ADVERTISEMENT

ಭಾವೈಕ್ಯದ ಮೊಹರಂಗೆ ಬೆಳಗಾವಿ ಸಜ್ಜು: ಎಲ್ಲೆಡೆ ಬಿಗಿ ಬಂದೋಬಸ್ತ್‌

ವಿವಿಧೆಡೆ ಪಂಜಾ, ಡೋಲಿಗಳ ಅಲಂಕಾರ, ಮೆರವಣಿಗೆಗೆ ಸಿದ್ಧತೆ ಮಾಡಿಕೊಂಡ ಮುಸ್ಲಿಮರು,

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 2:34 IST
Last Updated 6 ಜುಲೈ 2025, 2:34 IST
<div class="paragraphs"><p>ಬೈಲಹೊಂಗಲ ತಾಲ್ಲೂಕಿನ ಜಕ್ಕನಾಯಕನಕೊಪ್ಪ ಗ್ರಾಮದಲ್ಲಿ ಹಿಂದೂಗಳು ಪ್ರತಿಷ್ಠಾಪಿಸಿರುವ ಡೋಲಿಗೆ ಮಂಗಳವಾರ ತರತರನಾದ ಪುಷ್ಪ ಮಾಲೆ ಅರ್ಪಿಸಿ ಪೂಜೆ ಸಲ್ಲಿಸಿದರು</p></div>

ಬೈಲಹೊಂಗಲ ತಾಲ್ಲೂಕಿನ ಜಕ್ಕನಾಯಕನಕೊಪ್ಪ ಗ್ರಾಮದಲ್ಲಿ ಹಿಂದೂಗಳು ಪ್ರತಿಷ್ಠಾಪಿಸಿರುವ ಡೋಲಿಗೆ ಮಂಗಳವಾರ ತರತರನಾದ ಪುಷ್ಪ ಮಾಲೆ ಅರ್ಪಿಸಿ ಪೂಜೆ ಸಲ್ಲಿಸಿದರು

   

ಬೆಳಗಾವಿ: ವಿವಿಧ ಸಂಸ್ಕೃತಿಕ ಸಂಗಮವಾದ ಬೆಳಗಾವಿ ಜಿಲ್ಲೆಯಲ್ಲಿ ಭಾವೈಕ್ಯದ ಮೊಹರಂ ಮತ್ತೆ ಬಂದಿದೆ. ನಗರವೂ ಸೇರಿದಂತೆ ಜಿಲ್ಲೆಯ ಎಲ್ಲ ಮಸೀದಿ, ದರ್ಗಾಗಳಲ್ಲಿ ಅಂತಿಮ ಹಂತದ ಸಿದ್ಧತೆಗಳು ಪೂರ್ಣಗೊಂಡಿವೆ. ಇನ್ನೇನು ಭಾನುವಾರ ಬೆಳಗಾದರೆ ಸಾಕು; ಅಲಾಯಿ ದೇವರುಗಳ ಮೆರವಣಿಗೆ ಆರಂಭವಾಗಲಿದೆ.

ಇಲ್ಲಿನ ಗಾಂಧಿ ನಗರ, ದರ್ಬಾರ್‌ ಗಲ್ಲಿ, ಖಡಕ್‌ ಗಲ್ಲಿ, ಉಜ್ವಲ್‌ ನಗರ, ವಡಗಾವಿ ಮತ್ತಿತರ ಬಡಾವಣೆಗಳಲ್ಲಿಯೂ ಡೋಲಿ ಹಾಗೂ ಪಂಜಾಗಳನ್ನು ಈಗಾಗಲೇ ಪ್ರತಿಷ್ಠಾಪನೆ ಮಾಡಲಾಗಿದೆ. ಜಿಲ್ಲೆಯ ಹಳ್ಳಿಹಲ್ಳಿಗಳಲ್ಲೂ ಮಸ್ಲಿಂ ಸಮಾಜದ ಯುವಜನರೊಂದಿಗೆ ಇತರೇ ಸಮಾಜದ ಮುಖಂಡರೂ ಸೇರಿ ಹಬ್ಬದ ಸಡಗರಕ್ಕೆ ಸಜ್ಜುಗೊಂಡಿದ್ದಾರೆ.

