ರಾಯಬಾಗ: ಅನಾದಿ ಕಾಲದಿಂದ ನಮ್ಮ ಪೂರ್ವಜರು ಸತ್ಕಾರ್ಯಗಳ ಮೂಲಕ ಧರ್ಮಾಚರಣೆಗಳನ್ನು ಭಯ ಭಕ್ತಿಯಿಂದ ಚರಿಸಿಕೊಂಡು ಬಂದಿದ್ದಾರೆ. ಅಂತಹ ಧರ್ಮಾಚರಣೆಗಳನ್ನು ನಾವು ಮುಂದುವರೆಸಿಕೊಂಡು ಹೋಗಬೇಕಾಗಿದೆ. ಮಠ-ಮಂದಿರಗಳು ಮಾನವನ ಬದುಕಿಗೆ ಕಣ್ಣು ಇದ್ದಂತೆ ಎಂದು ಲೇಖಕ ಪ್ರಣಯ ಪಾಟೀಲ ಹೇಳಿದರು.
ತಾಲ್ಲೂಕಿನ ರೈಲ್ವೇ ಸ್ಟೇಷನ್‌ನಲ್ಲಿರುವ ಲಕ್ಷ್ಮೀದೇವಿ ದೇವಸ್ಥಾನಕ್ಕೆ ನಿರ್ಮಿಸಿರುವ ನೂತನ ಮಹಾದ್ವಾರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ದೈವಭಕ್ತಿಯನ್ನು ಆರಾಧಿಸುವ ಪರಂಪರೆ ನಮ್ಮದಾಗಬೇಕು. ಸಾಮಾಜಿಕವಾಗಿ, ಕೌಟುಂಬಿಕವಾಗಿ ಎದುರಾಗುವ ಸಮಸ್ಯೆಗಳ ನಿವಾರಣೆಗೆ ದೇವರ ಹಾಗೂ ದೇವಾಲಯಗಳ ಅವಶ್ಯಕತೆ ನಮಗಿದೆ. ಸಮಾಜದಲ್ಲಿ ನಾವು ಕೆಡಕನ್ನು ಮಾಡದೇ ಒಳ್ಳೆಯ ಕೆಲಸಗಳನ್ನು ಮಾಡಲು ಮಠ-ಮಂದಿರಗಳು ಮಾರ್ಗದರ್ಶನ ನೀಡುತ್ತವೆ. ದೇವಸ್ಥಾನಗಳಿಗೆ ಕಳಸ ಎಷ್ಟು ಭಕ್ತಿಯ ಪ್ರಾಮುಖ್ಯತೆ ಹೊಂದಿದೆಯೊ ಅದೇ ರೀತಿ ನಾವು ಮತ್ತು ಸಮಾಜ ಒಳ್ಳೆಯ ದಾರಿಯಲ್ಲಿ ನಡೆದರೆ ಮಾನವನಿಗೆ ಅದೇ ಭೂಷಣ ಎಂದು ಹೇಳಿದರು.
ವಕೀಲ ರಾಯಪ್ಪ ಗೊಂಡೆ, ಮರೆಪ್ಪ ದೀಪಾಳೆ, ಗುಣಪಾಲ ಬಡೋರೆ, ರಮೇಶ ಕುಂಬಾರ, ಸಂಜು ಬಾವಚೆ,ಸಂತೋಷ ತೇರದಾಳೆ,ಮಹಾವೀರ ಶೆಟ್ಟಿ,ಸಂತೋಷ ಶೆಟ್ಟಿ, ಕುಮಾರ ಹೊಸಕೋಟೆ, ಬೀರಪ್ಪ ಘೇನಾನಿ, ಬೀರಪ್ಪ ಗೊಂಡೆ,ಅಣ್ಣಪ್ಪ ಮುಧೋಳೆ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.