ಬೆಳಗಾವಿ: ಹುಕ್ಕೇರಿ ತಾಲ್ಲೂಕಿನ ಮಣಗುತ್ತಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ತೆರವು ವಿಷಯದಲ್ಲಿ ರಾಜ್ಯ ಸರ್ಕಾರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಟ್ವೀಟ್ ಮಾಡಿರುವ ಖಾನಾಪುರದ ಕಾಂಗ್ರೆಸ್ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿರುಗೇಟು ನೀಡಿದ್ದಾರೆ.
‘ಪ್ರತಿಮೆ ತೆರವುಗೊಳಿಸಿದ್ದು ರಾಷ್ಟ್ರ ನಾಯಕನಿಗೆ ಮಾಡಿದ ಅವಮಾನವಾಗಿದೆ. ಸರ್ಕಾರ ಕ್ಷಮೆ ಯಾಚಿಸುವುದರೊಂದಿಗೆ ಗೌರವಪೂರ್ವಕವಾಗಿ ಪ್ರತಿಮೆಯನ್ನು ಮರು ಪ್ರತಿಷ್ಠಾಪಿಸಬೇಕು. ತೆರವುಗೊಳಿಸಲು ಕಾರಣವಾದ ಅಧಿಕಾರಿಗಳು ಹಾಗೂ ಜನರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಅಂಜಲಿ ಟ್ವೀಟ್ ಮಾಡಿದ್ದರು.
ಈ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿದ ಜೊಲ್ಲೆ, ‘ರಾಜ್ಯ ಸರ್ಕಾರವು ಎಲ್ಲ ಜಾತಿ, ಭಾಷಿಕರನ್ನು ಒಟ್ಟಾಗಿ ಕರೆದುಕೊಂಡು ಹೋಗುತ್ತಿದೆ. ವಿನಾಕಾರಣ ಗೂಬೆ ಕೂರಿಸುವುದು ಸರಿಯಲ್ಲ. ಆ ಗ್ರಾಮದಲ್ಲಿ ಕೆಲವರು ಪ್ರತಿಮೆ ಪ್ರತಿಷ್ಠಾಪಿಸಿದ್ದರು. ಅವರೇ ತೆರವುಗೊಳಿಸಿದ್ದಾರೆ. ಸ್ಥಳೀಯವಾಗಿ ಸಮಸ್ಯೆ ಪರಿಹರಿಸಿಕೊಳ್ಳುವುದಾಗಿ ಅಲ್ಲಿನ ಮುಖಂಡರೇ ಹೇಳಿದ್ದಾರೆ. ಹೀಗಿರುವಾಗ, ಸರ್ಕಾರ ಕ್ಷಮೆ ಯಾಚಿಸಬೇಕು ಎನ್ನುವುದು ಸರಿಯಲ್ಲ’ ಎಂದರು.
ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ‘ಮಣಗುತ್ತಿಯಲ್ಲಿ ವಿವಿಧ ಸಮುದಾಯದವರು ಪ್ರತಿಮೆಗಳ ಪ್ರತಿಷ್ಠಾಪನೆಗೆ ಯೋಜಿಸಿದ್ದರು. ಆದರೆ, ಕೆಲವರು ಅನುಮತಿ ಇಲ್ಲದೇ ಶಿವಾಜಿ ಪ್ರತಿಮೆ ಪ್ರತಿಷ್ಠಾಪಿಸಿದ್ದರು. ಏನೇ ಗೊಂದಲವಿದ್ದರೂ ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಆದಾಗ್ಯೂ ಮಹಾರಾಷ್ಟ್ರದ ಕೆಲವು ನಾಯಕರು ಅನಗತ್ಯ ವಿವಾದ ಮಾಡಿದ್ದಾರೆ. ಪ್ರತಿಮೆ ತೆರವಿಗೂ ರಾಜ್ಯ ಸರ್ಕಾರಕ್ಕೂ ಸಂಬಂಧವಿಲ್ಲ. ಸ್ಥಳಕ್ಕೆ ಹೋಗಿ ನೋಡಿ ಮಾತನಾಡಬೇಕು’ ಎಂದು ತಿರುಗೇಟು ನೀಡಿದರು.
‘ಶಾಸಕಿ ನಿಂಬಾಳ್ಕರ್ ಒಂದು ಹೆಜ್ಜೆ ಮಹಾರಾಷ್ಟ್ರದಲ್ಲಿಯೇ ಇರಿಸಿ ಪ್ರತಿಕ್ರಿಯೆ ನೀಡಿರುವುದು ಸರಿಯಲ್ಲ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದ್ದಾರೆ.
‘ಗಡಿ ಭಾಗದ ಹಲವು ಗ್ರಾಮಗಳಲ್ಲಿ ಶಿವಾಜಿ ಮತ್ತು ಚನ್ನಮ್ಮ ಪ್ರತಿಮೆಗಳನ್ನು ಎಲ್ಲರೂ ಸೇರಿಯೇ ಪ್ರತಿಷ್ಠಾಪಿಸಿದ್ದಾರೆ. ಶಿವ ಮತ್ತು ಬಸವ ಜಯಂತಿಯನ್ನು ಎಲ್ಲರೂ ಸೇರಿಯೇ ಆಚರಿಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಮಹಾರಾಷ್ಟ್ರ ಬೆಂಬಲಿತ ಕೆಲವು ಸಂಘಟನೆಗಳಿಗೆ ಗಡಿ ಭಾಗ ಶಾಂತವಾಗಿರುವುದು ಬೇಡವಾದಂತೆ ಕಾಣುತ್ತಿದೆ. ಅಲ್ಪಸ್ವಲ್ಪ ಭಿನ್ನಾಭಿಪ್ರಾಯಗಳನ್ನೇ ದೊಡ್ಡದು ಮಾಡಿ ಬೇಳೆ ಬೇಯಿಸಿಕೊಳ್ಳುವ ಈ ಸಂಘಟನೆಗಳಿಗೆ ಮಹಾರಾಷ್ಟ್ರದ ನಾಯಕರು ಬುದ್ಧಿ ಹೇಳಬೇಕು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.