ADVERTISEMENT

ರಮೇಶ ಜಾರಕಿಹೊಳಿಗೆ ಧನ್ಯವಾದ ಅರ್ಪಿಸಿದ ಸುರೇಶ ಅಂಗಡಿ!

​ಪ್ರಜಾವಾಣಿ ವಾರ್ತೆ
Published 24 ಮೇ 2019, 11:22 IST
Last Updated 24 ಮೇ 2019, 11:22 IST
ಸುರೇಶ ಅಂಗಡಿ
ಸುರೇಶ ಅಂಗಡಿ   

ಬೆಳಗಾವಿ: ‘ಶಾಸಕ ರಮೇಶ ಜಾರಕಿಹೊಳಿ ಅವರ ಸಹಕಾರದಿಂದ ಗೋಕಾಕದಲ್ಲಿ 1 ಲಕ್ಷಕ್ಕೂ ಹೆಚ್ಚು ಮತಗಳು ಲಭಿಸಿದವು. ಅದಕ್ಕಾಗಿ ಅವರಿಗೆ ಧನ್ಯವಾದ ಹೇಳುತ್ತೇನೆ’ ಎಂದು ಸಂಸದ ಸುರೇಶ ಅಂಗಡಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಮೇಶ ಅವರು ಸದ್ಯದಲ್ಲಿಯೇ ಬಿಜೆಪಿ ಸೇರುವುದು ಗ್ಯಾರಂಟಿ. ಅವರ ಜೊತೆಗೆ ಕೆಲವು ಶಾಸಕರು ಕೂಡ ಬರುತ್ತಾರೆ. ‘ಆಪರೇಷನ್‌ ಕಮಲ’ ನಡೆಯುವುದು ಖಚಿತ. ಇವರನ್ನೆಲ್ಲ ನಾವು ಆತ್ಮೀಯವಾಗಿ ಸ್ವಾಗತಿಸುತ್ತೇವೆ’ ಎಂದು ನುಡಿದರು.

‘ರಾಜಕೀಯದಲ್ಲಿ ರಮೇಶ ನನಗಿಂತ ಹಿರಿಯರು. ನಿಷ್ಠಾವಂತ ಕಾಂಗ್ರೆಸ್‌ ಕಾರ್ಯಕರ್ತರಾಗಿದ್ದರು. ಅಂತಹವರನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ’ ಎಂದು ಟೀಕಿಸಿದರು.

ADVERTISEMENT

‘ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಕೆಡುವ ಪ್ರಕ್ರಿಯೆ ಬೆಳಗಾವಿಯಿಂದಲೇ ಆರಂಭಗೊಳ್ಳಲಿದೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳು ಹೀನಾಯವಾಗಿ ಸೋತಿರುವುದಕ್ಕೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ’ ಎಂದು ಸವಾಲೆಸೆದರು.

ಕುಟುಂಬಕ್ಕಾಗಿ ರಾಜಕಾರಣ:

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗದಂತೆ ತಡೆಯಬೇಕೆಂಬ ಏಕೈಕ ಉದ್ದೇಶದಿಂದ ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿಕೊಂಡವು. ಈ ಪಕ್ಷಗಳಿಗೆ ಜನಸೇವೆ ಮಾಡುವ ಉದ್ದೇಶವಿಲ್ಲ. ಅಜ್ಜ, ಮಗ, ಮೊಮ್ಮಗ ಹೀಗೆ ಕುಟುಂಬ ಸದಸ್ಯರಿಗೆ ಅಧಿಕಾರ ನೀಡುವ ಉದ್ದೇಶ ಇವುಗಳಿಗೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.