ADVERTISEMENT

ಮೂಡಲಗಿ: ರೇವಣಸಿದ್ಧೇಶ್ವರ ದೇವರ ರಥೋತ್ಸವಕ್ಕೆ ಸಜ್ಜು

ನಾಳೆ ದಿನವಿಡೀ ವಿವಿಧ ಧಾರ್ಮಿಕ ಕಾರ್ಯಕ್ರಮ

ಬಾಲಶೇಖರ ಬಂದಿ
Published 26 ಮೇ 2024, 4:11 IST
Last Updated 26 ಮೇ 2024, 4:11 IST
ಮೂಡಲಗಿಯ ರೇವಣಸಿದ್ಧೇಶ್ವರ ದೇವರ ಸನ್ನಿಧಿ
ಮೂಡಲಗಿಯ ರೇವಣಸಿದ್ಧೇಶ್ವರ ದೇವರ ಸನ್ನಿಧಿ   

ಮೂಡಲಗಿ: ಮೂಡಲಗಿಯ ‘ಮೂಲದೈವಾಂಶ’, ‘ಮೂಲಪುರುಷ’ ಎನಿಸಿಕೊಂಡಿರುವ ರೇವಣಸಿದ್ಧೇಶ್ವರ ದೇವರ ಜಾತ್ರೆ ಮತ್ತು ರಥೋತ್ಸವ ಮೇ 27ರಂದು ಸಡಗರದಿಂದ ಜರುಗಲಿದೆ. ದತ್ತಾತ್ರಯಬೋಧ ಸ್ವಾಮೀಜಿ, ಶ್ರೀಧರಬೋಧ ಸ್ವಾಮೀಜಿ ಸಾನ್ನಿಧ್ಯದಲ್ಲಿ ದಿನವಿಡೀ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಲಿವೆ.

ಅಂದು ಬೆಳಿಗ್ಗೆ ರೇವಣಸಿದ್ಧೇಶ್ವರ ಗವಿಮಠದಲ್ಲಿ ಲಿಂಗಕ್ಕೆ ರುದ್ರಾಭಿಷೇಕ, ವಿಶೇಷ ಪೂಜೆ ನಡೆಯಲಿದೆ. ಹನುಮಂತ ದೇವರ ದೇವಸ್ಥಾನದಿಂದ ಬಸವ ಕಲ್ಯಾಣ ಮಂಟಪದವರೆಗೆ ವೈಭವದಿಂದ ರಥೋತ್ಸವ ಜರುಗಲಿದೆ. ಪಟ್ಟಣದಲ್ಲಿರುವ ಇನ್ನೊಂದು ರೇವಣಸಿದ್ಧೇಶ್ವರ ಮಠದ ಪಲ್ಲಕ್ಕಿಯೂ ರಥೋತ್ಸವದಲ್ಲಿ ಸಾಗಲಿದೆ. ಈ ಜಾತ್ರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಲಿದ್ದಾರೆ. ಸರ್ವಧರ್ಮೀಯರು ಭಾಗವಹಿಸುವುದು ಭಾವೈಕ್ಯತೆಗೆ ಸಾಕ್ಷಿ.

‘ಉದ್ಭವ ಲಿಂಗ’ಕ್ಕೆ ನಿತ್ಯವೂ ಪೂಜೆ: 

ಕೈಲಾಸ ಗಣಗಳಲ್ಲಿ ಒಬ್ಬರಾಗಿರುವ ರೇವರಣಸಿದ್ಧರು 11 ಮತ್ತು 12ನೇ ಶತಮಾನಗಳ ಮಧ್ಯದಲ್ಲಿ ಭೂಲೋಕದಲ್ಲಿ ಅವತರಿಸಿದ್ದರು ಎನ್ನಲಾಗಿದೆ. ಲೋಕ ಸಂಚಾರದ ವೇಳೆ, ಅವರು ಮೂಡಲಗಿಯ ದಟ್ಟ ಕಾಡಿನ ಮಧ್ಯದ ಗವಿಯಲ್ಲಿ ತಪಸ್ಸು ಮಾಡಿದ್ದ ಸ್ಥಳವೇ ಇಂದಿನ ಗವಿಮಠವಾಗಿದೆ. ಇಲ್ಲಿ ತಂಗಿದ್ದ ಅವಧಿಯಲ್ಲಿ ರೇವಣಸಿದ್ಧರು ಪೂಜಿಸಿದ ‘ಉದ್ಭವ ಲಿಂಗ’ ಈಗಲೂ ಪ್ರತಿದಿನ ಪೂಜಿಸಲ್ಪಡುತ್ತದೆ.

ADVERTISEMENT

15ನೇ ಶತಮಾನದಲ್ಲಿ ಮಹಾರಾಷ್ಟ್ರದ ಟಾಕಳಿಯಲ್ಲಿ ತಪಸ್ವಿಗಳಾದ ಸಹಜಬೋಧ ಸ್ವಾಮೀಜಿ ಆಜ್ಞೆಯಂತೆ ಸಂಚರಿಸುತ್ತ, ಶ್ರೀರಂಗಬೋಧರು ಮೊದಲು ಆಗಮಿಸಿದ್ದು ರೇವಣಸಿದ್ಧರು ನೆಲೆಸಿದ ಗವಿಮಠಕ್ಕೆ. ‘ನೆನೆದಾಗ ಬರುವೆ’ ಎಂದು ಸಹಜಬೋಧರಿಂದ ವರ ಪಡೆದಿದ್ದ ಶ್ರೀರಂಗಬೋಧರಿಗೆ ರೇವಣಸಿದ್ಧರ ರೂಪದಲ್ಲಿ ಸಹಜಬೋಧರು ಕಾಣಿಸಿದರು. ಈಗಿನ ಕೆಳಗಿನ ಮಠದಲ್ಲಿ ನೆಲೆಸುವಂತೆ ಶ್ರೀರಂಗಬೋಧರಿಗೆ ರೇವಣಸಿದ್ಧರು ಆಜ್ಞಾಪಿಸಿದರು. ಹಾಗಾಗಿ ಇಲ್ಲಿನ ಶಿವಬೋಧರಂಗ ಮಠದ ಇತಿಹಾಸ, ಮೂಡಲಗಿಯ ಆಧ್ಯಾತ್ಮಿಕ, ಧಾರ್ಮಿಕ ಪರಂಪರೆಯಲ್ಲಿ ರೇವಣಸಿದ್ಧರು ಪ್ರಮುಖರು ಎನಿಸುತ್ತಾರೆ.

‘ಸುತ್ತಲೂ ಮರಗಳಿಂದ ಆವೃತವಾಗಿರುವ ರೇವಣಸಿದ್ಧರ ಗವಿಮಠ, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಪ್ರಶಾಂತತೆಯಿಂದ ಕೂಡಿದ ಈ ಪರಿಸರದಲ್ಲಿ ನಿರಂತರವಾಗಿ ಮದುವೆ ಮತ್ತು ವಿವಿಧ ಸಮಾರಂಭ ನಡೆಯುತ್ತವೆ. ಈ ಧಾರ್ಮಿಕ ಸ್ಥಳ ಸಾಕಷ್ಟು ಸುಧಾರಣೆ ಕಂಡಿದೆ’ ಎಂದು ಮಠದ ಉಸ್ತುವಾರಿಯಾದ ಶಂಕರಯ್ಯ ಹಿರೇಮಠ ಹೇಳಿದರು.

ಮೂಡಲಗಿಯ ರೇವಣಸಿದ್ಧೇಶ್ವರ ಗವಿಮಠದ ನೋಟ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.