ADVERTISEMENT

ಭಾವೈಕ್ಯ ಸಾರಿದ ಮೊಹರಂ ಆಚರಣೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2019, 13:13 IST
Last Updated 10 ಸೆಪ್ಟೆಂಬರ್ 2019, 13:13 IST

ಬೆಳಗಾವಿ: ನಗರ ಮತ್ತು ಜಿಲ್ಲೆಯಾದ್ಯಂತ ತ್ಯಾಗ, ಬಲಿದಾನ ಮತ್ತು ಭಾವೈಕ್ಯದ ಸಂಕೇತವಾದ ಮೊಹರಂ ಆಚರಣೆ ಮಂಗಳವಾರ ಶ್ರದ್ಧಾ–ಭಕ್ತಿಯಿಂದ ನಡೆಯಿತು.

ವಿವಿಧೆಡೆ ಅಲ್ಲಿನ ಸಂಪ್ರದಾಯದಂತೆ ಹಿಂದೂ–ಮುಸ್ಲಿಮರು ಒಟ್ಟಾಗಿ ಹಬ್ಬ ಆಚರಿಸಿ ಭಾವೈಕ್ಯ ಮೆರೆದರು. ಹಲವು ದಿನಗಳಿಂದ ನಡೆದ ಧಾರ್ಮಿಕ ಆಚರಣೆಗಳಿಗೆ ಮೆರವಣಿಗೆಯೊಂದಿಗೆ ವಿಧ್ಯುಕ್ತ ತೆರೆ ಬಿದ್ದಿತು.

ದೇವರನ್ನು ಪ್ರತಿಷ್ಠಾಪಿಸಿದ್ದ ಮಸೀದಿಗಳ ಎದುರು ಬೆಳಿಗ್ಗೆ ಕೆಂಡ ಹಾಯುವುದು (ಕೆಂಡ ಸೇವೆ), ಪಂಜಿನ ಮೆರವಣಿಗೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ADVERTISEMENT

ದರ್ಗಾಗಳು ಹಾಗೂ ಮಸೀದಿಗಳಲ್ಲಿ ಪಂಜಾಗಳನ್ನು (ದೇವರು) ಪ್ರತಿಷ್ಠಾಪಿಸಲಾಗಿತ್ತು. ಆಚರಣೆಯ ಕೊನೆಯ ದಿನವಾದ ಮಂಗಳವಾರ ಎಲ್ಲ ಪಂಜಾಗಳನ್ನು ಒಂದೆಡೆ ಸೇರಿಸಿ ಗಾಂಧಿನಗರ, ಖಂಜರ್‌ಗಲ್ಲಿ, ದರ್ಬಾರ್‌ ಗಲ್ಲಿ, ವೀರಭದ್ರನಗರ ಮೊದಲಾದ ಕಡೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಭಕ್ತರು ದೇವರಿಗೆ ಒಣ ಖರ್ಜೂರ, ಶೇಂಗಾ, ಮಲ್ಲಿಗೆ ಹೂವು ಹಾಗೂ ಉತ್ತತ್ತಿ ಎಸೆದು ಪ್ರಾರ್ಥನೆ ಸಲ್ಲಿಸಿದರು. ನಗರವೂ ಸೇರದಿಂತೆ ಕೆಲವೆಡೆ ತಡರಾತ್ರಿವರೆಗೂ ಮೆರವಣಿಗೆ ನಡೆಸಿದ ನಂತರ, ಸಂಪ್ರದಾಯದಂತೆ ದೇವರುಗಳನ್ನು ಹೊಳೆಗೆ ಕಳುಹಿಸಲಾಯಿತು.

ಕ್ಯಾಂಪ್ ಪ್ರದೇಶ, ಕಸಾಯಿಗಲ್ಲಿ, ಖಂಜರ್‌ಗಲ್ಲಿ, ಗಾಂಧಿನಗರ, ರುಕ್ಮಿಣಿ ನಗರ, ಪೀರನವಾಡಿ, ಮಚ್ಚೆ, ಕಾಕತಿ, ಉಚಗಾಂವ,ಖಾನಾಪುರದ ಗಣೇಬೈಲ ಮೊದಲಾದ ಕಡೆಗಳಿಂದ ಬಂದ ಪಂಜಾಗಳು ಇಲ್ಲಿನ ದರ್ಬಾರ್‌ ಗಲ್ಲಿಯ ಜುಮ್ಮಾ ಮಸೀದಿ ಎದುರು ಸೇರಿದವು. ಟೋಪಿ ಗಲ್ಲಿಯ ಪಂಜಾಗಳು ಬಂದ ನಂತರ ಎಲ್ಲ ಪಂಜಾಗಳ ಸಮ್ಮಿಲನವಾಯಿತು. ಅಲ್ಲಿ ಕೆಂಡ ಸೇವೆ ನೆರವೇರಿತು. ಅಲಾಂವದಲ್ಲಿನ ಬೆಂಕಿಗೆ ಭಕ್ತರು ಉಪ್ಪು ಸುರಿದು ಹರಕೆ ತೀರಿಸಿದರು. ಪಂಜಾಗಳ ಸಮ್ಮಿಲನ ನೋಡಿ, ದರ್ಶನ ಪಡೆಯಲು ಸಾವಿರಾರು ಮಂದಿ ಮುಸ್ಲಿಂ ಹಾಗೂ ಹಿಂದೂಗಳು ನೆರೆದಿದ್ದರು. ನಂತರ ಪಂಜಾಗಳು ತಮ್ಮ ಸ್ಥಳಗಳಿಗೆ ತೆರಳಿದವು.

ರವಿವಾರಪೇಟೆ, ಗಾಂಧಿನಗರ ಮೊದಲಾದ ಪ್ರದೇಶಗಳಲ್ಲಿ ಪ್ರತಿಷ್ಠಾಪಿಸಿ ಆರಾಧಿಸಿದ ಡೋಲಿ(ತಾಬೂತು)ಗಳನ್ನು ಮೆರವಣಿಗೆ ನಡೆಸಿ ತಡರಾತ್ರಿ ವಿಸರ್ಜನೆ ಮಾಡಲಾಯಿತು.

ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.