ADVERTISEMENT

ರಾಷ್ಟ್ರ ಲಾಂಛನ ದುರ್ಬಳಕೆ: ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 11 ಜೂನ್ 2022, 14:36 IST
Last Updated 11 ಜೂನ್ 2022, 14:36 IST
 ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಬೆಳಗಾವಿ: ‘ವಿಧಾನ ಪರಿಷತ್‌ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರು ಸ್ವಂತ ಲಾಭಕ್ಕಾಗಿ ರಾಷ್ಟ್ರಲಾಂಛನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ದೂರಿನಡಿ, ಚುನಾವಣಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು ವಿವರಣೆ ಕೇಳಿ ಶನಿವಾರ ನೋಟಿಸ್‌ ನೀಡಿದ್ದಾರೆ.

‘ಬಸವರಾಜ ಹೊರಟ್ಟಿ ಕುರಿತಾಗಿ ಬರೆಯಲಾದ ‘ಬಸವರಾಜ ಪಥ’ ಹಾಗೂ ‘ಸಂಘರ್ಷ– ಹೋರಾಟ– ಸಾಧನೆ’ ಎಂಬ ಎರಡು ಪುಸ್ತಕಗಳಲ್ಲಿ ರಾಷ್ಟ್ರಲಾಂಛನ, ರಾಜ್ಯ ಲಾಂಛನ ಹಾಗೂ ವಿಧಾನ ಪರಿಷತ್‌ ಸಭಾಪತಿ ಪೀಠದ ಚಿತ್ರಗಳನ್ನು ಮುದ್ರಿಸಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ವ್ಯಕ್ತಿಯೊಬ್ಬರು ಶುಕ್ರವಾರ ದೂರು ನೀಡಿದ್ದಾರೆ. ಇದನ್ನು ಪರಿಶೀಲಿಸಲಾಗಿ ದುರ್ಬಳಕೆ ಮಾಡಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಇದರ ಬಗ್ಗೆ ವಿವರಣೆ ಕೊಡಬೇಕು ಎಂದು ಹೊರಟ್ಟಿ ಅವರಿಗೆ ನೋಟಿಸ್‌ ನೀಡಲಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನೋಟಿಸ್‌ ಜಾರಿ ಮಾಡಿದ 24 ಗಂಟೆಯೊಳಗೆ ಉತ್ತರ ಕೊಡಬೇಕು ಎಂದು ಸೂಚಿಸಲಾಗಿದೆ. ಒಂದುವೇಳೆ ಸಮರ್ಪಕ ಉತ್ತರ ನೀಡದೇ ಇದ್ದರೆ ಶಿಸ್ತುಕ್ರಮಕ್ಕಾಗಿ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗುವುದು’ ಎಂದರು.

ADVERTISEMENT

‘ದಿ ಸ್ಟೇಟ್ ಎಂಬ್ಲಮ್‌ ಆಫ್ ಇಂಡಿಯಾ (ಪ್ರೊಹಿಬಿಷನ್‌ ಆಫ್‌ ಇಂಪ್ರಾಪರ್‌ ಯೂಸ್‌ ಆ್ಯಕ್ಟ್‌–2005) ಅಡಿ ವಿವರಣೆ ಕೇಳಲಾಗಿದೆ. ಅಲ್ಲದೇ, ‘ಜನಪ್ರತಿನಿಧಿಗಳ ಕಾಯ್ದೆ (ರಿಪ್ರೆಸೆಂಟೇಷನ್‌ ಆಫ್‌ ಪೀಪಲ್ಸ್‌ ಆ್ಯಕ್ಟ್‌)’ ಅಡಿ ಕ್ರಮ ಜರುಗಿಸಲು ನಮಗೂ ಅವಕಾಶವಿದೆ. ಆಯೋಗದ ನಿರ್ದೇಶನ ನೋಡಿಕೊಂಡು ಮುಂದುವರಿಯಲಾಗುವುದು’ ಎಂದು ಹೇಳಿದರು.

‘ಜತೆಗೆ, ಈ ಪುಸ್ತಕಗಳನ್ನು ಪ್ರಕಟಿಸಿದ ಹುಬ್ಬಳ್ಳಿಯ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದವರಿಗೂ ನೋಟಿಸ್‌ ನೀಡಲಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.