ADVERTISEMENT

ಬೆಳಗಾವಿ: ರೈತರ ಸಮಸ್ಯೆ ಬಗೆಹರಿಸಲು ಸಂಸದ ಜಗದೀಶ ಶೆಟ್ಟರ್‌ ತಾಕೀತು

ಸುಳೇಬಾವಿಯ ರೈಲ್ವೆ ಕೆಳ ಸೇತುವೆಯಿಂದ ರೈತರಿಗೆ ತೊಂದರೆ: ಸಂಸದ ಭೇಟಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2025, 15:27 IST
Last Updated 21 ಫೆಬ್ರುವರಿ 2025, 15:27 IST
ಬೆಳಗಾವಿ ತಾಲ್ಲೂಕಿನ ಸುಳೇಬಾವಿ ಗ್ರಾಮದ ರೈಲು ನಿಲ್ದಾಣದ ಸಮೀಪ ನಿರ್ಮಿಸಿದ ರೈಲ್ವೆ ಕೆಳಸೇತುವೆಯಿಂದ ರೈತರಿಗೆ ಆಗುತ್ತಿರುವ ಸಮಸ್ಯೆಯನ್ನು ಸಂಸದ ಜಗದೀಶ ಶೆಟ್ಟರ್‌ ಶುಕ್ರವಾರ ಪರಿಶೀಲಿಸಿದರು
ಬೆಳಗಾವಿ ತಾಲ್ಲೂಕಿನ ಸುಳೇಬಾವಿ ಗ್ರಾಮದ ರೈಲು ನಿಲ್ದಾಣದ ಸಮೀಪ ನಿರ್ಮಿಸಿದ ರೈಲ್ವೆ ಕೆಳಸೇತುವೆಯಿಂದ ರೈತರಿಗೆ ಆಗುತ್ತಿರುವ ಸಮಸ್ಯೆಯನ್ನು ಸಂಸದ ಜಗದೀಶ ಶೆಟ್ಟರ್‌ ಶುಕ್ರವಾರ ಪರಿಶೀಲಿಸಿದರು   

ಬೆಳಗಾವಿ: ತಾಲ್ಲೂಕಿನ ಸುಳೇಬಾವಿ ಗ್ರಾಮದ ರೈಲು ನಿಲ್ದಾಣದ ಸಮೀಪ ನಿರ್ಮಿಸಿದ ರೈಲ್ವೆ ಕೆಳಸೇತುವೆ (ಆರ್‌ಯುಬಿ) ರೈತರಿಗೆ ಅನಾನುಕೂಲವಾಗಿದ್ದು, ಕೂಡಲೇ ಸರಿಪರಿಸಬೇಕು ಎಂದು ಸಂಸದ ಜಗದೀಶ ಶೆಟ್ಟರ್‌ ತಾಕೀತು ಮಾಡಿದರು.

ಸುಳೇಬಾವಿ ರೈಲು ನಿಲ್ದಾಣದ ಹತ್ತಿರ ನೈರುತ್ಯ ರೈಲ್ವೆ ವಲಯದ ವತಿಯಿಂದ ನಿರ್ಮಿಸಿದ ರೈಲ್ವೆ ಕೆಳ ಸೇತುವೆಯನ್ನು ಶುಕ್ರವಾರ ಪರಿಶೀಲಿಸಿದ ಅವರು, ರೈತರ ಸಮಸ್ಯೆ ಆಲಿಸಿದರು.

‘ರೈಲು ಹಳಿಯ ಸುತ್ತಮುತ್ತಲಿನ ಜಮೀನುಗಳಲ್ಲಿ ರೈತರು ಬೆಳೆ ಬೆಳೆಯುತ್ತಾರೆ. ಹೊಲಗಳಿಗೆ ಹೋಗಲು ಹಾಗೂ ಫಸಲನ್ನು ಅವರ ಜಮೀನಿನಿಂದ ಸಾಗಿಸಲು ತೊಂದರೆ ಆಗುತ್ತಿದೆ’ ಎಂದು ರೈತರು ದೂರಿದರು.

ADVERTISEMENT

‘ಸುಳೇಬಾವಿ ರೈಲ್ವೆ ನಿಲ್ದಾಣದ ಹತ್ತಿರ ಕೆಳ ಸೇತುವೆಯನ್ನು ರೈತರಿಗಾಗಿಯೇ ನಿರ್ಮಿಸಲಾಗಿದೆ’ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದರು.

