ಸಾವು
ಪ್ರಾತಿನಿಧಿಕ ಚಿತ್ರ
ರಾಮದುರ್ಗ: ಕುರಿ ಕಾಯುವ ಕಾಯಕದೊಂದಿಗೆ ರಾಮದುರ್ಗ ತಾಲ್ಲೂಕಿನ ಜಮೀನುಗಳಿಗೆ ಆಗಮಿಸಿದ್ದ ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಟಕೋಳ ಠಾಣಾ ವ್ಯಾಪ್ತಿಯ ಸಿದ್ನಾಳ ಗ್ರಾಮದಲ್ಲಿ ಮಧ್ಯಾಹ್ನ ಜರುಗಿದೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಕಟಕೋಳ ಪೊಲೀಸರು ತಾಯಿ ಮತ್ತು ಒಂದು ಮಗುವಿನ ಶವಗಳನ್ನು ಹೊರತೆಗೆದಿದ್ದಾರೆ. ಬೆಳಗಾವಿಯಿಂದ ಸೋಕೊ ಟೀಮಿನ ಈಜು ತಜ್ಞರು ಇನ್ನೊಂದು ಮಗುವಿನ ಶವಕ್ಕಾಗಿ ತೀವ್ರ ಶೋಧ ನಡೆಸಿದ್ದಾರೆ.
ಮೃತ ಮಹಿಳೆಯನ್ನು ಗೋಕಾಕ ತಾಲ್ಲೂಕಿನ ಬೆನಚಿನಮರಡಿ ಗ್ರಾಮದ ಲಕ್ಷ್ಮೀ ಮಲ್ಲಿಕಾರ್ಜುನ ಗೌಡವ್ವಗೋಳ (24), ಹಾಲವ್ವ (3) ಮತ್ತು ಹಾಲಪ್ಪ (1) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಗಂಡನ ಮನೆಯವರು ಮತ್ತು ತವರು ಮನೆಯವರು ಕುರಿ ಮೇಯಿಸಿಕೊಂಡು ರಾಮದುರ್ಗ ತಾಲ್ಲೂಕಿನ ಬೇರೆ ಬೇರೆ ಗ್ರಾಮಗಳಲ್ಲಿ ವಾಸಿಸುತ್ತಿದ್ದರು. ಮೈಯಲ್ಲಿ ಹುಷಾರಿಲ್ಲ ಎಂದು ಲಕ್ಷ್ಮೀ ಬೆನಚಿನಮರಡಿಗೆ ಹೋಗಿದ್ದಳು. ಸಿದ್ನಾಳಕ್ಕೆ ಆಗಮಿಸಿ ಮಂಗಳವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಕಟಕೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ವಿನಾಯಕ ಬಡಿಗೇರ, ಪಿಎಸ್‌ಐ ಬಸವರಾಜ ಕೊಣ್ಣೂರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.