ADVERTISEMENT

ನೆರೆ ಪರಿಹಾರದಲ್ಲಿ ಗೊಂದಲ; ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ

ಕೆಡಿಪಿ 3ನೇ ತ್ರೈಮಾಸಿಕ ಸಭೆಯ‌ಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಹೇಳಿಕೆ;

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 10:05 IST
Last Updated 28 ಡಿಸೆಂಬರ್ 2019, 10:05 IST
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಅಧ್ಯಕ್ಷತೆಯಲ್ಲಿ ಶುಕ್ರವಾರ ಕೆಡಿಪಿ 3ನೇ ತ್ರೈಮಾಸಿಕ ಸಭೆ ನಡೆಯಿತು
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಅಧ್ಯಕ್ಷತೆಯಲ್ಲಿ ಶುಕ್ರವಾರ ಕೆಡಿಪಿ 3ನೇ ತ್ರೈಮಾಸಿಕ ಸಭೆ ನಡೆಯಿತು   

ಬೆಳಗಾವಿ: ನೆರೆ ಪರಿಹಾರದಲ್ಲಿ ಉಂಟಾಗಿರುವ ಗೊಂದಲಗಳ ಬಗ್ಗೆ ಇದೇ 30ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ 2019–20ನೇ ಸಾಲಿನ ಮೂರನೇ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ ತಿಂಗಳ ನೆರೆ ಪೀಡಿತ ಪಟ್ಟಿಯಿಂದ ಹೊರಗುಳಿದ ಪ್ರದೇಶಗಳನ್ನು ಸೇರ್ಪಡೆ ಮಾಡುವುದು, ಸಮೀಕ್ಷೆಯಲ್ಲಿ ಬಿಟ್ಟುಹೋಗಿರುವ 10 ಸಾವಿರ ಮನೆಗಳ ಪಟ್ಟಿ ಅಂಗೀಕರಿಸುವ ಬಗ್ಗೆ ಹಾಗೂ ಬೆಳೆ ನಷ್ಟ ಕುರಿತು ‘ಪರಿಹಾರ’ ಸಾಫ್ಟ್‌ವೇರ್‌ನಲ್ಲಿ ತಿದ್ದುಪಡಿ ಮಾಡುವ ಕುರಿತು ಹಾಗೂಮನೆಹಾನಿಯಾದ ಸ್ಥಳವನ್ನು ಹೊರತುಪಡಿಸಿ ಬೇರೆ ಕಡೆ ಮನೆ ನಿರ್ಮಿಸಿಕೊಳ್ಳಲು ಸಂತ್ರಸ್ತರಿಗೆ ಅನುವು ಮಾಡಿಕೊಡುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಆಗಸ್ಟ್‌ ತಿಂಗಳ ಪಟ್ಟಿಯಲ್ಲಿ ಸಂಪೂರ್ಣವಾಗಿ ಜಿಲ್ಲೆಯನ್ನು ಪ್ರವಾಹ ಪೀಡಿತ ಪ್ರದೇಶವೆಂದು ಘೋಷಿಸಲಾಗಿತ್ತು. ನಂತರದ ಎರಡು ತಿಂಗಳಿನಲ್ಲಿಯೂ ಕೆಲವು ಪ್ರದೇಶಗಳಲ್ಲಿ ವಿಪರೀತ ಮಳೆ ಸುರಿಯಿತು. ನದಿಗಳೂ ಉಕ್ಕಿ ಹರಿದವು. ಇವುಗಳ ಪ್ರಭಾವ ಅಕ್ಕಪಕ್ಕದ ಪ್ರದೇಶಗಳ ಮೇಲೂ ಉಂಟಾಗಿದೆ. ಈ ಪ್ರದೇಶಗಳಲ್ಲಿ ಸಂತ್ರಸ್ತರ ಜನರಿಗೆ ಪರಿಹಾರ ವಿತರಿಸಲು ಇದು ಅಡ್ಡಿಯಾಗುತ್ತಿದೆ. ಅದಕ್ಕಾಗಿ ಆದ್ಯತೆ ಮೇರೆಗೆ ಇದನ್ನು ಸರ್ಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಸೆಪ್ಟೆಂಬರ್‌ ತಿಂಗಳಿನಲ್ಲಿ ಬೆಳಗಾವಿ ಹಾಗೂ ಖಾನಾಪುರ, ಅಕ್ಟೋಬರ್‌ ತಿಂಗಳಿನಲ್ಲಿ ಖಾನಾಪುರ, ಗೋಕಾಕ ಹಾಗೂ ಬೈಲಹೊಂಗಲ ಮಾತ್ರ ಘೋಷಣೆಯಾಗಿದೆ. ಇನ್ನುಳಿದ ರಾಮದುರ್ಗ, ರಾಯಬಾಗ ಹಾಗೂ ಸವದತ್ತಿ ಪ್ರದೇಶವನ್ನೂ ಸೇರ್ಪಡೆಗೊಳಿಸುವ ಬಗ್ಗೆ ಚರ್ಚಿಸಲಾಗುವುದು’ ಎಂದು ಭರವಸೆ ನೀಡಿದರು.

