ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಶುಕ್ರವಾರ ಖಾನಾಪುರದಲ್ಲಿ ಮಲಪ್ರಭಾ ನದಿಯ ಹರಿವು ವೀಕ್ಷಿಸಿದರು. ಶಾಸಕ ವಿಠ್ಠಲ ಹಲಗೇಕರ ಪರಿಸ್ಥಿತಿ ವಿವರಿಸಿದರು
– ಪ್ರಜಾವಾಣಿ ಚಿತ್ರ
ಖಾನಾಪುರ: ‘ತಾಲ್ಲೂಕಿನಲ್ಲಿ 15 ಗ್ರಾಮಗಳು ದುರ್ಗಮ ಕಾಡಿನಲ್ಲಿವೆ. ಮೂಲಸೌಕರ್ಯಕ್ಕೆ ಪರದಾಡುವ ಸ್ಥಿತಿ ಇದೆ. ಈ ಗ್ರಾಮಗಳನ್ನು ಸ್ಥಳಾಂತರಿಸಬೇಕೆ ಅಥವಾ ಅಲ್ಲೇ ಸೌಕರ್ಯ ಕಲ್ಪಿಸಬೇಕು ಎಂಬ ಕುರಿತು ಚರ್ಚಿಸಬೇಕಿದೆ. ಶೀಘ್ರದಲ್ಲಿ ಅರಣ್ಯ ಸಚಿವರನ್ನು ಕರೆಯಿಸಿ ಪರಿಶೀಲಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ತಾಲ್ಲೂಕಿನಲ್ಲಿ ಮಳೆಯಿಂದ ಸಂಕಷ್ಟ ಎದುರಿಸಿದ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ‘ಕಾಡಿನಲ್ಲಿ ಸೌಕರ್ಯ ಕಲ್ಪಿಸಲು ಅರಣ್ಯ ಇಲಾಖೆಯ ಕಾನೂನು ತೊಡಕುಗಳಿವೆ. ರಸ್ತೆ ನಿರ್ಮಿಸಲು ಅವಕಾಶವಿಲ್ಲ. ನೂರಾರು ವರ್ಷಗಳಿಂದ ಅಲ್ಲಿ ಜನರು ವಾಸವಿದ್ದಾರೆ. ಈ ಸಮಸ್ಯೆ ಕುರಿತು ಬೆಂಗಳೂರಿನಲ್ಲಿ ಒಂದು ಸಭೆ ಮಾಡಿದ್ದೇವೆ. ಸಚಿವರನ್ನೇ ಸ್ಥಳಕ್ಕೆ ಕರೆಯಿಸಿ ವಾಸ್ತವ ಸ್ಥಿತಿ ಮನವರಿಕೆ ಮಾಡಲಾಗುವುದು’ ಎಂದರು.
‘ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗದ ಕಾರಣ ಕಾಡಂಚಿನ ಅಮಗಾಂವ ಗ್ರಾಮದ ಮಹಿಳೆ ಸಾವನ್ನಪ್ಪಿದ್ದು ಗಮನಕ್ಕೆ ಬಂದಿದೆ. ಅವರಿಗೆ ಬ್ರೇನ್ ಸ್ಟ್ರೋಕ್ ಆಗಿತ್ತು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಒಂದು ವಾರ ಚಿಕಿತ್ಸೆ ನೀಡಿದರೂ ಬದುಕಲಿಲ್ಲ. ಆ ಗ್ರಾಮಕ್ಕೆ ಆಂಬುಲೆನ್ಸ್ ತೆರಳಲು ದಾರಿ ಇಲ್ಲ. ಜನರೇ ಹೊತ್ತುಕೊಂಡು ಬಂದು ಆಸ್ಪತ್ರೆಗೆ ಸೇರಿಸಿದ್ದರು. ಆರೋಗ್ಯ ಸಮಸ್ಯೆ ಮಾತ್ರವಲ್ಲ; ಮೊಬೈಲ್ ನೆಟ್‌ವರ್ಕ್, ಪಡಿತರ ಸೇರಿದಂತೆ ಎಲ್ಲವೂ ಅಲ್ಲಿ ದುಸ್ತರವಾಗಿದೆ. ಕಾಡಿನ ಜನರ ಸಮಸ್ಯೆ ಒಂದೇ ಇಲಾಖೆಗೆ ಸಂಬಂಧಿಸಿದ್ದಲ್ಲ. ನಾಲ್ಕು ಇಲಾಖೆಗಳು ಸೇರಿಕೊಂಡು ಪರಿಹಾರ ಹುಡುಕಬೇಕಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಯಾವುದೇ ಕಾಡಿನಲ್ಲಿ ಶೇ 80ರಷ್ಟು ಜನ ಒಪ್ಪಿಗೆ ಸೂಚಿಸಿದರೆ ಮಾತ್ರ ಅವರನ್ನು ಸ್ಥಳಾಂತರ ಮಾಡಲು ಸಾಧ್ಯ. ಇಲ್ಲದಿದ್ದರೆ ಬೇರೆ ದಾರಿ ಏನೂ ಇಲ್ಲ’ ಎಂದೂ ಹೇಳಿದರು.