ADVERTISEMENT

ಮುಸ್ಲಿಮರಷ್ಟೇ ಅಲ್ಲದೆ; ಹಿಂದೂಗಳೂ ಪೂಜೆ ಸಲ್ಲಿಸಿ ಭಕ್ತಿ ಮೆರೆಯುವುದು, ಅಲಾಯಿ ದೇವರುಗಳನ್ನು ಹೊತ್ತು ಸಾಗುವುದು, ಕೊಬ್ಬರಿ– ಕಾರೀಕು ಹರಕೆ ತೀರುಸುವುದು ಈ ಹಬ್ಬದ ವಿಶೇಷ. ತಮ್ಮ ಇಷ್ಟಾರ್ಥ ಈಡೇರಿದ ಹಿನ್ನೆಲೆಯಲ್ಲಿ ವಿವಿಧ ಕಾಣಿಕೆ ಅರ್ಪಿಸುತ್ತಾರೆ. ಮೊಹರಂ ಕೊನೇ ದಿನ ಕೆಲವರು ಕಿಚ್ಚು ಹಾಯುತ್ತಾರೆ.

ಕೆಲವರು ಬೆಳ್ಳಿಯ ಕುದುರೆ, ಬೆಳ್ಳಿಯ ನಾಣ್ಯ ಹಾಗೂ ಇತರೇ ಕಾಣಿಕೆಗಳನ್ನು ಕೊಡುವುದಾಗಿ ಹರಕೆ ಹೊರುವುದು ವಾಡಿಕೆ. ಈ ಬಾರಿ ಕೂಡ ಮುಂಗಾರು ಹಂಗಾಮು ಸಂಭ್ರಮ ಮೂಡಿಸಿದ್ದರಿಂದ ಜಿಲ್ಲೆಯ ಜನರಲ್ಲಿ ಹಬ್ಬದ ಸಡಗರ ಇಮ್ಮಡಿಸಿದೆ.

ಮೊಹರಂ ಅಂಗವಾಗಿ ಮಾರುಕಟ್ಟೆಗಳಲ್ಲೂ ವಾಹನ ಹಾಗೂ ಬಟ್ಟೆ ಖರೀದಿ ಜೋರಾಗಿ ನಡೆದಿದೆ. ಬಿಳಿ ಬಣ್ಣದ ವಸ್ತ್ರಗಳನ್ನು ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಯುವಜನರೇ ಮಾರುಕಟ್ಟೆಗೆ ಮುಗಿಬಿದ್ದಿದ್ದಾರೆ.

ಮಧ್ಯಾಹ್ನ ಹಬ್ಬದ ಊಟ ಸವಿದ ಬಳಿಕ ಸಂಜೆಗೆ ದೇವರುಗಳನ್ನು ಹೊಳೆಗೆ ಕಳುಹಿಸುವ ಸಂಪ್ರದಾಯದೊಂದಿಗೆ ಈ ಹಬ್ಬಕ್ಕೆ ತೆರೆ ಬೀಳಲಿದೆ.

‘ಭಾನುವಾರ ಎಲ್ಲ ಮಸೀದಿಗಳಲ್ಲಿ ಧರ್ಮಗುರುಗಳು ಮೊಹರಂ ಬಗ್ಗೆ ಉಪದೇಶ ನೀಡುತ್ತಾರೆ. ಸಕಲ ಜೀವರಾಶಿ ಒಳಿತಿಗೆ ಪ್ರಾರ್ಥಿಸುತ್ತಾರೆ. ಕೆಲವರು ಉಪವಾಸ ವ್ರತ ಕೈಗೊಳ್ಳುತ್ತಾರೆ. ಮೆರವಣಿಗೆ ಮೂಲಕ ಪಂಜಾಗಳನ್ನು ಹೊಳೆಗೆ ಕಳುಹಿಸಲಾಗುತ್ತದೆ’ ಎಂದು ಬೆಳಗಾವಿಯ ಪೊಲೀಸ್‌ ಕೇಂದ್ರಸ್ಥಾನದ ಮಹಮ್ಮದೀಯಾ ಮಸೀದಿಯ ಧರ್ಮಗುರು ಖಾರಿ ಝಾಕೀರ್‌ಹುಸೇನ್‌ ಆರೀಫ್‌ಖಾನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.