10,000 ಮನೆ:

‘ಇದುವರೆಗೆ ನಡೆದ ಸಮೀಕ್ಷೆಯಲ್ಲಿ ಬಿಟ್ಟು ಹೋಗಿದ್ದ 10,000 ಮನೆಗಳ ಪರಿಷ್ಕೃತ ಪಟ್ಟಿಯನ್ನು ಅಧಿಕಾರಿಗಳು ತಯಾರಿಸಿದ್ದಾರೆ. ಇದನ್ನು ಅಂಗೀಕರಿಸುವ ಬಗ್ಗೆಯೂ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.‌

ಬೆಳೆ ನಷ್ಟ– ತಪ್ಪು ನಮೂದು:

‘ಅತಿವೃಷ್ಟಿ ಹಾಗೂ ಪ್ರವಾಹದಿಂದ ಉಂಟಾದ ಬೆಳೆ ನಷ್ಟದ ವಿವರಣೆಯನ್ನು ಅಧಿಕಾರಿಗಳು ಸಾಫ್ಟ್‌ವೇರ್‌ನಲ್ಲಿ ತಪ್ಪಾಗಿ ನಮೂದಿಸಿದ್ದಾರೆ. 2 ಹೆಕ್ಟೇರ್‌ ಪ್ರದೇಶಗಳವರೆಗೆ ಪರಿಹಾರ ಸರ್ಕಾರ ಒಪ್ಪಿಕೊಂಡಿದೆ. ಆದರೆ, ಅಧಿಕಾರಿಗಳು ಮಾತ್ರ 1.2 ಹೆಕ್ಟೇರ್‌, 1.5 ಹೆಕ್ಟೇರ್‌ ಪ್ರದೇಶ ನಷ್ಟವಾಗಿದೆ ಎಂದು ತಪ್ಪಾಗಿ ನಮೂದಿಸಿದ್ದಾರೆ. ಇದನ್ನು ಪ್ರಶ್ನಿಸಿದರೆ, ಬೇಜವಾಬ್ದಾರಿಯಿಂದ ಉತ್ತರಿಸುತ್ತಿದ್ದಾರೆ’ ಎಂದು ಸವದತ್ತಿ ಶಾಸಕ ಆನಂದ ಮಾಮನಿ ಆಕ್ರೋಶ ವ್ಯಕ್ತಪಡಿಸಿದರು.

‘ಮಲಪ್ರಭಾ ಉಕ್ಕಿ ಹರಿದ ಪರಿಣಾಮ ಮುನವಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಷ್ಟು ನಷ್ಟ ಉಂಟಾಗಿತ್ತು. ಆದರೆ, ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ ತಿಂಗಳ ಪ್ರವಾಹ ಪೀಡಿತ ಪಟ್ಟಿಯಲ್ಲಿ ಸವದತ್ತಿ ತಾಲ್ಲೂಕನ್ನು ಸೇರಿಸದೇ ಇರುವುದರಿಂದ ಪರಿಹಾರ ವಿತರಣೆಯಲ್ಲಿ ತೊಂದರೆಯಾಗುತ್ತಿದೆ. ತಕ್ಷಣ ಇದನ್ನು ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

