ADVERTISEMENT

ಚಿಕ್ಕೋಡಿ: ಇನ್ನೂ ಉದ್ಘಾಟನೆಯಾಗದ ಪುರಸಭೆ ಕಟ್ಟಡ

11 ಗುಂಟೆ ಜಾಗೆಯಲ್ಲಿ ₹ 2.50 ಕೋಟಿ ವೆಚ್ಚದಲ್ಲಿ ತಲೆಎತ್ತಿನಿಂತ ಪುರಸಭೆಯ ಹೈಟೆಕ್ ಕಟ್ಟಡ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2025, 7:11 IST
Last Updated 28 ಮಾರ್ಚ್ 2025, 7:11 IST
ಚಿಕ್ಕೋಡಿ ಪುರಸಭೆಯ ನೂತನ ಕಚೇರಿಯ ಕಟ್ಟಡ
ಚಿಕ್ಕೋಡಿ ಪುರಸಭೆಯ ನೂತನ ಕಚೇರಿಯ ಕಟ್ಟಡ   

ಚಿಕ್ಕೋಡಿ: ‘ಪಟ್ಟಣದ ಆದರ್ಶ ನಗರ (ದಕ್ಷಿಣ) ಬಡಾವಣೆಯಲ್ಲಿ 11 ಗುಂಟೆ ಜಾಗೆಯಲ್ಲಿ ₹ 2.50 ಕೋಟಿ ವೆಚ್ಚದಲ್ಲಿ ಎರಡು ಅಂತಸ್ತಿನ ಪುರಸಭೆಯ ನೂತನ ಕಟ್ಟಡ ನಿರ್ಮಾಣವಾಗಿ ಏಳು ವರ್ಷ ಕಳೆದರೂ ಇನ್ನೂ ಉದ್ಘಾಟನೆಯಾಗಿಲ್ಲ. ಇದರಿಂದ ಪುರಸಭೆ ಆಡಳಿತ, ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಗೆ ಮಾತ್ರವಲ್ಲದೇ ಸಾರ್ವಜನಿಕರಿಗೂ ಭ್ರಮನಿರಸನ ಉಂಟಾಗಿದೆ.

ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಚಿಕ್ಕೋಡಿ ಸಂಸದರಾಗಿದ್ದ ಸಂದರ್ಭದಲ್ಲಿ ಆಗಿನ ಕಾಂಗ್ರೆಸ್ ಸರ್ಕಾರದ ಮನವೊಲಿಸಿ, ಪುರಸಭೆ ನೂತನ ಕಚೇರಿ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸಿದ್ದರು. 2015ರಲ್ಲಿ ಕಟ್ಟಡ ಕಾಮಗಾರಿ ಶಂಕು ಸ್ಥಾಪನೆ ನೆರವೇರಿದ್ದು, ಸ್ಥಳೀಯ ಶಾಸಕ ಗಣೇಶ ಹುಕ್ಕೇರಿ ಹಾಗೂ ಪ್ರಕಾಶ ಹುಕ್ಕೇರಿ ಮುತುವರ್ಜಿಯಿಂದ ಮೂರು ವರ್ಷಗಳಲ್ಲಿ ಅಂದರೆ 2018ರಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡಿತು.

ಹಳೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪುರಸಭೆ ಕಚೇರಿ ಕಟ್ಟಡ ಶಿಥಿಲಗೊಂಡಿದ್ದು, ಕೆಲ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಇನ್ನು ಕೆಲವು ಕಡೆಗೆ ಸಿಮೆಂಟ್ ಚಾವಣಿ ಕಳಚಿ ಬೀಳುವ ಹಂತದಲ್ಲಿದೆ. ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಿತ್ತಿದ್ದಂತೆಯೇ ಪುರಸಭೆ ಕಚೇರಿಯಲ್ಲಿ ಹಲವು ವಿಭಾಗಗಳು ಹುಟ್ಟಿಕೊಂಡಿದ್ದು, 50 ವರ್ಷಗಳಿಂದ ಸಿಬ್ಬಂದಿ ಇಕ್ಕಟ್ಟಾದ ಜಾಗೆಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ.

