ADVERTISEMENT

ಎಂ.ಕೆ. ಹುಬ್ಬಳ್ಳಿ: ‘ಆರೋಗ್ಯಕರ ಜೀವನಕ್ಕೆ ಸಾವಯವ ಕೃಷಿಯೇ ಮಾರ್ಗ’

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 1:52 IST
Last Updated 19 ನವೆಂಬರ್ 2025, 1:52 IST
ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ ಆವರಣದ ಬಂಡೆಮ್ಮದೇವಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆದ ಕೃಷಿ ಸಂವಾದ ಕಾರ್ಯಕ್ರಮವನ್ನು ಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ಇತರ ಗಣ್ಯರು ಉದ್ಘಾಟಿಸಿದರು
ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ ಆವರಣದ ಬಂಡೆಮ್ಮದೇವಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆದ ಕೃಷಿ ಸಂವಾದ ಕಾರ್ಯಕ್ರಮವನ್ನು ಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ಇತರ ಗಣ್ಯರು ಉದ್ಘಾಟಿಸಿದರು   

ಎಂ.ಕೆ. ಹುಬ್ಬಳ್ಳಿ: ‘ವಿಷಮಯ ಆಹಾರದಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಲು ಸಾವಯವ ಕೃಷಿಯೇ ಅತ್ಯಂತ ಪರಿಣಾಮಕಾರಿ ಮಾರ್ಗ’ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಸಮೀಪದ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ ಆವರಣದ ಬಂಡೆಮ್ಮ ದೇವಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಈಚೆಗೆ ಗೌರಿ ಗೆಳೆಯರ ಬಳಗ ಹಾಗೂ ಗಂಗೋತ್ರಿ ನರ್ಸರಿ ಸಂಯುಕ್ತಾಶ್ರಯದಲ್ಲಿ ನಡೆದ ‘ಸಾವಯವ ಕೃಷಿಕ ಗೌರಿಶಂಕರ ಕರೋಶಿ ಅವರೊಂದಿಗೆ ರೈತರ ಸಂವಾದ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹತ್ತು ವರ್ಷಗಳ ಅವಧಿಯಲ್ಲಿ ಸಾವಯವ ಕೃಷಿಯ ಕಡೆ ರೈತರ ಮನೋಭಾವ ಪ್ರಶಂಸನೀಯವಾಗಿ ಬದಲಾಗಿದೆ. ಸ್ವತಃ ನಾನು ಕೂಡ ನನ್ನ ಕುಟುಂಬದ ಬಳಕೆಗೆ ರಾಸಾಯನಿಕ ರಹಿತ ಭತ್ತವನ್ನು ಬೆಳೆಸುತ್ತೇನೆ. ಇಂದಿನ ಜಾಗತಿಕ ಆಹಾರ ಸಂಕಷ್ಟ, ಮಣ್ಣಿನ ಹಾನಿ ಮತ್ತು ಜನರಲ್ಲಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳನ್ನು ಗಮನಿಸಿದರೆ ಸಾವಯವ ಕೃಷಿಯ ಅಗತ್ಯತೆ ಇನ್ನಷ್ಟು ಹೆಚ್ಚಿರುವುದು’ ಕಂಡು ಬರುತ್ತದೆ ಎಂದರು.

ADVERTISEMENT

ಸಾವಯವ ಕೃಷಿಕ ಗೌರಿಶಂಕರ ಕರೋಶಿ ಮಾತನಾಡಿ, ಪಾರಂಪರಿಕ ಕೃಷಿ ಪದ್ಧತಿ, ಮಣ್ಣಿನ ಆರೋಗ್ಯ, ಇಳುವರಿ ಮತ್ತು ಮಾರುಕಟ್ಟೆ ನಿರ್ವಹಣೆ, ಜಾನುವಾರು ಬಳಕೆ ಮತ್ತು ಸ್ವಾವಲಂಬನೆಯ ಮಹತ್ವ ಕುರಿತು ರೈತರೊಂದಿಗೆ ಸಂವಾದ ನಡೆಸಿದರು.

‘ಸಾವಯವ ಕೃಷಿ ಎಂದರೆ ಕೇವಲ ರಾಸಾಯನಿಕ ತ್ಯಜಿಸುವುದು ಮಾತ್ರವಲ್ಲ. ಅದು ಜೀವನದ ಶೈಲಿ. ಮಣ್ಣು, ಬೀಜ, ನೀರು, ಜಾನುವಾರು ಇವೆಲ್ಲವೂ ಪರಸ್ಪರ ಸಂಬಂಧ ಹೊಂದಿವೆ. ಈ ಸಮತೋಲನವೇ ಕೃಷಿಯ ಭವಿಷ್ಯವನ್ನು ನಿರ್ಧರಿಸುತ್ತದೆ’ ಎಂದು ರೈತರಿಗೆ ಪ್ರಾಯೋಗಿಕ ಉದಾಹರಣೆಗಳೊಂದಿಗೆ ವಿವರಿಸಿದರು. ಸಾವಯವ ಕೃಷಿ ಕುರಿತು ರೈತರಲ್ಲಿ ಅರಿವು ಮೂಡಿಸಿದರು.

ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶಿವನಗೌಡ ಪಾಟೀಲ, ನಿರ್ದೇಶಕ ಶಂಕರ ಹೊಳಿ, ಪ್ರಕಾಶಗೌಡ ಪಾಟೀಲ, ಶೇಖರ ಯರಗೊಪ್ಪ, ಬಿ.ಎಸ್. ಪಾಟೀಲ, ಶಿವಪುತ್ರಪ್ಪ ಮರಡಿ ಮತ್ತು ಕಾದರವಳ್ಳಿ, ದಾಸ್ತಿಕೊಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.