ಬೆಳಗಾವಿ: ಜಿಲ್ಲೆಯಾದ್ಯಂತ ಭಾನುವಾರ ಶ್ರದ್ಧಾ– ಭಕ್ತಿಯ ಮೊಹರಂ ಆಚರಿಸಲಾಯಿತು. ಐದು ದಿನಗಳಿಂದ ಡೋಲಿ ಹಾಗೂ ಪಂಜಾಗಳನ್ನು ಪ್ರತಿಷ್ಠಾಪನೆ ಮಾಡಿದ್ದ ಭಕ್ತರು ಕೊನೆಯ ದಿನ ಮೆವರಣಿಗೆಯ ಮೂಲಕ ಹೊಳೆಗೆ ಕಳುಹಿಸಿದರು. ಕರಬಲ್ ಆಡುತ್ತ, ಗೆಜ್ಜೆ ಕುಣಿತ ಹಾಕುತ್ತ, ವಾದ್ಯಗಳೊಂದಿಗೆ ನಡೆದ ಡೋಲಿಗಳ ಮೆರವಣಿಗೆ ಜನಮನ ಸೆಳೆಯಿತು.
ಮುಸ್ಲಿಮರು ಮಾತ್ರವಲ್ಲದೇ, ಹಿಂದೂ ಧರ್ಮದ ಹಲವರು ಕೂಡ ಹಬ್ಬದಲ್ಲಿ ಪಾಲ್ಗೊಂಡು ಭಾವೈಕ್ಯ ಮೆರೆದರು. ಕೊಬ್ಬರಿ ಕಾರೀಕುಗಳನ್ನು ನೀಡಿ ಭಕ್ತಿ ಸಮರ್ಪಿಸಿದರು. ವಿವಿಧ ಗ್ರಾಮಗಳಲ್ಲಿ ಕಿಚ್ಚು ಹಾಯುವ ಮೂಲಕ ಹಿಂದೂಗಳು ಕೂಡ ಸಂಪ್ರದಾಯಕ್ಕೆ ಗೌರವ ನೀಡಿದರು.
ಇಲ್ಲಿನ ಗಾಂಧಿ ನಗರ, ದರ್ಬಾರ್ ಗಲ್ಲಿ, ಆಜಾದ್ ನಗರ, ಕಾಕತಿವೇಸ್, ಪೀರನವಾಡಿ, ವಡಗಾವಿ, ಹೊಸ ಗಾಂಧಿನಗರ, ಆಜಂ ನಗರ, ಖಡಕ್ ಗಲ್ಲಿ ಮತ್ತಿತರ ಬಡಾವಣೆಗಳಲ್ಲಿಯೂ ಡೋಲಿ ಹಾಗೂ ಪಂಜಾಗಳ ಮೆರವಣಿಗೆ ನಡೆಯಿತು.
ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಯುವಜನರು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು. ಕರಬಲ್ ಆಡಿ ರಂಜಿಸಿದರು. ‘ಹಸನ್– ಹುಸೇನ್ ಕಿ ದೋಸ್ತ್ ರಹೋದ್ದಿನ್’ ಘೋಷಣೆ ಮೊಳಗಿಸಿದರು.
ಬೆಳಗಾವಿ ತಾಲ್ಲೂಕಿನ ಹಲಗ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಶ್ರದ್ಧೆಯಿಂದ ಆಚರಿಸಲಾಯಿತು. ಗ್ರಾಮದಲ್ಲಿ ಸ್ಥಾಪಿಸಲಾದ ಫಂಜಾಗಳ ಮೆರವಣಿಗೆಯು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಹಜರತ್ ಬೀಬಿ ಫಾತಿಮಾ ದರ್ಗಾದ ಮುಂದೆ ಸೇರಿದವು. ಪಂಜಾಗಳ ಮೆರವಣಿಗೆಯಲ್ಲಿ ಭಾಗವಹಿಸುವ ಹಿಂದೂ– ಮುಸ್ಲಿಮರು ನೃತ್ಯ ಮಾಡಿ ಸಂಭ್ರಮಿಸಿದರು.
