ADVERTISEMENT

ಮತ ಎಣಿಕೆ ಪ್ರಕ್ರಿಯೆ ಸಮರ್ಪಕವಾಗಿರಲಿ

ಚುನಾವಣಾ ವೀಕ್ಷಕಿ ಏಕರೂಪ್ ಕೌರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 13:16 IST
Last Updated 6 ಡಿಸೆಂಬರ್ 2021, 13:16 IST
ಬೆಳಗಾವಿಯಲ್ಲಿ ವಿಧಾನಪರಿಷತ್‌ ಚುನಾವಣೆ ಮತ ಎಣಿಕೆಗೆ ಸಂಬಂಧಿಸಿದಂತೆ ಸೋಮವಾರ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಚುನಾವಣಾ ವೀಕ್ಷಕಿ ಏಕರೂಪ್‌ ಕೌರ್ ಮಾತನಾಡಿದರು. ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್, ಜಿ.ಪಂ. ಸಿಇಒ ಎಚ್.ವಿ. ದರ್ಶನ್, ನಗರಪಾಲಿಕೆ ಆಯುಕ್ತ ರುದ್ರೇಶ ಘಾಳಿ,
ಬೆಳಗಾವಿಯಲ್ಲಿ ವಿಧಾನಪರಿಷತ್‌ ಚುನಾವಣೆ ಮತ ಎಣಿಕೆಗೆ ಸಂಬಂಧಿಸಿದಂತೆ ಸೋಮವಾರ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಚುನಾವಣಾ ವೀಕ್ಷಕಿ ಏಕರೂಪ್‌ ಕೌರ್ ಮಾತನಾಡಿದರು. ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್, ಜಿ.ಪಂ. ಸಿಇಒ ಎಚ್.ವಿ. ದರ್ಶನ್, ನಗರಪಾಲಿಕೆ ಆಯುಕ್ತ ರುದ್ರೇಶ ಘಾಳಿ,   

ಬೆಳಗಾವಿ: ‘ಮತ ಎಣಿಕೆ ಅಧಿಕಾರಿಗಳ ಮೇಲೆ ಜವಾಬ್ದಾರಿ ಹೆಚ್ಚಾಗಿರುತ್ತದೆ. ಪ್ರತಿಯೊಬ್ಬರೂ ಮತ ಎಣಿಕೆ ವಿಧಾನ ಮತ್ತು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಅನುಸರಿಸಿ ಯಾವುದೇ ಗೊಂದಲಕ್ಕೆ ಆಸ್ಪದ ನೀಡದಂತೆ ಪ್ರಕ್ರಿಯೆ ನಡೆಸಬೇಕು’ ಎಂದು ಚುನಾವಣಾ ವೀಕ್ಷಕರೂ ಆಗಿರುವ ಐಎಎಸ್ ಅಧಿಕಾರಿ ಏಕರೂಪ್ ಕೌರ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಕ್ರಿಯೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ’ ಎಂದರು.

ADVERTISEMENT

ಎಣಿಕೆ ಹೀಗಿರುತ್ತದೆ:

ತರಬೇತಿ ನೀಡಿದ ಮಾಸ್ಟರ್ ಟ್ರೇನರ್ ಎನ್.ವಿ. ಶಿರಗಾಂವಕರ, ‘ಮತ ಎಣಿಕೆ ಕೇಂದ್ರದಲ್ಲಿ 1ರಿಂದ 14 ಟೇಬಲ್‌ಗಳಿರುತ್ತವೆ. ಪ್ರತಿ ಟೇಬಲ್ ಗೆ 36 ರೌಂಡ್‌ಗಳು ಇರುತ್ತವೆ. ಕೆಲ ಟೇಬಲ್‌ಗಳಿಗೆ ಮಾತ್ರ ಒಂದು ಹೆಚ್ಚುವರಿ ರೌಂಡ್ ಬರುತ್ತದೆ’ ಎಂದು ತಿಳಿಸಿದರು.

‘ಮೈಕ್ರೋ ಅಬ್ಸರ್ವರ್‌ಗಳಾಗಿ ನೇಮಿಸಲಾದ ಅಧಿಕಾರಿಗಳು ಮತ ಎಣಿಕೆ ಸಮಯದಲ್ಲಿ ಕಡ್ಡಾಯವಾಗಿ ಗುರುತಿನ ಚೀಟಿ ತೆಗೆದುಕೊಂಡು ಬರಬೇಕು. ಮತ ಎಣಿಕೆಗೆ ನಿಗದಿಪಡಿಸಿದ ಸಮಯಕ್ಕೆ ಮುಂಚಿತವಾಗಿ ಕರ್ತವ್ಯಕ್ಕೆ ಹಾಜರಾಗಬೇಕು. ಒಟ್ಟು 511 ಮತಗಟ್ಟೆಗಳಿವೆ ಬೆಳಿಗ್ಗೆ 8ರಿಂದ ಮತ ಎಣಿಕೆ ಪ್ರಾರಂಭವಾಗಲಿದ್ದು, ಎಣಿಕೆ ಮೇಲ್ವಿಚಾರಕ ಮತ್ತು ಸಹಾಯಕರನ್ನು ನೇಮಕ ಮಾಡಲಾಗುವುದು. ಬ್ಯಾಲೆಟ್ ಬಾಕ್ಸ್ ಮತಪತ್ರಗಳ ಅಂಕಿ–ಅಂಶಗಳ ಕುರಿತು ಚುನಾವಣಾಧಿಕಾರಿಗೆ ಮಾಹಿತಿ ನೀಡಬೇಕು’ ತಿಳಿಸಿದರು.