ಅದಕ್ಕೆ ತಕರಾರು ಮಾಡಿದ ರೈತರು, ‘ಕೆಳಸೇತುವೆಗೆ ಅನುಗುಣವಾಗಿಯೇ ತಡೆಗೋಡೆ ಕೂಡ ನಿರ್ಮಿಸಲಾಗಿದೆ. ಇದರ ಪರಿಣಾಮವಾಗಿ ರೈತರು ಬೆಳೆದ ಫಸಲನ್ನು ಹತ್ತಿರದ ಮುಖ್ಯ ರಸ್ತೆಯವರೆಗೆ ಸಾಗಿಸುವುದು ಕಷ್ಟವಾಗಿದೆ. ಹಾಗಿದ್ದರೆ ಕೆಳ ಸೇತುವೆ ನಿರ್ಮಿಸುವ ಉದ್ದೇಶ ಹೇಗೆ ಸಫಲವಾಗುತ್ತದೆ’ ಎಂದು ಕಿಡಿ ಕಾರಿದರು.

ಮಧ್ಯ ಪ್ರವೇಶ ಮಾಡಿದ ಸಂಸದ ಶೆಟ್ಟರ್‌, ‘ಈ ಸಮಸ್ಯೆಯನ್ನು ಕೂಡಲೇ ಸರಿಪಡಿಸಿ, ರೈತರಿಗೆ ಅನುಕೂಲವಾಗುವ ಹಾಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಏನು ಕ್ರಮ ಕೈಗೊಂಡಿದ್ದೀರಿ ಎಂಬುದನ್ನು ನನಗೆ ಶೀಘ್ರ ಮಾಹಿತಿ ಒದಗಿಸಬೇಕು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಿರಾಶ್ರಿತರ ಮನವಿ: ‘ಘಟಪ್ರಭಾ ರೈಲು ನಿಲ್ದಾಣದ ಹತ್ತಿರದಲ್ಲಿ ಹಲವು ದಶಕಗಳಿಂದಲೂ ಕುಟುಂಬಗಳು ವಾಸವಿದ್ದು, ಅಲ್ಲಿಯೇ ತಮ್ಮ ಉಪಜೀವನ ಸಾಗಿಸುತ್ತಿವೆ. ಆದರೆ, ಅವರು ವಾಸಿಸುವ ಜಾಗ ರೈಲ್ವೆ ಇಲಾಖೆಗೆ ಸೇರಿದೆ. ಜಾಗ ಖಾಲಿ ಮಾಡಬೇಕು ಎಂದು ಪದೇಪದೇ ನೋಟಿಸ್‌ ನೀಡುತ್ತಿದ್ದಾರೆ. ಆದರೆ, ನಮಗೆ ವಾಸಿಸಲು ಬೇರೆಲ್ಲೂ ಜಾಗವಿಲ್ಲ. ಈ ಸಮಸ್ಯೆ ಬಗೆಹರಿಸಬೇಕು’ ಎಂದು ನಿರಾಶ್ರಿತರು ಸಂಸದರ ಬಳಿ ಮನವಿ ಮಾಡಿದರು.

‘ಈ ಸಮಸ್ಯೆ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳೋಣ. ಅಲ್ಲಿಯವರೆಗೆ ಜನರಿಗೆ ನೋಟಿಸ್‌ ನೀಡುವುದು, ಒಕ್ಕಲೆಬ್ಬಿಸುವಂಥ ಕೆಲಸ ಮಾಡಬಾರದು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಘಟಪ್ರಭಾ ರೈಲು ನಿಲ್ದಾಣ ಬಳಿಯ ನಿರಾಶ್ರಿತರ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ಬೆಳಗಾವಿಯಲ್ಲಿ ಶುಕ್ರವಾರ ಸಂಸದ ಜಗದೀಶ ಶೆಟ್ಟರ್‌ ಅವರಿಗೆ ಮನವಿ ಸಲ್ಲಿಸಲಾಯಿತು
ಕೆಳ ಸೇತುವೆಗೆ ಅಡ್ಡಲಾದ ತಡೆಗೋಡೆ ನಿರ್ಮಾಣ ದಶಕಗಳಿಂದಲೂ ಸಮಸ್ಯೆ ಎದುರಿಸುತ್ತಿರುವ ರೈತರು ಫಸಲು ಸಾಗಿಸಲು ಪರದಾಡುತ್ತಿರುವ ಜನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.