ADVERTISEMENT

ಸರ್ಕಾರಿ ಶಾಲೆ ಉಳಿಸಲು ಬದ್ಧ: ಸಚಿವ ಸತೀಶ ಜಾರಕಿಹೊಳಿ ಭರವಸೆ

ಕಲಭಾವಿ ಶತಮಾನೋತ್ಸವ ಶಾಲೆ: ಸಚಿವ ಸತೀಶ ಜಾರಕಿಹೊಳಿ ಭರವಸೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 6:48 IST
Last Updated 28 ಡಿಸೆಂಬರ್ 2025, 6:48 IST
ಚನ್ನಮ್ಮನ ಕಿತ್ತೂರು ಸಮೀಪದ ಕಲಭಾವಿ ಸರ್ಕಾರಿ ಶಾಲೆ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು
ಚನ್ನಮ್ಮನ ಕಿತ್ತೂರು ಸಮೀಪದ ಕಲಭಾವಿ ಸರ್ಕಾರಿ ಶಾಲೆ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು   

ಚನ್ನಮ್ಮನ ಕಿತ್ತೂರು: ‘ಕಿತ್ತೂರು ಕ್ಷೇತ್ರದಲ್ಲಿ ಪ್ರತಿವರ್ಷ ಲೋಕೋಪಯೋಗಿ ಇಲಾಖೆಯಿಂದ ಸರ್ಕಾರಿ ಶಾಲೆಗಳಿಗೆ ಐದು ಕೊಠಡಿಗಳನ್ನು ನೀಡಲಾಗುತ್ತಿದೆ. ಶತಮಾನೋತ್ಸವ ಸಂಭ್ರಮದಲ್ಲಿರುವ ತಾಲ್ಲೂಕಿನ ಕಲಭಾವಿ ಸರ್ಕಾರಿ ಶಾಲೆಗೆ ವಿಶೇಷವಾಗಿ ಎರಡು ಕೊಠಡಿಗಳನ್ನು ಮಂಜೂರು ಮಾಡಲಾಗುವುದು’ ಎಂದು ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.

ಕಲಭಾವಿ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತಾಡಿದರು.

‘ಹಳ್ಳಿಗಳಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಸರ್ಕಾರ ಪ್ರಯತ್ನ ಮಾಡುತ್ತಿದೆ. ಇವು ಸ್ಥಗಿತಗೊಂಡರೆ ನಗರ ಪ್ರದೇಶಗಳಿಗೆ ಮಕ್ಕಳು ಹೋಗಿ ಶಿಕ್ಷಣ ಪಡೆಯುವುದು ದುಬಾರಿ ಮತ್ತು ಕಷ್ಟವಾಗಲಿದೆ. ಹಾಗಾಗಿ ಹಳ್ಳಿ ಶಾಲೆಗಳಿಗೆ ಶಿಕ್ಷಕರು ಮತ್ತು ಮೂಲ ಸೌಲಭ್ಯ ನೀಡುವ ಕಡೆಗೆ ಸರ್ಕಾರ ಗಮನ ಹರಿಸಿದೆ ಎಂದರು.

ADVERTISEMENT

‘ಶಿಕ್ಷಣ ಪಡೆದರೆ ಹಿಂದೆ ಸರ್ಕಾರಿ ಕೆಲಸಗಳು ಸುಲಭವಾಗಿ ಸಿಗುತ್ತಿದ್ದವು. ಈಗ ಆ ಪರಿಸ್ಥಿತಿ ಇಲ್ಲ. ಸರ್ಕಾರಿ ಅಥವಾ ಖಾಸಗಿ ಉದ್ಯೋಗ ಗಿಟ್ಟಿಸುವುದು ಬಹಳ ಕಷ್ಟವಾಗಿದೆ. ಕೃಷಿಯಲ್ಲಿ ಬಹಳ ಅವಕಾಶಗಳಿವೆ. ಇದ್ದ ಭೂಮಿಯಲ್ಲಿಯೇ ಹೆಚ್ಚು ಆದಾಯ ಪಡೆಯಲು ಯೋಚಿಸಬೇಕು. ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ಈ ಬಗ್ಗೆ ಪಾಠ ಅಳವಡಿಸಬೇಕು’ ಎಂದು ಆಶಿಸಿದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ‘ಸ್ವಾತಂತ್ರ್ಯ ಪೂರ್ವದಲ್ಲಿಯೇ ಊರಿನ ಹಿರಿಯರು ಮಕ್ಕಳ ಶಿಕ್ಷಣದ ಬಗ್ಗೆ ದೂರದೃಷ್ಟಿ ಹೊಂದಿದ್ದರು ಎಂಬುದು ಇಲ್ಲಿ ಗೊತ್ತಾಗುತ್ತದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಮತ್ತು ಸಂಸ್ಕಾರ ಕೊಟ್ಟರೆ ಅವರು ದೇಶದ ಆಸ್ತಿಯಾಗುತ್ತಾರೆ. ರಾಷ್ಟ್ರೀಯ ಶಿಕ್ಷಣ ನೀತಿಯಿಂದ ವಿಶ್ವಕ್ಕೆ ಗುರುವಾಗಲು ಸಾಧ್ಯವಿದೆ’ ಎಂದರು.

ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ‘ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತದೆ. ಕಾಲಕ್ಕೆ ತಕ್ಕಂತೆ ಶಿಕ್ಷಣದ ವ್ಯವಸ್ಥೆಯೂ ಬದಲಾಗುತ್ತ ಹೊರಟಿದೆ. ಲಾಭದಾಯಕ ಒಕ್ಕಲುತನ ಕೈಗೊಳ್ಳಲೂ ಶಿಕ್ಷಣದ ಅಗತ್ಯತೆ ಹಿಂದಿಗಿಂತಲೂ ಇಂದು ಹೆಚ್ಚಾಗಿದೆ’ ಎಂದು ತಿಳಿಸಿದರು.

ನಯಾನಗರದ ಸುಖದೇವಾನಂದ ಪುಣ್ಯಾಶ್ರಮದ ಸಿದ್ದಲಿಂಗ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಹೈಕೋರ್ಟ್ ನ್ಯಾಯವಾದಿ ಅನೂಪ ದೇಶಪಾಂಡೆ, ಶಾಲೆಗೆ ನಿವೇಶನ ನೀಡಿರುವ ಶಿವಪ್ಪ ನಂದೆಣ್ಣವರ ಮಾತನಾಡಿದರು.

ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಸೋಮೇಶ್ವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬಸವರಾಜ ಬಾಳೇಕುಂದರಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಚನಬಸಪ್ಪ ತುಬಾಕದ, ಸಮನ್ವಯ ಅಧಿಕಾರಿ ಗಾಯತ್ರಿ ಅಜ್ಜನ್ನವರ, ಪಂಚಾಯಿತಿ ಅಧ್ಯಕ್ಷೆ ಶಿವನವ್ವ ಕರಡಿ, ಎಸ್‌ಡಿಎಂಸಿ ಅಧ್ಯಕ್ಷ ಶಂಕರ ಪೂಜೇರ, ರಾಜೇಂದ್ರ ಇನಾಮದಾರ, ಚನಬಸಪ್ಪ ಮೊಕಾಶಿ, ಹಬೀಬ ಶಿಲೇದಾರ, ಬಸಪ್ಪ ಹುಣಶ್ಯಾಳ, ಈರಣ್ಣ ಕರಡಿ, ಬಾಬಾಜಾನ ಬೆಳವಡಿ ಇದ್ದರು. ಎಂ.ಪಿ. ಕದಂ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.