ADVERTISEMENT

ಪ್ರೌಢಶಾಲೆಗಳ ಉನ್ನತೀಕರಣಕ್ಕೆ ಕ್ರಮ: ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 9:22 IST
Last Updated 13 ಜನವರಿ 2020, 9:22 IST
ಗೋಕಾಕದಲ್ಲಿ ಭಾನುವಾರ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಭೀಮವ್ವ ಲಕ್ಷ್ಮಣರಾವ್ ಜಾರಕಿಹೊಳಿ ಸ್ಮಾರಕ ಚಾರಿಟಬಲ್‌ ಟ್ರಸ್ಟ್‌ನಿಂದ ಅತಿಥಿ ಶಿಕ್ಷಕರಿಗೆ ₹ 13.50 ಲಕ್ಷ ಗೌರವಧನ ವಿತರಿಸಿ ಅವರೊಂದಿಗೆ ಫೋಟೊ ತೆಗೆಸಿಕೊಂಡರು
ಗೋಕಾಕದಲ್ಲಿ ಭಾನುವಾರ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಭೀಮವ್ವ ಲಕ್ಷ್ಮಣರಾವ್ ಜಾರಕಿಹೊಳಿ ಸ್ಮಾರಕ ಚಾರಿಟಬಲ್‌ ಟ್ರಸ್ಟ್‌ನಿಂದ ಅತಿಥಿ ಶಿಕ್ಷಕರಿಗೆ ₹ 13.50 ಲಕ್ಷ ಗೌರವಧನ ವಿತರಿಸಿ ಅವರೊಂದಿಗೆ ಫೋಟೊ ತೆಗೆಸಿಕೊಂಡರು   

ಗೋಕಾಕ: ‘ಅರಭಾವಿ ಕ್ಷೇತ್ರದಲ್ಲಿ 15 ವರ್ಷಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಲಾಗುತ್ತಿದೆ. ಪ್ರೌಢಶಾಲೆಗಳನ್ನು ಉನ್ನತೀಕರಣಗೊಳಿಸಿ ಅವರಿಗೆ ಪದವಿ ಪೂರ್ವ ಶಿಕ್ಷಣ ನೀಡುವ ಚಿಂತನೆ ನಡೆಸಿದ್ದೇನೆ’ ಎಂದು ಶಾಸಕ, ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಭಾನುವಾರ ಇಲ್ಲಿ ಭೀಮವ್ವ ಲಕ್ಷ್ಮಣರಾವ್ ಜಾರಕಿಹೊಳಿ ಸ್ಮಾರಕ ಚಾರಿಟಬಲ್‌ ಟ್ರಸ್ಟ್ ಸಭೆಯಲ್ಲಿ ಮೂಡಲಗಿ ವಲಯದ ಅತಿಥಿ ಶಿಕ್ಷಕರಿಗೆ ₹ 13.50 ಲಕ್ಷ ಗೌರವಧನ ವಿತರಿಸಿ ಅವರು ಮಾತನಾಡಿದರು.

‘ಗ್ರಾಮೀಣ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಿಯು ಶಿಕ್ಷಣಕ್ಕೆ ಅನುಕೂಲವಾಗುವಂತೆ ವಲಯಕ್ಕೆ 14 ಪದವಿ ಪೂರ್ವ ಕಾಲೇಜುಗಳು ಅವಶ್ಯವಾಗಿವೆ. ಈ ನಿಟ್ಟಿನಲ್ಲಿ ಶೀಘ್ರವೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಿದ್ದೇನೆ. ಸರ್ಕಾರಿ ಪ್ರೌಢಶಾಲೆಗಳಿಗೆ ಸ್ವಂತ ಕಟ್ಟಡಗಳು ಲಭ್ಯ ಇವೆ. ಜೊತೆಗೆ ಸ್ನಾತಕೋತ್ತರ ಪದವಿ ಶಿಕ್ಷಕರು ಕರ್ತವ್ಯದಲ್ಲಿದ್ದಾರೆ. ಅವರ ಸೇವೆ ಬಳಸಿಕೊಂಡು ಸರ್ಕಾರಕ್ಕೆ ಆರ್ಥಿಕ ಹೊರೆಯಾಗದಂತೆ ಪಿಯು ಕಾಲೇಜುಗಳನ್ನು ನಾವೇ ಆರಂಭಿಸುವ ಮಹತ್ವಾಕಾಂಕ್ಷೆ ಹೊಂದಿದ್ದೇವೆ’ ಎಂದು ಮಾಹಿತಿ ನೀಡಿದರು.

