ADVERTISEMENT

ಶಾಸಕರ ಧರಣಿ ಫೋಟೊ ವಿರೂಪಗೊಳಿಸಿದ ಕಿಡಿಗೇಡಿಗಳು

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 14:22 IST
Last Updated 14 ಡಿಸೆಂಬರ್ 2018, 14:22 IST
ಕನ್ನಡ ಸಂಘಟನೆಯವರು ಸಾಮಾಜಿಕ ಮಾಧ್ಯಮದಲ್ಲಿ ಹಾಕಿರುವ ಅಸಲಿ ಹಾಗೂ ವಿರೂಪಗೊಳಿಸಿದ ಫೋಟೊ
ಕನ್ನಡ ಸಂಘಟನೆಯವರು ಸಾಮಾಜಿಕ ಮಾಧ್ಯಮದಲ್ಲಿ ಹಾಕಿರುವ ಅಸಲಿ ಹಾಗೂ ವಿರೂಪಗೊಳಿಸಿದ ಫೋಟೊ   

ಬೆಳಗಾವಿ: ಇಲ್ಲಿನ ದಕ್ಷಿಣ ಹಾಗೂ ಉತ್ತರ ಮತಕ್ಷೇತ್ರದ ಶಾಸಕರಾದ ಬಿಜೆಪಿಯ ಅಭಯ ಪಾಟೀಲ ಮತ್ತು ಅನಿಲ ಬೆನಕೆ ಶುಕ್ರವಾರ ಸುವರ್ಣ ವಿಧಾನಸೌಧದಲ್ಲಿ ಧರಣಿ ನಡೆಸಿದ ಚಿತ್ರವನ್ನು ಕಿಡಿಗೇಡಿಗಳು ವಿರೂಪಗೊಳಿಸಿ, ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದಾರೆ. ಮಹಾರಾಷ್ಟ್ರ ಏಕೀಕರಣ ಸಮಿತಿಯವರ (ಎಂಇಎಸ್) ಕೃತ್ಯವಿದು ಎಂದು ಕನ್ನಡ ಸಂಘಟನೆಗಳವರು ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿವೇಶನದಲ್ಲಿ ಖಾಸಗಿ ಮಸೂದೆ ಮಂಡಿಸಲು ಅವಕಾಶ ನೀಡದಿರುವುದನ್ನು ಖಂಡಿಸಿ ಶಾಸಕರು ಧರಣಿ ನಡೆಸಿದ್ದರು. ಅವರು ಹಿಡಿದಿದ್ದ ಫಲಕಗಳಲ್ಲಿ ತಮ್ಮ ಬೇಡಿಕೆಗಳನ್ನು ಬರೆಸಿದ್ದರು. ಆದರೆ ಕೆಲವರು ಆ ಫಲಕಗಳಲ್ಲಿದ್ದ ಬರಹವನ್ನು ವಿರೂಪಗೊಳಿಸಿ, ಗಡಿವಿವಾದ ಬಗೆಹರಿಸಬೇಕು ಎಂಬ ಸಾಲು ಹಾಗೂ ಎಂಇಎಸ್ ಘೋಷಣೆಯನ್ನು (ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎನ್ನುವುದು) ಬರೆದು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದಾರೆ. ಈ ಶಾಸಕರು ಗಡಿವಿವಾದ ಇತ್ಯರ್ಥಕ್ಕಾಗಿ ಧರಣಿ ಕುಳಿತಿದ್ದಾರೆಂದು ಬಿಂಬಿಸುವ ಯತ್ನವನ್ನು ಮಾಡಲಾಗಿದೆ.

‘ಇದು ಎಂಇಎಸ್‌ ಕಿಡಗೇಡಿಗಳ ಕೃತ್ಯವೇ ಹೌದು. ಇದು ಅವರ ಹಳೆಯ ಚಟವನ್ನು ತೋರಿಸಿದೆ. ಇಂಥ ಕುತಂತ್ರವು ಅವರಿಗೆ ತಾತ್ಕಾಲಿಕವಾಗಿ ಖುಷಿ ಕೊಡಬಹುದೇ ಹೊರತು ಮತ್ತೇನನ್ನೂ ನೀಡದು. ಅಭಯ ಪಾಟೀಲ ಎಂಇಎಸ್ ನಾಯಕರ ವಿರುದ್ಧ ತೊಡೆತಟ್ಟಿ ನಿಂತವರು. ಅವರ ವಿರುದ್ಧದ ಕುತಂತ್ರವನ್ನು ಖಂಡಿಸುತ್ತೇನೆ. ಮತದಾರರು ಪಾಠ ಕಲಿಸಿದ್ದರೂ ಎಂಇಎಸ್‌ನವರು ಬುದ್ಧಿ ಕಲಿತಿಲ್ಲ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ತಿಳಿಸಿದರು.

ADVERTISEMENT

ಅವರು ತಮ್ಮ ಫೇಸ್‌ಬುಕ್‌ ಪುಟದಲ್ಲೂ ಈ ಕುರಿತು ಬರೆದಿದ್ದಾರೆ. ಅಸಲಿ ಫೋಟೊ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.