ADVERTISEMENT

ದಿನದಿಂದ ದಿನಕ್ಕೆ ಪಟ್ಟಣ ಬೆಳೆಯುತ್ತಿದ್ದಂತೆಯೇ ಪ್ರಾದೇಶಿಕ ಸಾರಿಗೆ ಕಚೇರಿ, ಡಿಡಿಪಿಐ ಕಚೇರಿ, ಎಡಿಎಚ್‍ಒ ಕಚೇರಿ, ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಮುಂತಾದ ಸರ್ಕಾರಿ ಕಚೇರಿಗಳನ್ನು ಪಟ್ಟಣದಿಂದ 2 ಕಿ.ಮೀ ಗೂ ಹೆಚ್ಚು ದೂರದಲ್ಲಿ ನಿರ್ಮಿಸಿ ಸಾರ್ವಜನಿಕರಿಗೆ ಸೇವೆ ಒದಗಿಸಲಾಗುತ್ತಿದೆ. ಪುರಸಭೆಯ ನೂತನ ಕಟ್ಟಡ ಪಟ್ಟಣದ ಜನನಿಬಿಡ ಸ್ಥಳದಲ್ಲಿಯೇ ನಿರ್ಮಿಸಲಾಗಿದ್ದರೂ ಹಳೆಯ ಕಚೇರಿಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಿಲ್ಲದಿರುವುದು ಅನುಮಾನಕ್ಕೆ ಕಾರಣವಾಗಿದೆ.

ಬಹುತೇಕ ಸರ್ಕಾರಿ ಕಚೇರಿಗಳಿಗೆ ಪಟ್ಟಣದ ಹೊರವಲಯದಲ್ಲಿ (ಇದಕ್ಕಿಂತಲೂ ದೂರದ ಪ್ರದೇಶದಲ್ಲಿ) ನೂತನ ಕಟ್ಟಡ ನಿರ್ಮಿಸಲಾಗಿದೆ. ಪುರಸಭೆ ಕಚೇರಿ ಮಾತ್ರ ಹಳೆಯ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುತ್ತಿರುವುದು ಏಕೆ? ಅನುದಾನ ಸುರಿದು ಕಟ್ಟಡ ನಿರ್ಮಾಣ ಮಾಡಿದ್ದಾರೂ ಏಕೆ? ಕಾಮಗಾರಿ ಪೂರ್ಣಗೊಂಡರೂ ಉದ್ಘಾಟನೆ ಆಗದಿರುವುದನ್ನು ನೋಡಿದರೆ ಸರ್ಕಾರ, ಸ್ಥಳೀಯ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ ಎಂಬುವುದು ಪ್ರಜ್ಞಾವಂತ ನಾಗರಿಕರ ಪ್ರಶ್ನೆಯಾಗಿದೆ.

ಚಿಕ್ಕೋಡಿ ಪಟ್ಟಣದ ಮಧ್ಯ ಭಾಗದಲ್ಲಿರುವ ಪುರಸಭೆಯ ಹಳೆಯ ಕಟ್ಟಡ ಶಿಥಿಲಗೊಂಡಿದೆ
ಪುರಸಭೆ ಹಳೆಯ ಕಟ್ಟಡ ಇಕ್ಕಟ್ಟಾಗಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದಷ್ಟು ಬೇಗ ನೂತನ ಕಟ್ಟಡಕ್ಕೆ ಸ್ಥಳಾಂತರ ಮಾಡಿದರೆ ಅನುಕೂಲ
ಎಂ.ಆರ್. ಮುನ್ನೋಳಿಕರ ಪಟ್ಟಣದ ನಿವಾಸಿ
₹2.50 ಕೋಟಿ ವೆಚ್ಚ ಮಾಡಿ ನಿರ್ಮಿಸಿದ ಕಟ್ಟಡ 7 ವರ್ಷಗಳಿಂದ ಬಳಕೆಯಾಗದಿರುವುದು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ
ಸುದರ್ಶನ ತಮ್ಮಣ್ಣವರ ಕಾರ್ಯದರ್ಶಿ ಡಾ.ಬಿ.ಆರ್. ಅಂಬೇಡ್ಕರ್ ಜನಜಾಗೃತಿ ವೇದಿಕೆ
ಪುರಸಭೆ ನೂತನ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು ಹಳೆಯ ಕಟ್ಟಡದಲ್ಲಿರುವ ಕೆಲವು ವಿಭಾಗಗಳನ್ನು ಸಭೆಯಲ್ಲಿ ಚರ್ಚಿಸಿ ಸ್ಥಳಾಂತರ ಮಾಡಲಾಗುವುದು
ವೆಂಕಟೇಶ ನಾಗನೂರ ಮುಖ್ಯಾಧಿಕಾರಿ ಪುರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.