ADVERTISEMENT

ಮೇಲ್ದರ್ಜೆಗೆ ಏರಬೇಕಿದೆ ಆರೋಗ್ಯ ಕೇಂದ್ರ 

ಕೊರೊನಾ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಸಜ್ಜು

ಬಾಲಶೇಖರ ಬಂದಿ
Published 2 ಏಪ್ರಿಲ್ 2020, 19:30 IST
Last Updated 2 ಏಪ್ರಿಲ್ 2020, 19:30 IST
ಮೂಡಲಗಿಯ ಸಮುದಾಯ ಆರೋಗ್ಯ ಕೇಂದ್ರ
ಮೂಡಲಗಿಯ ಸಮುದಾಯ ಆರೋಗ್ಯ ಕೇಂದ್ರ   

ಮೂಡಲಗಿ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ವೈದ್ಯರು, ಸಿಬ್ಬಂದಿ ಲಭ್ಯವಿರುವ ಎಲ್ಲ ಸೌಲಭ್ಯಗಳನ್ನೆಲ್ಲ ಬಳಸಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇತರೆ ರೋಗಿಗಳ ಶುಶ್ರೂಷೆ ಜೊತೆಗೆ ಕೊರೊನಾ ವೈರಾಣು ಸಂಬಂಧಿಸಿದ ತಪಾಸಣೆ ಪ್ರಕ್ರಿಯೆಯೂ ನಡೆದಿದೆ. ಕೊರೊನಾ ಸೋಂಕಿನ ತಪಾಸಣೆಗಾಗಿ ಪ್ರತ್ಯೇಕ ಸ್ಥಳ ಮಾಡಿದ್ದು ಅಲ್ಲಿಯೇ ತಪಾಸಣೆ ನಡೆಸಿ ದಾಖಲಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆ.

ಬೇರೆ ಸ್ಥಳಗಳಿಂದ ಮೂಡಲಗಿಗೆ ಬರುವ ಜನರನ್ನು ಗುರುತಿಸಿ ಸ್ಕ್ರೀನಿಂಗ್ ಮಾಡಿ ಸೋಂಕಿನ ಲಕ್ಷಣಗಳು ಇಲ್ಲದಿದ್ದರೂ ಅವರನ್ನು 14 ದಿನಗಳವರೆಗೆ ಹೋಂ ಕ್ವಾರಂಟೈನ್‌ಗೆ ಒಳಪಡಿಸಿದ್ದಾರೆ. ಈವರೆಗೆ ಹೊರಗಿನಿಂದ ಬಂದಿರುವ 211ಕ್ಕೂ ಹೆಚ್ಚಿನವರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಅದರಲ್ಲಿ ವಿದೇಶದಿಂದ ಒಬ್ಬರು, ಹೊರರಾಜ್ಯದಿಂದ 91 ಮತ್ತು ಹೊರ ಜಿಲ್ಲೆಗಳಿಂದ 119 ಜನರು ಬಂದಿದ್ದು ಅವರ ಕೈ ಮೇಲೆ ಸೀಲ್ ಹಾಕಲಾಗಿದೆ.

ADVERTISEMENT

ಅಂಥವರ ಮನೆಗಳಿಗೆ ಆಶಾ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು ನಿತ್ಯ ಭೇಟಿ ನೀಡಿ ನಿಗಾ ವಹಿಸಿದ್ದಾರೆ. ‘ಸದ್ಯ ಆಸ್ಪತ್ರೆಯಲ್ಲಿ ಕೊರೊನಾ ವೈರಾಣು ಸೋಂಕು ಕಾಣಿಸಿಕೊಂಡವರಿಗೆ ಪ್ರಥಮ ಚಿಕಿತ್ಸೆಗಾಗಿ ವಾರ್ಡ್‌ ಸಿದ್ಧಗೊಳಿಸಿದ್ದು, ಸೋಂಕು ಇರುವುದು ಖಾತ್ರಿಯಾದರೆ ಅಂಥವರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗುವುದು’ ಎಂದು ಮುಖ್ಯ ವೈದ್ಯಾಧಿಕಾರಿ ಡಾ.ಭಾರತಿ ತಿಳಿಸಿದರು.

ಸಿಬ್ಬಂದಿ ಸುರಕ್ಷತೆಗೆ ಪಿಪಿಇ ಕಿಟ್ ಕೇವಲ 10 ಇದ್ದು, ಅವುಗಳ ಕೊರತೆ ಇದೆ.