ಅಧಿಕಾರಿ ಗಮನಕ್ಕೆ ತನ್ನಿರಿ:

‘ಮತ ಎಣಿಕೆ ಸಮಯದಲ್ಲಿ ಏಜೆಂಟರ ಜೊತೆಗೆ ಯಾವುದೇ ಅನವಶ್ಯ ಗೊಂದಲಕ್ಕೆ ಅವಕಾಶ ಮಾಡಿ ಕೊಡದೆ ಎಣಿಕೆಯಲ್ಲಿ ತೊಡಗಿಕೊಳ್ಳಬೇಕು. ಗೊಂದಲ ಹೊಂದಿರುವ ಮತಪತ್ರದ ಬಗ್ಗೆ ಚುನಾವಣಾಧಿಕಾರಿಗೆ ತಿಳಿಸಬೇಕು. ಅಂತಹ ಮತಗಳ ಕುರಿತು ಅವರು ನಿರ್ಣಯ ತೆಗೆದುಕೊಳ್ಳುತ್ತಾರೆ’ ಎಂದು ಹೇಳಿದರು.

‘ಪರಿಷತ್ ಚುನಾವಣೆಯಲ್ಲಿ ಮತದಾರರು ಪ್ರಾಶಸ್ತ್ಯ ಆಧಾರದ ಮೇಲೆ ಮತವನ್ನು ಚಲಾಯಿಸುವುದರಿಂದ ಪ್ರಾಶಸ್ತ್ಯ ಮತ ಗಳಿಕೆಯನ್ನು ಪರಿಗಣಿಸಿ ಅಭ್ಯರ್ಥಿಗಳ ಆಯ್ಕೆಯನ್ನು ಘೋಷಿಸಲಾಗುತ್ತದೆ. ಆದ್ದರಿಂದ ಕಣದಲ್ಲಿರುವ ಆರು ಅಭ್ಯರ್ಥಿಗಳಿಗೆ ಲಭಿಸಿರುವ ಪ್ರಾಶಸ್ತ್ಯದ ಮತಗಳನ್ನು ಎಣಿಕೆ ಪ್ರಕ್ರಿಯೆಯು ವಿಭಿನ್ನವಾಗಿರುತ್ತದೆ’ ಎಂದರು.

ಆಯ್ಕೆಗೆ ಬಿಟ್ಟಿದ್ದು:

‘ಮೊದಲ‌ (ಅಂಕಿಯಲ್ಲಿ 1) ಪ್ರಾಶಸ್ತ್ಯ ಮತವನ್ನು ಕಣದಲ್ಲಿ ಇರುವ ಒಬ್ಬ ಅಭ್ಯರ್ಥಿಗೆ ಮಾತ್ರ ಚಲಾಯಿಸಬೇಕು. ಮತದಾರ ಇಬ್ಬರು ಅಭ್ಯರ್ಥಿಗಳಿಗೆ ಮೊದಲ ಪ್ರಾಶಸ್ತ್ಯ ಮತವನ್ನು ನೀಡಿದರೆ ಅಂತಹ ಮತ ಅಸಿಂಧುವಾಗಲಿದೆ. ಕಣದಲ್ಲಿರುವ ಆರು ಅಭ್ಯರ್ಥಿಗಳಿಗೆ ಒಂದರಿಂದ 6 ಪ್ರಾಶಸ್ತ್ಯ ಮತವನ್ನು ಮತದಾರ ತಮ್ಮ ಇಚ್ಛೆಯಂತೆ ನೀಡಬಹುದು. ಮೊದಲ ಪ್ರಾಶಸ್ತ್ಯ ಮತ ಮಾತ್ರ ಕಡ್ಡಾಯವಾಗಿದ್ದು, ಇನ್ನುಳಿದ ಪ್ರಾಶಸ್ತ್ಯಗಳು ಮತದಾರನ ಆಯ್ಕೆಗೆ ಬಿಟ್ಟಿದ್ದು’ ಎಂದು ಸ್ಪಷ್ಟಪಡಿಸಿದರು.

‘ಪ್ರಾಶಸ್ತ್ಯ ತಿಳಿಸುವ ಅಂಕಿ ಹೊರತುಪಡಿಸಿ ಇತರೆ ಯಾವುದೇ ಅಂಕಿ ಅಥವಾ ಚಿಹ್ನೆ ಗುರುತು ಹಾಕಬಾರದು. ಪ್ರಾಶಸ್ತ್ಯ ಮತವನ್ನು ನಿಗದಿತ ಕಾಲಂನಲ್ಲೇ ಅಂಕಿಯಲ್ಲಿ ಬರೆಯಬೇಕು. 2 ಕಾಲಂ ನಡುವೆ ಬರೆಯಲಾದ ಅಂಕಿಗಳಿದ್ದರೆ ಅಂತಹ ಮತ ಕೂಡ ಅಸಿಂಧು ಎಂದು ಪರಿಗಣಿಸಲಾಗುತ್ತದೆ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್, ಜಿ.ಪಂ. ಸಿಇಒ ಎಚ್‌.ವಿ. ದರ್ಶನ್, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಪ್ಪ ವಣಕ್ಯಾಳ ಹಾಗೂ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.