲಿ ರೈತರ ಸಹಭಾಗಿತ್ವದಲ್ಲಿ ನೀರಾವರಿ ವ್ಯವಸ್ಥೆ ಅನುಷ್ಠಾನದ ಬಗ್ಗೆ ಅಧ್ಯಯನ ಕೈಗೊಳ್ಳಬೇಕು’ ಎಂದು ಹೇಳಿದರು.

ಏತ ನೀರಾವರಿ ಪೂರ್ಣಗೊಳಿಸಿ:ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ‘ಏತ ನೀರಾವರಿ ಯೋಜನಾ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಬೇಕು’ ಎಂದರು.

ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದಿರುವ ಏತ ನೀರಾವರಿ ಯೋಜನೆ ಮತ್ತು ಕೆರೆ ತುಂಬುವ ಯೋಜನೆಗಳ ಪ್ರಸ್ತಾಪಿಸಿದ ಶಾಸಕ ಮಹಾಂತೇಶ ಕೌಜಲಗಿ, ಮಹಾಂತೇಶ ದೊಡ್ಡಗೌಡರ ಮತ್ತು ಮಹಾದೇವಪ್ಪ ಯಾದವಾಡ ಅವರು ಅನೇಕ ವರ್ಷಗಳಿಂದ ಬಾಕಿ ಉಳಿದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಬೇಕು ಎಂದು ಕೋರಿದರು.

ಧಾರವಾಡದ ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮನವಿಗೆ ಸ್ಪಂದಿಸಿದ ಸಚಿವರು ಬೆಣ್ಣೆ ಹಳ್ಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದರು.

‘ಬೆಣ್ಣಿಹಳ್ಳ ಮತ್ತು ತುಪ್ಪರಿ ಹಳ್ಳದಿಂದ 14 ಟಿಎಂಸಿ ನೀರು ಲಭಿಸಲಿದೆ. ಸೂಕ್ತ ಯೋಜನೆ ರೂಪಿಸಿ ಜನರಿಗೆ ಅನುಕೂಲ ಆಗುವಂತೆ ಮಾಡಬೇಕು’ ಮುನೇನಕೊಪ್ಪ ಕೋರಿದರು.

ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ‘ಮಲಪ್ರಭಾ ಯೋಜನೆ ಅನುಷ್ಠಾನಕ್ಕೆ ₹ 3500 ಕೋಟಿ ಅನುದಾನದ ಅಗತ್ಯವಿದೆ. ಅದನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು. ವಿವಿಧ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಉಳಿದಿರುವ ಕೆಲಸಗಳನ್ನು ಲಭ್ಯ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

ಮಲಪ್ರಭಾ ಯೋಜನೆ ಮುಖ್ಯ ಎಂಜಿನಿಯರ್ ವಿ.ಕೆ. ಪೊದ್ದಾರ, ‘ಮಲಪ್ರಭಾ ಜಲಾಶಯದಿಂದ 1.96 ಲಕ್ಷ ಹೆಕ್ಟೇರ್ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಜಲಾಶಯದ ಉಪಯೋಗಿಸಬಹುದಾದ ನೀರಿನ ಸಂಗ್ರಹಣಾ ಸಾಮರ್ಥ್ಯ 33.34 ಟಿಎಂಸಿ ಆಗಿದೆ. ನಿರ್ಮಾಣವಾದ 1972–73ರಿಂದ ಇಲ್ಲಿವರೆಗೆ ಐದು‌ ಬಾರಿ ಮಾತ್ರ ಭರ್ತಿಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.