‘ಮುಖ್ಯಮಂತ್ರಿ, ಜಿಲ್ಲಾ ಹಾಗೂ ರಾಜ್ಯಮಟ್ಟದ ಅಧಿಕಾರಿಗಳು ಬಂದು ಭೇಟಿ ನೀಡಿ, ಸ್ಥಳ ಪರಿಶೀಲಿಸಿ ಹೋಗಿದ್ದಾರೆ. ಆದರೂ, ಸಮರ್ಪಕವಾಗಿ ಪರಿಹಾರ ನೀಡುತ್ತಿಲ್ಲವೇಕೆ? ಇದಕ್ಕೆ ಯಾರು ಜವಾಬ್ದಾರಿ? ರೈತರ ಗತಿ ಏನು?’ ಎಂದು ಪ್ರಶ್ನಿಸಿದರು.

‘ಜಿಲ್ಲೆಯಲ್ಲಿ ಹಾನಿಗೊಳಗಾದ ಎ,ಬಿ ಹಾಗೂ ಸಿ ಕೆಟಗರಿಯಲ್ಲಿ ಒಟ್ಟು 44,166 ಮನೆಗಳ ವಿವರವನ್ನು ತಂತ್ರಾಂಶದಲ್ಲಿ ದಾಖಲಿಸಿ ಅನುಮೋದನೆಗೊಂಡಿದ್ದು, ಇದರಲ್ಲಿ ಇದುವರೆಗೆ 43,174 ಫಲಾನಯಭವಿಗಳಿಗೆ ₹ 301.49 ಕೋಟಿ ಪರಿಹಾರವನ್ನು ಅವರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ವಿತರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಹೇಳಿದರು.

‘ಪ್ರವಾಹ ಸಂದರ್ಭದಲ್ಲಿ ಒಟ್ಟು 38 ಜನರು ಮೃತರಾಗಿದ್ದು, ಅದರಲ್ಲಿ 33 ಜನರ ಕುಟುಂಬಗಳಿಗೆ ತಲಾ ₹ 5 ಲಕ್ಷರಂತೆ ಒಟ್ಟು ₹ 1.80 ಕೋಟಿ ಪರಿಹಾರ ನೀಡಲಾಗಿದೆ. ತೀವ್ರ ಹಾನಿಗೊಳಗಾದ ವಿದ್ಯುತ್ ಮಗ್ಗಗಳ ನೇಕಾರರ ಪ್ರತಿ ಕುಟುಂಬಕ್ಕೆ ತಲಾ ₹ 25,000 ಗಳಂತೆ 435 ಕುಟುಂಬಗಳಿಗೆ ₹ 108.75 ಲಕ್ಷ ಪರಿಹಾರ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಪರಿಹಾರ ಕಾರ್ಯ ಕೈಗೊಳ್ಳಲು ಜಿಲ್ಲೆಗೆ ಒಟ್ಟಾರೆ ₹ 867 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ ₹ 327 ಕೋಟಿ ಉಳಿದಿದೆ. ಸರ್ಕಾರದಿಂದ ಅನುಮೋದನೆಗೊಂಡ ಬಳಿಕ ಉಳಿದ ಹಣವನ್ನು ವೆಚ್ವ ಮಾಡಲಾಗುವುದು’ ಎಂದು ತಿಳಿಸಿದರು.

ಪರಿಹಾರ ನೀಡಿ:

ಪ್ರವಾಹದಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಲಾಗಿದ್ದು, ನಂತರದ ದಿನಗಳಲ್ಲಿ ಮಳೆಯಿಂದ ಕುಸಿದ ಮನೆಗಳಿಗೆ ಪರಿಹಾರ ನೀಡಿಲ್ಲ. ಮಳೆಯಿಂದ ಹಾನಿಗೊಳಗಾದ ಮನೆಗಳಿಗೂ ಪರಿಹಾರ ಬಿಡುಗಡೆ ಮಾಡಬೇಕು ಎಂದು ಶಾಸಕ ದುರ್ಯೋಧನ ಐಹೊಳೆ ಒತ್ತಾಯಿಸಿದರು.

ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಮಾತನಾಡಿ, ‘ಮನೆಹಾನಿ ಮತ್ತು ಬೆಳೆಪರಿಹಾರ ವಿಮೆ ಅರ್ಹ ಕುಟುಂಬಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದರು.

ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ‘ಬೆಳೆ ಪರಿಹಾರ, ರಸ್ತೆ ಸುಧಾರಣೆ ಹಾಗೂ ಇತರೆ ಮೂಲಸೌಕರ್ಯಗಳನ್ನು ಕಲ್ಪಿಸುವ ಕೆಲಸ ಚುರುಕಿನಿಂದ ಕೈಗೊಳ್ಳಬೇಕು’ ಎಂದರು.

‘ಮನೆಹಾನಿ ಪರಿಹಾರದಿಂದ ವಂಚಿತಗೊಂಡಿರುವ ಅನೇಕ ಕುಟುಂಬಗಳು ಪ್ರತಿದಿನ ಶಾಸಕರ ಮನೆಗೆ ಅಲೆದಾಡುತ್ತಿದ್ದು, ಅಂತಹ ಮನೆಗಳನ್ನು ಮುಂದಿನ ಹಂತದಲ್ಲಿಯಾದರೂ ಗುರುತಿಸಿ ಸೂಕ್ತ ಪರಿಹಾರ ಕಲ್ಪಿಸಬೇಕು’ ಎಂದು ಶಾಸಕರಾದ ಅನಿಲ ಬೆನಕೆ ಮತ್ತು ಮಹಾಂತೇಶ ದೊಡ್ಡಗೌಡರ ಒತ್ತಾಯಿಸಿದರು.

‘ಅಧಿಕಾರಿಗಳು ತೀವ್ರಗತಿಯಲ್ಲಿ ಪರಿಹಾರ ಕಾಮಗಾರಿ ಕೈಗೊಳ್ಳುತ್ತಿಲ್ಲ. ಇದರಿಂದಾಗಿ ನಾವು ಜನರ ವಿರೋಧ ಎದುರಿಸುತ್ತಿದ್ದೇವೆ. ಎಲ್ಲಿಗೆ ಹೋದರೂ ಜನರು ನಮಗೆ ಹಿಡಿಶಾಪ ಹಾಕುತ್ತಿದ್ದಾರೆ’ ಎಂದು ಶಾಸಕ ಮಹೇಶ ಕುಮಠಳ್ಳಿ ನುಡಿದರು.

ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ ಮಾತನಾಡಿ, ‘ಜಿಲ್ಲೆಯಲ್ಲಿ ನಿವೇಶನ ರಹಿತರನ್ನು ಗುರುತಿಸಿ ನಿವೇಶನ ಹಂಚಿಕೆ ಪ್ರಕ್ರಿಯೆ ನಿರೀಕ್ಷೆಯಂತೆ ನಡೆಯುತ್ತಿಲ್ಲ. ನಿವೇಶನ ಹಂಚಲು 2 ಎಕರೆ ಸರ್ಕಾರಿ ಜಮೀನು ನೀಡುವಂತೆ 2017ರಿಂದ ಹೋರಾಟ ನಡೆಸಿಕೊಂಡು ಬಂದಿದ್ದರೂ ಇದುವರೆಗೆ ಸಾಧ್ಯವಾಗಿಲ್ಲ. ವಿನಾಕಾರಣ ಅಧಿಕಾರಿಗಳು ತಡೆಯೊಡ್ಡುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ ಮಾತನಾಡಿ, ಬೆಳಗಾವಿ ಜಿಲ್ಲಾ ಪಂಚಾಯ್ತಿಗೆ ನೀಡುತ್ತಿರುವ ಶಾಸನಬದ್ಧ ಅನುದಾನ ಸಾಕಾಗುತ್ತಿಲ್ಲ. ಜನಸಂಖ್ಯೆ ಹಾಗೂ ಜಿ.ಪಂ. ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಅನುದಾನ ನೀಡಬೇಕು ಎಂದು ಮನವಿ ಮಾಡಿದರು. ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಬೆಂಬಲ ವ್ಯಕ್ತಪಡಿಸಿದರು.

ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ, ಚಿಕ್ಕೋಡಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್, ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.