ADVERTISEMENT

ಇದೇ ವೇಳೆ, ಸ್ವಾಮಿ ವಿವೇಕಾನಂದರ 157ನೇ ಜಯಂತಿ ಆಚರಿಸಲಾಯಿತು. 10ನೇ ತರಗತಿ ವಿದ್ಯಾರ್ಥಿಗಳಿಗೆ ಕಾವ್ಯಾ ಪ್ರಕಾಶನ ಹೊರತಂದಿರುವ ‘ಗೆಲುವಿನ ದೀವಿಗೆ’ ಅಭ್ಯಾಸ ಕೈಪಿಡಿ ಮತ್ತು 10ನೇ ವರ್ಗದ 6,135 ಮಕ್ಕಳಿಗೆ ವಿಶೇಷ ಸರಣಿ ಪರೀಕ್ಷೆಗಾಗಿ ಮಾದರಿ ಪ್ರಶ್ನೆಪತ್ರಿಕೆ ಹಾಗೂ ಉತ್ತರಪತ್ರಿಕೆಗಳನ್ನು ಉಚಿತವಾಗಿ ವಿತರಿಸಿದರು.

ಬಿಇಒ ಅಜಿತ ಮನ್ನಿಕೇರಿ ಮಾತನಾಡಿ, ‘ಶಾಸಕರು ಶಿಕ್ಷಣ ಇಲಾಖೆಯ ಉನ್ನತಿಗಾಗಿ ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ. ವಲಯದ ಅತಿಥಿ ಶಿಕ್ಷಕರಿಗೆ ಪ್ರತಿ ವರ್ಷ ಜೂನ್, ಜುಲೈ ಗೌರವಧನವನ್ನು ಕೊಡುತ್ತಿದ್ದಾರೆ. ತಾಯಿ-ತಂದೆ ಸ್ಮರಣಾರ್ಥ ಮನ್ನಿಕೇರಿಯಲ್ಲಿ ಸರ್ಕಾರಿ ಪ್ರೌಢಶಾಲೆಗೆ 4 ಎಕರೆ ಜಮೀನು ನೀಡಿದ್ದಾರೆ. ಪ್ರತಿ ವರ್ಷ ಶಿಕ್ಷಕರ ದಿನಾಚರಣೆಗೆ ಎಲ್ಲ ರೀತಿಯ ಸಹಾಯ ಕೊಡುತ್ತಿದ್ದಾರೆ. ರಾಜ್ಯದಲ್ಲಿಯೇ ಹೆಚ್ಚು ವಸತಿ ಶಾಲೆಗಳನ್ನು ಆರಂಭಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ’ ಎಂದು ತಿಳಿಸಿದರು.

ಬಾಲಚಂದ್ರ ಅವರನ್ನು ಮೂಡಲಗಿ ವಲಯದ ಸಿಆರ್‌ಪಿಗಳು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಸರ್ಕಾರಿ ನೌಕರರ ಸಂಘ, ಅತಿಥಿ ಶಿಕ್ಷಕರ ಸಂಘದವರು ಗೌರವಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಶಕುಂತಲಾ ಪರುಶೆಟ್ಟಿ, ಮುಖಂಡರಾದ ರಾಜೇಂದ್ರ ಸಣ್ಣಕ್ಕಿ ಮತ್ತು ಸುಧೀರ ಜೋಡಟ್ಟಿ, ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಎಪಿಎಂಸಿ ಮಾಜಿ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ, ಘ.ಯೋ.ನೀ.ಬ. ಮಹಾಮಂಡಳಿ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಬೆಮುಲ್‌ ನಿರ್ದೇಶಕ ಮಲ್ಲಪ್ಪ ಪಾಟೀಲ, ಪ್ರಭಾ ಶುಗರ್ಸ್‌ ನಿರ್ದೇಶಕ ಕೃಷ್ಣಪ್ಪ ಬಂಡ್ರೊಳ್ಳಿ, ಹನಮಂತ ತೇರದಾಳ, ಮುತ್ತೆಪ್ಪ ಕುಳ್ಳೂರ, ಈರಣ್ಣ ಜಾಲಿಬೇರಿ, ಲಕ್ಷ್ಮಣ ಮಸಗುಪ್ಪಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.