ಪ್ರಾಥಮಿಕ ಆರೋಗ್ಯ ಕೇಂದ್ರವು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ 2008ರಲ್ಲಿ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿದೆ. ಸದ್ಯ ಇಲ್ಲಿ ಮುಖ್ಯ ವೈದ್ಯಾಧಿಕಾರಿ ಸೇರಿದಂತೆ ನಾಲ್ವರು ವೈದ್ಯರಿದ್ದಾರೆ. ಮಕ್ಕಳ ತಜ್ಞರು, ಪ್ರಸೂತಿ ಮತ್ತು ಅರವಳಿಕೆ ತಜ್ಞರಿದ್ದಾರೆ. ಆರು ಸ್ಟಾಫ್‌ ನರ್ಸ, ಲ್ಯಾಬ್, ಫಾರ್ಮಸಿ, ಎಕ್ಸರೇಗೆ ತಲಾ ಒಬ್ಬರು ಇದ್ದಾರೆ. ಕಾಯಂ ಮತ್ತು ಗುತ್ತಿಗೆ ಆಧಾರಿತ ಸೇರಿದಂತೆ ಒಟ್ಟು 32 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಡೆಂಟಿಸ್ಟ್, ಇಬ್ಬರು ಸ್ಟಾಫ್‌ ನರ್ಸ, ಒಬ್ಬರು ಫಾರ್ಮಸಿಸ್ಟ್‌ ಕೊರತೆ ಇದೆ.

ಆಪರೇಷನ್ ಥಿಯೇಟರ್‌ ಇದ್ದು, ಅದನ್ನು ಪ್ರಸೂತಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೆ ಬಳಸಲಾಗುತ್ತಿದೆ. ಮೂಲವ್ಯಾದಿ ಮೊದಲಾದವುಗಳ ಶಸ್ತ್ರಚಿಕಿತ್ಸೆಗಳಿಗೆ ಸೌಲಭ್ಯವಿಲ್ಲ. ಲ್ಯಾಬ್, ಎಕ್ಸರೇ, ಕಣ್ಣು ತಪಾಸಣೆ ವ್ಯವಸ್ಥೆ, ‘108’ ಆಂಬ್ಯುಲೆನ್ಸ್‌ ಇದೆ. ನಾಯಿ, ಹಾವು ಕಡಿತಕ್ಕೆ ಚಿಕಿತ್ಸೆ ಲಭ್ಯವಿದೆ. ಐಸಿಯು, ಡಯಾಲಿಸಿಸ್ ಮತ್ತು ಕಿಡ್ನಿ ಸಂಬಂಧಿಸಿದಂತೆ ತಪಾಸಣೆಗೆ ಸೌಲಭ್ಯದ ಕೊರತೆ ಇದೆ. ಇತರ ಶಸ್ತ್ರಚಿಕಿತ್ಸೆಗಳು (ಜನರಲ್ ಸರ್ಜರಿ), ಐಸಿಯು ವ್ಯವಸ್ಥೆ, ಹೆಚ್ಚಿನ ಅಂಬ್ಯುಲೆನ್ಸ್‌ಗಳ ವ್ಯವಸ್ಥೆ ಬೇಕಿದೆ. ‘ಅಂತಹ ಸೌಲಭ್ಯಗಳು ದೊರೆಯಬೇಕಾದರೆ ಮೇಲ್ದರ್ಜೆಗೆ ಏರಿಸಬೇಕು’ ಎನ್ನುತ್ತಾರೆ ಮುಖ್ಯ ವೈದ್ಯಾಧಿಕಾರಿ.

ಸದ್ಯ 35ಸಾವಿರ ಮೇಲ್ಪಟ್ಟು ಜನಸಂಖ್ಯೆ ಹೊಂದಿರುವ ಮೂಡಲಗಿ 2017ರಲ್ಲಿ ತಾಲ್ಲೂಕು ಕೇಂದ್ರವಾಗಿದೆ. ತಾಲ್ಲೂಕು ವ್ಯಾಪ್ತಿಯಲ್ಲಿ 8 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಹೀಗಾಗಿ ಇಲ್ಲಿ 100 ಹಾಸಿಗೆಗಳ ಆಸ್ಪತ್ರೆ ಅತ್ಯಗತ್ಯವಾಗಿದೆ. ಆರೋಗ್ಯ ಕೇಂದ್ರದ ಸುತ್ತ ನಿವೇಶನವಿದ್ದು, ಅದನ್ನು ಬಳಸಿಕೊಳ್ಳಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.