‘ಖಾನಾಪುರದ ಹಲವು ಹಳೆಯ ಸೇತುವೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಗೋವಾ ರಾಜ್ಯದ ಗಡಿಯವರೆಗೂ ರಾಷ್ಟ್ರೀಯ ಹೆದ್ದಾರಿ ರಸ್ತೆ ದುರಸ್ತಿ ಮತ್ತು ಸೇತುವೆಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಮಳೆಗಾಲ ಮುಗಿದ ಬಳಿಕ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ’ ಎಂದರು.
‘ಜಿಲ್ಲೆಯಲ್ಲಿ ಪ್ರವಾಹ ಅಪಾಯದ ಮಟ್ಟ ತಲುಪಿಲ್ಲ. ಕೊಯ್ನಾ ಜಲಾಶಯದಿಂದ ನೀರು ಬಿಡುವ ಪ್ರಮಾಣ ನೋಡುತ್ತೇವೆ. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ’ ಎಂದರು.
ಶಾಸಕ ವಿಠ್ಠಲ ಹಲಗೇಕರ, ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳಕರ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಸೇರಿದಂತೆ ತಾಲ್ಲೂಕಿನ ಎಲ್ಲ ಅಧಿಕಾರಿಗಳೂ ಇದ್ದರು.
ಸದನದಲ್ಲಿ ಬಿಜೆಪಿ ನಾಯಕರ ಅಹೋರಾತ್ರಿ ಧರಣಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ, ‘ಧರಣಿ, ಪ್ರತಿಭಟನೆ ಮಾಡುವುದು ವಿರೋಧ ಪಕ್ಷಗಳ ಕೆಲಸ. ಅವರ ಪಾತ್ರವನ್ನು ಅವರು ಮಾಡುತ್ತಿದ್ದಾರೆ, ನಮ್ಮ ಪಾತ್ರ ನಾವು ಮುಂದುವರಿಸಿದ್ದೇವೆ. ಅವರ ಚೀರಾಟದ ಮಧ್ಯೆಯೂ ಎಲ್ಲ ಬಿಲ್‌ಗಳು ಪಾಸ್ ಆಗಿವೆ’ ಎಂದು ಹೇಳಿದರು.
‘ಮೈಸೂರಿನಲ್ಲಿ ನಡೆದ ‘ಮುಡಾ’ ಪ್ರಕರಣ ವಿಚಾರವಾಗಿ ಬೆಂಗಳೂರಿನಿಂದ ಮೈಸೂರವರೆಗೆ ಪಾದಯಾತ್ರೆ ಮಾಡಲು ಬಿಜೆಪಿ ಮುಂದಾಗಿದೆ. ಹೋರಾಟ ಮಾಡಲು ಎಲ್ಲರೂ ಸ್ವತಂತ್ರ ಇದ್ದಾರೆ. ಅಂತಿಮವಾಗಿ ಸರಿ– ತಪ್ಪನ್ನು ನಿರ್ಧಾರ ಮಾಡಲು ಕಾನೂನು ಇದೆ’ ಎಂದೂ ಹೇಳಿದರು.
‘ಲೋಕೋಪಯೋಗಿ ಇಲಾಖೆಯಿಂದ ಅನುದಾನ ಹಂಚಿಕೆ ಮಾಡುವಲ್ಲಿ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ತಾರತಮ್ಯ ಮಾಡಲಾಗಿದೆ ಎಂದು ಯಾರೂ ಅಂದುಕೊಳ್ಳಬೇಕಿಲ್ಲ. ಅದು ಆರೋಪ ಮಾತ್ರ. ನಾವು ಯಾವುದೇ ತಾರತಮ್ಯ ಮಾಡಿಲ್ಲ. ಯಾರು ಅನುದಾನ ಕೇಳಿದ್ದಾರೋ ಅವರಿಗೆ ಕೊಟ್ಟಿದ್ದೇವೆ’ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.