ಕೌಜಲಗಿ: ಭಾವೈಕ್ಯದ ಮೊಹರಂ ಆಚರಣೆ
ಕೌಜಲಗಿ: ಪಟ್ಟಣದಲ್ಲಿ ಭಾನುವಾರ ಮುಸ್ಲಿಮರ ಪವಿತ್ರ ಹಬ್ಬ ಮೊಹರಂ ಅನ್ನು ಹಿಂದೂ-ಮುಸ್ಲಿಮರು ಶ್ರದ್ಧೆ ಭಕ್ತಿಯಿಂದ ಆಚರಿಸಿದರು.
ಮೊಹರಂ ಹಬ್ಬದ ಕೊನೆಯ ದಿನವಾದ ಭಾನುವಾರ ಪಟ್ಟಣದ ವಿವಿಧ ಸ್ಥಳಗಳಲ್ಲಿ ಸ್ಥಾಪಿಸಲಾದ ಪಂಜಾಗಳು ಹಾಗೂ ಕೌಜಲಗಿ ದೇಶಗತಿಯ ಆರಾಧನಾ ದೇವರಲ್ಲಿ ಒಬ್ಬರಾದ ಸಿಂಪಿ ಶಿವಪ್ಪ (ಕಾಶಿಂದುಲಾ) ದೇಸಾಯಿ ವಾಡೆಯ ಸದರಗೆ ಭೇಟಿ ನೀಡಿ, ಅನಂತರ ಬಸವೇಶ್ವರ ಪೇಟೆಯ ಮೂಲಕ ಗ್ರಾಮ ಪಂಚಾಯಿತಿ ಹತ್ತಿರವಿರುವ ಹಳೆ ಬಸ್ ನಿಲ್ದಾಣದ ಬಯಲು ಆವರಣದಲ್ಲಿ ಪರಸ್ಪರ ದೇವರುಗಳು ಮಿಲನಗೊಂಡವು.
ಪಟ್ಟಣದ ಎಲ್ಲ ಪಂಜಾಗಳು ಜೇಷ್ಠತೆಯ ಸಿಂಪಿ ಶಿವಪ್ಪ ದೇವರ ಭೇಟಿಗಾಗಿ ಕಾದು ಅನಂತರ ಪರಸ್ಪರ ಮಿಲನಗೊಂಡ ಮೇಲೆ ಎಲ್ಲ ಪಂಜಾ ದೇವರುಗಳು ದಕ್ಷಿಣ ಕಡೆಗೆ ಸಾಗಿದವು ಸಿಂಪ್ಲಿಸಿವಾಪ್ಪ ದೇವರು ಮಾತ್ರ ಪ್ರತ್ಯೇಕವಾಗಿ ಉತ್ತರದ ಕಡೆ ನಡೆದರು. ಈ ಅಪೂರ್ವ ದೇವರುಗಳ ಮಿಲನಕ್ಕಾಗಿ ಪಟ್ಟಣದ ಸಮಸ್ತ ನಾಗರಿಕರು ಗಂಟೆಗಟ್ಟಲೆ ಕಾಯ್ದು ತಮ್ಮ ಭಕ್ತಿಯನ್ನು ದೇವರಿಗೆ ಸಮರ್ಪಿಸಿದರು.
ಮೊಹರಂನ ಅಂಗವಾಗಿ ಭಕ್ತರಿಂದ ಬಾರುಕೋಲಿನಿಂದ ರಕ್ತಸಮರ್ಪಣಾಟ ನಡೆಯಿತು. ಈ ಸಂದರ್ಭದಲ್ಲಿ ದೇಶಗತಿಯ ದಳವಾಯಿ, ಸಿಪಾಯಿ ಮತ್ತು ಬಾಗಲದಾರ ಮುಂತಾದ ಸೇವಕರು, ಪಟ್ಟಣದ ಪ್ರಮುಖರು, ಯುವಕರು ಮಹಿಳೆಯರು ಮಕ್ಕಳು ಭಾವೈಕ್ಯದ ಮೊಹರಂಗೆ ಸಾಕ್ಷಿಯಾಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.