ADVERTISEMENT

ಬೆಳಗಾವಿ: ಜಿಲ್ಲೆಯ ವಿವಿಧೆಡೆ ವೈಭವದ ಮೊಹರಂ

ಎಲ್ಲೆಡೆ ಹಸನ್ ಹುಸೇನ್ ಕಿ ದೋಸ್ತ್ ರಹೋದ್ದಿನ್ ಘೋಷಣೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 6:23 IST
Last Updated 9 ಆಗಸ್ಟ್ 2022, 6:23 IST
ಯರಗಟ್ಟಿ ಸಮೀಪದ ಮದ್ಲೂರು ಗ್ರಾಮದಲ್ಲಿ ಮಂಗಳವಾರ ಮೊಹರಂ ಆಚರಿಸಲಾಯಿತು
ಯರಗಟ್ಟಿ ಸಮೀಪದ ಮದ್ಲೂರು ಗ್ರಾಮದಲ್ಲಿ ಮಂಗಳವಾರ ಮೊಹರಂ ಆಚರಿಸಲಾಯಿತು   

ಬೆಳಗಾವಿ: ನಗರ ಹಾಗೂ ಜಿಲ್ಲೆಯ ಎಲ್ಲೆಡೆ ಮಂಗಳವಾರ ಮೊಹರಂ ಸಡಗರ ಮನೆ ಮಾಡಿತು. ಮುಸ್ಲಿಮರು ಹೊಸಬಟ್ಟೆ ಧರಿಸಿ, ನಸುಕಿನಿಂದಲೇ ಹಬ್ಬದ ಸಿದ್ಧತೆಯಲ್ಲಿ ತೊಡಗಿದರು.

ಹಿಂದೂ, ಮುಸ್ಲಿಮರು ಆದಿಯಾಗಿ ಎಲ್ಲ ಧರ್ಮೀಯರೂ ಉತ್ಸವದಲ್ಲಿ ಪಾಲ್ಗೊಂಡರು. ಹಿಂದೂ ಯುವಕರು ಸಹ ಡೋಲಿಗಳಿಗೆ ಹೆಗಲುಗೊಟ್ಟು ಭಕ್ತಿ ಮೆರೆದರು.

ಎಲ್ಲೆಡೆ ಹಸನ್ ಹುಸೇನ್ ಕಿ ದೋಸ್ತ್ ರಹೋದ್ದಿನ್ ಘೋಷಣೆ ಮಾರ್ದನಿಸಿತು. ಹಲವು ಕಡೆ ಸೋಮವಾರ ರಾತ್ರಿಯೇ ಕಿಚ್ಚು ಹಾಯ್ದು, ಡೋಲಿಗಳನ್ನು ಮೆರವಣಿಗೆ ಮಾಡಿ ಹೊಳೆಗೆ ಕಳುಹಿಸಿದರು.

ADVERTISEMENT

ಮಂಗಳವಾರ ಬೆಳಿಗ್ಗೆ ಬಹುಪಾಲು ಕಡೆ ಡೋಲಿಗಳ ವೈಭವದ ಮೆರವಣಿಗೆ ನಡೆಯಿತು.

ವಿವಿಧ ಬಣ್ಣದ ಬಟ್ಟೆ, ಅಲಂಕಾರಿಕ ಪೇಪರ್, ವರ್ಣರಂಜಿತ ರಿಬ್ಬನ್ ಹಾಗೂ ಬಿದಿರಿನ ಕಡ್ಡಿಗಳಿಂದ ಸುಂದರವಾಗಿ ಅಲಂಕರಿಸಿದ ಡೋಲಿಗಳನ್ನು ನೋಡಲು ಜನ ಮುಗಿಬಿದ್ದರು.ಒಣಕೊಬ್ಬರಿ, ಖಾರೀಕು ಅರ್ಪಿಸಿ ಭಕ್ತಿ ಮೆರೆದರು.

ಜಿಲ್ಲೆಯ ಯರಗಟ್ಟಿ ತಾಲ್ಲೂಕಿನ ಮದ್ಲೂರ ಗ್ರಾಮದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಹಿಂದೂ- ಮುಸ್ಲಿಂಸಮುದಾಯದವರು ಸೌಹಾರ್ದಯುತವಾಗಿ ಮೊಹರಂ ಹಬ್ಬದ ಕಿಚ್ಚು ಹಾಯ್ದರು. ಅಪಾರ ಸಂಖ್ಯೆಯ ಜನನ ಭಾಗವಹಿಸಿ ಮೊಹರಂ ಆಚರಣೆ ಮಾಡುವ ದೃಶ್ಯ ಕಣ್ಮನ ಸೆಳೆಯಿತು.

ಬೈಲಹೊಂಗಲದಲ್ಲೂ ಸಂಭ್ರಮ
ಬೈಲಹೊಂಗಲ
: ಹಸೇನ್, ಹುಸೇನ್ ಕೀ ದೋಸ್ತ್ ರಾಹೋ ದಿನ್ ಎನ್ನುತ್ತ ಭಕ್ತಿ ಪರವಷರಾಗಿ ಹಿಂದೂ, ಮುಸ್ಲಿಮರು ಮೊಹರಂ ಹಬ್ಬದ ಅಂಗವಾಗಿ ಮಂಗಳವಾರ ಶ್ರದ್ಧೆ, ಭಕ್ತಿಯಿಂದ ಕೆಂಡ ಹಾಯ್ದರು.

ಪಟ್ಟಣದ ಕಂಠಿ ಗಲ್ಲಿಯಲ್ಲಿರುವ ಪ್ರಸಿದ್ಧ ದರ್ಗಾದಲ್ಲಿ ಸರ್ವಧರ್ಮ‌ ಸಮಭಾವ ಹೊಂದಿರುವ ಎಲ್ಲ ಸಮಾಜ ಬಾಂಧವರು ಬೆಳಿಗ್ಗೆ ಮಡಿ ಸ್ಥಾನ ಮಾಡಿ ಬಂದು ಡೋಲಿ ದರ್ಶನ ಪಡೆದು ಕೆಂಡ ಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.