ADVERTISEMENT

ಪಕ್ಷ ನಿಷ್ಠೆ, ಹಿರಿತನ ಒಮ್ಮೊಮ್ಮೆ ಲೆಕ್ಕಕ್ಕೆ ಬರುವುದಿಲ್ಲ: ಅಭಯ ಪಾಟೀಲ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 15:00 IST
Last Updated 10 ಆಗಸ್ಟ್ 2021, 15:00 IST
ಅಭಯ ಪಾಟೀಲ
ಅಭಯ ಪಾಟೀಲ   

ಬೆಳಗಾವಿ: ‘ಪಕ್ಷ ನಿಷ್ಠೆ, ಹಿಂದುತ್ವ, ಹಿರಿತನ ಮೊದಲಾದವು ಒಮ್ಮೊಮ್ಮೆ ಅನಿವಾರ್ಯ ಕಾರಣದಿಂದ ಲೆಕ್ಕಕ್ಕೆ ಬರುವುದಿಲ್ಲ’ ಎಂದು ದಕ್ಷಿಣ ಮತಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಅಸಮಾಧಾನ ವ್ಯಕ್ತ‍ಪಡಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿದ ಅವರು, ‘ನನ್ನ ಕ್ಷೇತ್ರದಲ್ಲಿರುವಷ್ಟು ಬಿಜೆಪಿ ಕಾರ್ಯಕರ್ತರು ಬೇರಾವ ಕ್ಷೇತ್ರದಲ್ಲೂ ಇಲ್ಲ. ಆದರೆ, ನನಗೆ ಸಚಿವ ಸ್ಥಾನ ಸಿಗಲಿಲ್ಲವೆಂದು ಕಾರ್ಯಕರ್ತರು ರಸ್ತೆಗಿಳಿದು ಪ್ರತಿಭಟಿಸಿಲ್ಲ; ಹೇಳಿಕೆ ಕೊಡಲಿಲ್ಲ. ಶಿಸ್ತು ಪಾಲಿಸಿದ್ದಾರೆ. ಪಕ್ಷ ನಮಗೆ ಬಹಳಷ್ಟು ಕೊಟ್ಟಿದೆ. ಹೀಗಾಗಿ, ಹೈಕಮಾಂಡ್ ತೀರ್ಮಾನದ ಬಗ್ಗೆ ಮಾತನಾಡುವುದಿಲ್ಲ’ ಎಂದರು.

‘ನನಗೂ ಎಲ್ಲ ರೀತಿಯ ದಂಡಯಾತ್ರೆ ಗೊತ್ತಿದೆ. ಆದರೆ, ಇಚ್ಛೆ ಇಲ್ಲ. ಸುಮ್ಮನಿರುವುದು ದೌರ್ಬಲ್ಯವೂ ಅಲ್ಲ. ಸಾಮರ್ಥ್ಯ ಅಥವಾ ಶಕ್ತಿ ಇಲ್ಲವೆಂದೇನಲ್ಲ; ಎಲ್ಲವೂ ಇದೆ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ರಾಜ್ಯದ ಇತರ ಕಡೆಗಳಲ್ಲಿನ ರಾಜಕೀಯವೇ ಬೇರೆ ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕಿನ ರಾಜಕೀಯ ಪರಿಸ್ಥಿತಿಯೇ ಬೇರೆ. ಗಡಿಯಲ್ಲಿ ಎಂತಹ ರಾಜಕೀಯ ಪರಿಸ್ಥಿತಿ ಇದ್ದರೂ ರಾಜ್ಯದ ಹಿತ ಕಾಪಾಡುವ ಕೆಲಸ ಮಾಡಿದ್ದೇವೆ. ಇದನ್ನು ಬಹಳಷ್ಟು ಜನರು ಗಮನಕ್ಕೆ ತಗೆದುಕೊಂಡಿಲ್ಲ’ ಎಂದರು.

‘ಕಾರ್ಯಕರ್ತರು ಬೇಸರ ವ್ಯಕ್ತಪಡಿಸುವುದು ಸಹಜ. ಯೋಗ್ಯರು, ಸಮರ್ಥರು, ಕಳಂಕರಹಿತರ ನೇಮಕಕ್ಕೆ ನಾಯಕರು ಮಾಡಿರುವ ನಿರ್ಧಾರ ಸ್ವಾಗತಿತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.