ADVERTISEMENT

ಮುಂಬೈಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು: ಸವದಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 16:50 IST
Last Updated 27 ಜನವರಿ 2021, 16:50 IST
ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ   

ಬೆಳಗಾವಿ: ‘ಮರಾಠಿ ಭಾಷಿಗರಿರುವ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಮಹಾಜನ್ ವರದಿಯೇ ಅಂತಿಮ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಜಿಲ್ಲೆಯ ರಾಯಬಾಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಗಡಿ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿರುವ ವ್ಯಾಜ್ಯದ ತೀರ್ಪು ನಮ್ಮ ಪರವಾಗಿಯೇ ಬರುತ್ತದೆ ಎಂಬ ವಿಶ್ವಾಸವಿದೆ. ಈ ಭಾಗದ ನಾವು ಮೊದಲಿನಿಂದಲೂ ಮುಂಬೈ ಕರ್ನಾಟಕದಲ್ಲಿ ಇದ್ದವರು. ಹೀಗಾಗಿ, ಮುಂಬೈ ಮೇಲೆ ನಮಗೆ ಹಕ್ಕು ಮತ್ತು ಪಾಲಿದೆ. ಆದ್ದರಿಂದ, ಮುಂಬೈನ ಕರ್ನಾಟಕಕ್ಕೆ ಸೇರಿಸಬೇಕೆಂದು ಈಗಿನಿಂದಲೇ ಬೇಡಿಕೆ ಇಡುತ್ತೇವೆ. ಅಲ್ಲಿವರೆಗೆ ಅದನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ’ ಎನ್ನುವ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿಗೆ ತಿರುಗೇಟು ನೀಡಿದರು.

‘ಮುಂಬೈನಲ್ಲೇ ಪಾಲು ಪಡೆದುಕೊಳ್ಳುತ್ತೇವೆ’ ಎಂದು ತಿಳಿಸಿದರು.

ADVERTISEMENT

‘ಖಾನಾಪುರದ ಎಂಇಎಸ್ ಮುಖಂಡ ಅರವಿಂದ ಪಾಟೀಲ ಎಲ್ಲೇ ಹೋಗಲಿ; ಏನೇ ಮಾಡಲಿ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಮುಗಿಸುವುದು ನಮ್ಮ ಕರ್ತವ್ಯ. ಅದಕ್ಕಾಗಿ ಆ ಸಂಘಟನೆಯಿಂದ ಯಾರಾರು ಬರುತ್ತಾರೋ ಅವರನ್ನೆಲ್ಲಾ ಬಿಜೆಪಿಗೆ ಕರೆದುಕೊಳ್ಳುತ್ತೇವೆ. ಈ ಮೂಲಕ ಎಂಇಎಸ್ ಅಧ್ಯಾಯ ಮುಗಿಸುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.